AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು 86 ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. SSLC ಮತ್ತು PUC ಪೂರ್ಣಗೊಳಿಸಿದ ಅಭ್ಯರ್ಥಿಗಳು ಜವಾನ, ಆದೇಶ ಜಾರಿಕಾರ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್ 06 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಕರ್ಷಕ ವೇತನ ಶ್ರೇಣಿ ನಿಗದಿಯಾಗಿದೆ. ಇದು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
ನ್ಯಾಯಾಲಯ ನೇಮಕಾತಿImage Credit source: Getty Images
ಅಕ್ಷತಾ ವರ್ಕಾಡಿ
|

Updated on:Oct 08, 2026 | 3:30 PM

Share

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆತಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 86 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. 10ನೇ ತರಗತಿ (SSLC) ಹಾಗೂ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಖಾಲಿ ಇರುವ ಹುದ್ದೆಗಳು ಮತ್ತು ಲಭ್ಯವಿರುವ ಸೀಟುಗಳು:

ಈ ನೇಮಕಾತಿ ಅಭಿಯಾನದ ಮೂಲಕ ಸಂಸ್ಥೆಯು ಜವಾನ (Peon), ಆದೇಶ ಜಾರಿಕಾರ (Process Server), ಬೆರಳಚ್ಚುಗಾರ (Typist) ಹಾಗೂ ನಕಲು-ಬೆರಳಚ್ಚುಗಾರ (Typist-Copyist) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಒಟ್ಟು 86 ಹುದ್ದೆಗಳ ಪೈಕಿ ಜವಾನ ಹುದ್ದೆಗೆ 36, ಆದೇಶ ಜಾರಿಕಾರ ಹುದ್ದೆಗೆ 24, ಬೆರಳಚ್ಚುಗಾರ ಹುದ್ದೆಗೆ 08 (2 ಬ್ಯಾಕ್‌ಲಾಗ್ ಸೇರಿದಂತೆ) ಮತ್ತು ನಕಲು-ಬೆರಳಚ್ಚುಗಾರ ಹುದ್ದೆಗೆ 18 ಖಾಲಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

ಮಾಸಿಕ ವೇತನ ಶ್ರೇಣಿಯ ವಿವರಗಳು:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಜವಾನ ಹುದ್ದೆಗೆ ಮಾಸಿಕ 27,000 ರಿಂದ 46,675 ರೂ. ವರೆಗೆ, ಆದೇಶ ಜಾರಿಕಾರ ಹುದ್ದೆಗೆ 31,775 ರಿಂದ 61,300ರೂ. ವರೆಗೆ ಹಾಗೂ ಬೆರಳಚ್ಚುಗಾರ ಮತ್ತು ನಕಲು-ಬೆರಳಚ್ಚುಗಾರ ಹುದ್ದೆಗಳಿಗೆ 34,100 ರಿಂದ 67,600 ರೂ. ವರೆಗೆ ವೇತನ ಸಿಗಲಿದೆ.

ಶೈಕ್ಷಣಿಕ ವಿದ್ಯಾರ್ಹತೆಯ ಮಾನದಂಡಗಳು:

ಜವಾನ ಹುದ್ದೆಗೆ SSLC ತೇರ್ಗಡೆಯಾಗಿದ್ದು, ಕನ್ನಡ ಓದಲು-ಬರೆಯಲು ಬರಬೇಕಾಗುತ್ತದೆ. ಆದೇಶ ಜಾರಿಕಾರ ಹುದ್ದೆಗೆ SSLC ಯೊಂದಿಗೆ ಚಾಲನಾ ಚೀಟಿ (HVM/LVM) ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಬೆರಳಚ್ಚುಗಾರ ಮತ್ತು ನಕಲು-ಬೆರಳಚ್ಚುಗಾರ ಹುದ್ದೆಗಳಿಗೆ 2ನೇ PUC ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಜೊತೆಗೆ ಕ್ರಮವಾಗಿ ಹಿರಿಯ ಶ್ರೇಣಿ (Senior Grade) ಹಾಗೂ ಕಿರಿಯ ಶ್ರೇಣಿ (Junior Grade) ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಪರೀಕ್ಷೆ ಪಾಸಾಗಿರಬೇಕು. ಪ್ರತಿಯೊಬ್ಬ ಅಭ್ಯರ್ಥಿಗೂ ಕಂಪ್ಯೂಟರ್ ಬಳಕೆ ಜ್ಞಾನ ಇರುವುದು ಕಡ್ಡಾಯ.

ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಿತಿ ಮತ್ತು ವಿಶೇಷ 5 ವರ್ಷಗಳ ಸಡಿಲಿಕೆ:

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಈ ಬಾರಿ ಸರ್ಕಾರವು ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಿಶೇಷ ಸಡಿಲಿಕೆ ಘೋಷಿಸಿದೆ. ಇದರಿಂದಾಗಿ ಸಾಮಾನ್ಯ ವರ್ಗದವರಿಗೆ 40 ವರ್ಷ, ಪ್ರವರ್ಗ 2A/2B/3A/3B ಅಭ್ಯರ್ಥಿಗಳಿಗೆ 43 ವರ್ಷ ಹಾಗೂ SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆತಿದೆ.

ಅರ್ಜಿ ಶುಲ್ಕ ಮತ್ತು ಆನ್‌ಲೈನ್ ಸಲ್ಲಿಕೆ ಪ್ರಕ್ರಿಯೆ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 200 ರೂ. ಹಾಗೂ ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 100ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. SC, ST, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆಸಕ್ತರು ಅಕ್ಟೋಬರ್ 07 ರಿಂದ ನವೆಂಬರ್ 06 ರವರೆಗೆ ಅಧಿಕೃತ ವೆಬ್‌ಸೈಟ್ bengalururural.dcourts.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:03 pm, Thu, 8 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More