Supreme Court: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

|

Updated on: Mar 27, 2023 | 2:22 PM

2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

Supreme Court: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಅನುಮತಿ
Follow us on

ದೆಹಲಿ: ಐದು ಹಾಗೂ ಎಂಟನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ (Karnataka High Court) ನೀಡಿದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ (Supreme Court) ಪರೀಕ್ಷೆಗೆ ಅನುಮತಿ ನೀಡಿ ಆದೇಶಿಸಿದೆ. 2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ (Board exams) ನಡೆಸಲು ಕರ್ನಾಟಕ ಶಾಲಾ ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯನಿರ್ಣಯ ಮಂಡಳಿ ಮುಂದಾಗಿತ್ತು. ಅದರಂತೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್​ನಿಂದ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅದರಂತೆ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಪರೀಕ್ಷೆ ನಡೆಸದಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ ಮಾರ್ಚ್ 16ರಂದು ಆದೇಶ ಹೊರಡಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದು ಹೇಳಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿತ್ತು. ಅಲ್ಲದೆ, ಮಾರ್ಚ್ 27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ಸೂಚನೆ ನೀಡಿತ್ತು.

ಇದನ್ನು ಪ್ರಶ್ನಿಸಿ ರುಪ್ಸಾ, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ಗೆ ಮನವಿ ಮಾಡಿತ್ತು. ಆದರೆ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಮತ್ತು ತುರ್ತು ವಿಚಾರಣೆ ನಡೆಸಲು ಸಿಜೆಐ ನಿರಾಕರಿಸಿದ್ದು, ಮಾರ್ಚ್ 27ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ನಡೆದ ವಿಚಾರಣೆ ವೇಳೆ ಕೋರ್ಟ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

ಇದನ್ನೂ ಓದಿ: Public Exam 2023: ಸುಪ್ರೀಂಕೋರ್ಟ್ ವಿಚಾರಣೆ ನಡುವೆಯೇ ಇಂದಿನಿಂದ 5 ಮತ್ತು 8ನೇ ತರಗತಿ ಬೋರ್ಡ್‌ ಪರೀಕ್ಷೆ ಆರಂಭ

ಪರೀಕ್ಷೆ ಸಂಬಂಧ ಇಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದಾಗಲೇ ಇಂದು ಪರೀಕ್ಷೆ ಆರಂಭಗೊಂಡಿದೆ. ಆಯಾ ಶಾಲೆಗಳೇ ಪರೀಕ್ಷಾ ಕೇಂದ್ರಗಳಾಗಿದ್ದು, ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಬಹುತೇಕ ಎಲ್ಲ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಡೆದಿವೆ.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತದೆ. ಪ್ರತಿ ವಿಷಯದ ಮೌಲ್ಯಂಕನಕ್ಕೆ ಎರಡು ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ 1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು ಪ್ರತ್ಯಕ ಪ್ರಶ್ನೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. 10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ. 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Mon, 27 March 23