ಆರ್ಕಿಟೆಕ್ಚರ್​, ಫ್ಯಾಷನ್​ ಟೆಕ್ನಾಲಜಿ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಇನ್ನು ಪಿಸಿಎಂ ಕಡ್ಡಾಯವಲ್ಲ: ಎಐಸಿಟಿಇ

| Updated By: Lakshmi Hegde

Updated on: Mar 30, 2022 | 8:26 AM

12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಗಣಿತವನ್ನು ಅಧ್ಯಯನ ಮಾಡದೆ ಇರುವವರೂ ಕೂಡ ಪದವಿಯಲ್ಲಿ ಇಂಜಿನಿಯರಿಂಗ್​ ಮತ್ತು ಟೆಕ್ನಾಲಜಿ ಪ್ರೋಗ್ರಾಂ ಕೋರ್ಸ್​​ಗಳಿಗೆ ಪ್ರವೇಶ ಪಡೆಯಬಹುದು ಎಂದು ಕಳೆದವರ್ಷ ಎಐಸಿಟಿಇ ಹೇಳಿತ್ತು.

ಆರ್ಕಿಟೆಕ್ಚರ್​, ಫ್ಯಾಷನ್​ ಟೆಕ್ನಾಲಜಿ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಇನ್ನು ಪಿಸಿಎಂ ಕಡ್ಡಾಯವಲ್ಲ: ಎಐಸಿಟಿಇ
ಸಾಂಕೇತಿಕ ಚಿತ್ರ
Follow us on

ಆರ್ಕಿಟೆಕ್ಚರ್​ ಕೋರ್ಸ್​​​ಗಳಿಗೆ ಪ್ರವೇಶ ಪಡೆಯಲು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (Physics, chemistry and mathematics) ವಿಷಯಗಳನ್ನು ಅಭ್ಯಾಸ ಮಾಡಿರುವುದು ಕಡ್ಡಾಯವಲ್ಲ ಎಂದು ತಾಂತ್ರಿಕ ಶಿಕ್ಷಣ ನಿಯಂತ್ರಕ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ತಿಳಿಸಿದೆ. 2022-23ನೇ ಸಾಲಿನ ಅನುಮೋದನಾ ಆದೇಶವನ್ನು ಮಂಗಳವಾರ ಎಐಸಿಟಿಇ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದೆ. ಅಂದರೆ ಇನ್ನು ಮುಂದೆ ಆರ್ಕಿಟೆಕ್ಚರ್​ ಪದವಿಗೆ ಸೇರ್ಪಡೆಯಾಗುವವರು 12ನೇ ತರಗತಿಯಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದ ಸಂಯೋಜನೆ) ಅಭ್ಯಾಸ ಮಾಡಿರಲೇಬೇಕು ಎಂದೇನೂ ಇಲ್ಲ.

12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಗಣಿತವನ್ನು ಅಧ್ಯಯನ ಮಾಡದೆ ಇರುವವರೂ ಕೂಡ ಪದವಿಯಲ್ಲಿ ಇಂಜಿನಿಯರಿಂಗ್​ ಮತ್ತು ಟೆಕ್ನಾಲಜಿ ಪ್ರೋಗ್ರಾಂ ಕೋರ್ಸ್​​ಗಳಿಗೆ ಪ್ರವೇಶ ಪಡೆಯಬಹುದು ಎಂದು ಕಳೆದವರ್ಷ ಎಐಸಿಟಿಇ ಹೇಳಿತ್ತು. ಅದೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅನೇಕರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪ್ರಸಕ್ತ ಸಾಲಿನಲ್ಲೂ ಕೆಲವು ಕೋರ್ಸ್​​ಗಳಿಗೆ ಪಿಸಿಎಂನಿಂದ ವಿನಾಯಿತಿ ನೀಡಲಾಗಿದೆ. ಆರ್ಕಿಟೆಕ್ಚರ್ ಕೋರ್ಸ್​ ಮಾತ್ರವಲ್ಲ ಜತೆಗೆ ಫ್ಯಾಷನ್​ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್​ ಟೆಕ್ನಾಲಜಿ ಕೋರ್ಸ್​​ಗಳ ಪ್ರವೇಶಕ್ಕೂ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಅಭ್ಯಾಸ ಮಾಡಿರುವುದು ಕಡ್ಡಾಯವಲ್ಲ ಎಂದು ಹೇಳಿದೆ.

ಯಾವ ಪದವಿಗಳಿಗೆ ಪಿಸಿಎಂ ಕಡ್ಡಾಯ ಮಾಡಬಹುದು ಮತ್ತು ಐಚ್ಛಿಕ ಮಾಡಬಹುದು ಎಂಬುದನ್ನು ಪರಿಶೀಲನೆ ಮಾಡಲು ನಾವು ಒಂದು ತಜ್ಞರ ಸಮಿತಿ ರಚನೆ ಮಾಡಿದ್ದೇವೆ. ಈ ಸಮಿತಿಯ ಶಿಫಾರಸ್ಸಿನ ಅನ್ವಯ ಮೂರು ಕೋರ್ಸ್​​ಗಳಿಗೆ ಪಿಸಿಐ ಐಚ್ಛಿಕ ಮಾಡಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ತಿಳಿಸಿದ್ದಾರೆ. ಆರ್ಕಿಟೆಕ್ಚರ್, ಫ್ಯಾಷನ್​ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್​ ಟೆಕ್ನಾಲಜಿ  ಕೋರ್ಸ್​​ಗಳಿಗೆ ಪಿಸಿಎಂ ಕಡ್ಡಾಯವಲ್ಲ. ಹಾಗಂತ ಅದನ್ನು ಮಾಡಿದವರಿಗೂ ಪ್ರವೇಶ ಸಿಗುತ್ತದೆ. ಇವುಗಳನ್ನು ಹೊರತು ಪಡಿಸಿ ಯಾವೆಲ್ಲ ವಿಷಯ ಅಧ್ಯಯನ ಮಾಡಿದವರಿಗೆ ಈ ಮೂರು ಕೋರ್ಸ್​ಗಳಿಗೆ ಪ್ರವೇಶ ಸಿಗಲಿದೆ ಎಂಬುದನ್ನು ಎಐಸಿಟಿಇ ತಿಳಿಸಿದ್ದು ಅವು ಹೀಗಿವೆ:  ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಾನಿಕ್ಸ್​, ಇನ್​ಫಾರ್ಮೇಶನ್​ ಟೆಕ್ನಾಲಜಿ, ಬಯಾಲಜಿ, ಇನ್​​ಫಾರ್ಮೇಟಿಕ್​ ಪ್ರ್ಯಾಕ್ಟೀಸ್​, ಬಯೋಟೆಕ್ನಾಲಜಿ, ತಾಂತ್ರಿಕ ವೃತ್ತಿಪರ ವಿಷಯ, ಎಂಜಿನಿಯರಿಂಗ್ ಗ್ರಾಫಿಕ್ಸ್, ವ್ಯಾಪಾರ ಅಧ್ಯಯನಗಳು ಮತ್ತು ಉದ್ಯಮಶೀಲತೆ. ಈ ವಿಷಯಗಳಲ್ಲಿ ಯಾವುದೇ ಮೂರು ವಿಷಯಗಳ ಅಧ್ಯಯನ ಮಾಡಿದವರು ಆರ್ಕಿಟೆಕ್ಚರ್, ಫ್ಯಾಷನ್​ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್​ ಟೆಕ್ನಾಲಜಿಗೆ ಪ್ರವೇಶ ಪಡೆಯಬಹುದು.

ಇದನ್ನೂ ಓದಿ: ಲಾಭ ಮಾಡುವಲ್ಲಿ ‘ಉರಿ’ ಸಿನಿಮಾವನ್ನೂ ಮೀರಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಇಲ್ಲಿದೆ ಲೆಕ್ಕಾಚಾರ

Published On - 8:09 am, Wed, 30 March 22