
ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದಾತ್ತ ಉದ್ದೇಶದಿಂದ ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್ ಗ್ರೂಪ್ (WCCLG) ಹಾಗೂ ವಿಪ್ರೋ ಸಮೂಹ ಸಂಸ್ಥೆಯ ‘ವಿಪ್ರೋ ಕೇರ್ಸ್’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27′ ರ ನೂತನ ಅಧಿಸೂಚನೆ ಬಿಡುಗಡೆಯಾಗಿದೆ. ಪಿಯುಸಿ ಪೂರ್ಣಗೊಳಿಸಿ ಪ್ರಸ್ತುತ ಪದವಿಯ (Degree) ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿನಿಯರು ಈ ಉದ್ಯೋಗ-ಶಿಕ್ಷಣ ನೆರವಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಬಾರಿಯ ಹೊಸ ಅರ್ಜಿಗಳಿಗೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಮುಖ್ಯವಾಗಿ ಪರಿಗಣಿಸಲಾಗಿದ್ದರೂ, ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರಮುಖ ಸಿಹಿಸುದ್ದಿಯೊಂದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದ ಸಂತೂರ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ಹೆಣ್ಣುಮಕ್ಕಳು, ಅರ್ಹತಾ ಮಾನದಂಡಗಳ ಪ್ರಕಾರ ತಮ್ಮ ಇಡೀ ಪದವಿ ಶಿಕ್ಷಣ (Undergraduate Course) ಪೂರ್ಣಗೊಳ್ಳುವವರೆಗೆ ಈ ಆರ್ಥಿಕ ನೆರವಿನ ಪ್ರಯೋಜನವನ್ನು ನಿರಂತರವಾಗಿ ಪಡೆಯಲಿದ್ದಾರೆ. ಇದು ರಾಜ್ಯದ ಬಡ ಕುಟುಂಬದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ದೊಡ್ಡ ಆಸರೆಯಾಗಲಿದೆ.
ಆಯ್ಕೆಯಾಗುವ ಪ್ರತಿಯೊಬ್ಬ ವಿದ್ಯಾರ್ಥಿನಿಗೆ 30,000 ರೂ. ಗಳ ಒಂದು ಬಾರಿಯ (One-time) ಆರ್ಥಿಕ ನೆರವನ್ನು ನೇರವಾಗಿ ಒದಗಿಸಲಾಗುತ್ತದೆ. ಈ ಹಣವನ್ನು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳಲು ಅವಕಾಶವಿದ್ದು, ಕಾಲೇಜು ಬೋಧನಾ ಶುಲ್ಕ, ಹಾಸ್ಟೆಲ್ ಮತ್ತು ಊಟದ ವೆಚ್ಚಗಳು, ದಿನನಿತ್ಯದ ಪ್ರಯಾಣ ವೆಚ್ಚಗಳು, ಪುಸ್ತಕಗಳು, ಲೇಖನ ಸಾಮಗ್ರಿಗಳು ಹಾಗೂ ಡಿಜಿಟಲ್ ಸಾಧನಗಳ ಖರೀದಿಗೆ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಗ್ರಾಮೀಣ ಹಿನ್ನೆಲೆಯವರಾಗಿರಬೇಕು. 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿಯೇ ಪೂರ್ಣಗೊಳಿಸಿರಬೇಕು. ಅಲ್ಲದೆ, 2025-26ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿ, ಪ್ರಸ್ತುತ ಕನಿಷ್ಠ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಯಾವುದೇ ಮಾನ್ಯತೆ ಪಡೆದ ಪದವಿ ಕೋರ್ಸ್‌ನ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.
ಅರ್ಹ ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳು ಮತ್ತು ನಿಯಮಗಳನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ