ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ

|

Updated on: Dec 03, 2023 | 8:09 PM

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇಂದಿನ ಹ್ಯಾಟ್ರಿಕ್​ ಗೆಲುವು 2024ರ ಲೋಕಸಭೆಯಲ್ಲೂ ಹ್ಯಾಟ್ರಿಕ್​ ಗೆಲುವಿಗೆ ಮುನ್ಸೂಚನೆ ನೀಡಿದೆ. ಆ ಮೂಲಕ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ, ಡಿಸೆಂಬರ್​​​ 03: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) 4 ರಾಜ್ಯಗಳ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿಯಾಗಿದೆ. ಆ ಮೂಲಕ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಮತದಾರರು ಪ್ರಬುದ್ಧತೆ ಹೊಂದಿರುವುದನ್ನು ಇಡೀ ವಿಶ್ವ ನೋಡ್ತಿದೆ. ಈ ಗೆಲುವು ವಿಶ್ವದ ಭರವಸೆ ಮತ್ತಷ್ಟು ಹೆಚ್ಚಿಸಿದೆ. ದೇಶದ ಮತದಾರರು ಸ್ವಹಿತ, ಜನಹಿತ ಮತ್ತು ರಾಷ್ಟ್ರಹಿತವನ್ನು ನೋಡುತ್ತಾರೆ ಎಂದು ಹೇಳಿದ್ದಾರೆ.

ನಾರಿಶಕ್ತಿಯ ವಿಕಾಸವೇ ಬಿಜೆಪಿಯ ಆಧಾರಸ್ತಂಭ

ನಾರಿಶಕ್ತಿಯ ವಿಕಾಸವೇ ಬಿಜೆಪಿಯ ಆಧಾರಸ್ತಂಭವಾಗಿದೆ. ನಿಮಗೆ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಇದು ಮೋದಿಯ ಕೇವಲ ಗ್ಯಾರಂಟಿ ಅಲ್ಲ, ಪೂರ್ಣಗೊಳಿಸುವ ಗ್ಯಾರಂಟಿ. ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಉತ್ತಮ ಗೆಲುವು ಸಾಧಿಸಿದೆ. ತಾಯಂದಿರು, ಯುವಕರು, ಬಡವರು ಒಳ್ಳೆ ನಿರ್ಣಯ ತೆಗೆದುಕೊಂಡಿದ್ದಾರೆ. ಅವರಿಗೆ ನನ್ನ ಮನಪೂರ್ವಕ ನಮಸ್ಕಾರಗಳು. ದೇಶದಲ್ಲಿ ನನ್ನ ಪ್ರಕಾರ 4 ಜಾತಿಗಳು ಮಾತ್ರ ದೊಡ್ಡದಾಗಿವೆ. ಮಹಿಳಾ ಶಕ್ತಿ, ಯುವಶಕ್ತಿ, ರೈತರು, ಹಾಗೂ ಬಡವರ್ಗ. ಈ ನಾಲ್ಕು ಜಾತಿಗಳ ಸಶಕ್ತಿಕರಣದಿಂದ ದೇಶ ಅಭಿವೃದ್ಧಿ ಹೊಂದಲಿದೆ.

ಇದನ್ನೂ ಓದಿ: Assembly Election Results 2023 LIVE: ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಮೊದಲ ಬಾರಿ ವೋಟ್​ ಮಾಡಿದವರು ನನ್ನ ಮೊದಲ ಮತ ಗೆಲುವು ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸ್ತ್ರೀಶಕ್ತಿ ಬಗ್ಗೆ ಚುನಾವಣಾ ರ‍್ಯಾಲಿಯಲ್ಲಿ ಪದೇಪದೆ ಕೆಲವು ವಿಚಾರಗಳನ್ನು ನಾನು ಪ್ರಸ್ತಾಪಿಸಿದ್ದೆ. ನಾರಿ ಸಮ್ಮಾನ್, ಸುರಕ್ಷತೆ ಇದು ಬಿಜೆಪಿಯ ಗ್ಯಾರಂಟಿ ಆಗಿದೆ. ಬಿಜೆಪಿ ದೇಶದ ಯುವಜನತೆ ಹಿತಕ್ಕಾಗಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಆದಿವಾಸಿ ಸಮಾಜಕ್ಕೆ ಅನೇಕ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.

ಆದಿವಾದಿ ಸಮುದಾಯ ಇಂದು ತನ್ನ ಅಭಿವೃದ್ದ್ಧಿಗಾಗಿ ಹವಣಿಸುತ್ತಿದೆ. ಬಿಜೆಪಿಯಿಂದ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯವೆಂದು ಸಾಬೀತುಪಡಿಸಿದ್ದಾರೆ. ಡಬಲ್​ ಇಂಜಿನ್ ಸರ್ಕಾರ ಇರುವ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ರಾಜಕೀಯ ಜೀವನದಲ್ಲಿ ಸುಳ್ಳು ಆಶ್ವಾಸನೆ ಎಂದೂ ನೀಡಿಲ್ಲ ಮತ್ತು ನೀಡಲ್ಲ ಎಂದಿದ್ದಾರೆ.

ಇದನ್ನೂ ಓದಿ: Madhya Pradesh Election 2023 Results: ಮಧ್ಯಪ್ರದೇಶದಲ್ಲಿ ನಾಲ್ಕನೇ ಬಾರಿ ಬಿಜೆಪಿ ಅಧಿಕಾರಕ್ಕೆ, ಧೂಳಿಪಟವಾದ ಕಾಂಗ್ರೆಸ್​

ರಾಜಸ್ಥಾನದ ಜನರ ಮೇಲೆ ಬಹಳ ವಿಶ್ವಾಸವಿತ್ತು, ಅದರಂತೆ BJP ಗೆಲ್ಲಿಸಿದ್ದಾರೆ. ಛತ್ತೀಸಗಢ್​ನಲ್ಲಿ ಮೊದಲ ಪ್ರಚಾರ ಸಭೆಯಲ್ಲಿ ನಾನು ಹೇಳಿದ್ದೆ. ನಾನು ನಿಮಗೆ ಪ್ರಮಾಣಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದೇನೆ. ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಮತ್ತಷ್ಟು ಪ್ರಬಲಗೊಂಡಿದೆ. ತೆಲಂಗಾಣದ ಅಭಿವೃದ್ಧಿಯನ್ನು ನಾವು ಮುಂದುವರಿಸುತ್ತೇವೆ. ಅಲ್ಲಿಯ ಜನರ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಪ್ರಧಾನಿ ಮೋದಿ

ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಪ್ರಧಾನಿ ಮೋದಿ, ವಂದೇ ಭಾರತ್ ರೈಲಿಗೆ ಚಾಲನೆ ನೀಡಿದಾಗ ಕಾಂಗ್ರೆಸ್​ ವ್ಯಂಗ್ಯವಾಡಿತ್ತು. ಆಯುಷ್ಮಾನ್ ಭಾರತ ಯೋಜನೆ, ಬಡವರಿಗೆ ಮನೆ ನಿರ್ಮಿಸಿ ಕೊಟ್ಟಾಗ ಬಿಜೆಪಿ ಯೋಜನೆಗಳ ಬಗ್ಗೆ ಕಾಂಗ್ರೆಸ್​ನವರು ವ್ಯಂಗ್ಯವಾಡಿದ್ದರು. ಕಾಂಗ್ರೆಸ್​ & ಅದರ ಅಂಗಪಕ್ಷಗಳಿಗೆ ನಾನು ವಿನಮ್ರತೆಯಿಂದ ಮನವಿ ಮಾಡ್ತೇನೆ ದೇಶವಿರೋಧಿ ಚಟುವಟಿಕೆ ಮತ್ತು ದೇಶ ಇಬ್ಭಾಗಿಸುವ ಜನರಿಗೆ ಬೆಂಬಲ ನೀಡಬೇಡಿ. ಇಂದು ಭಾರತದ ನಿವಾಸಿಗಳ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಭಾರತ ಎಲ್ಲ ಕ್ಷೇತ್ರಗಳಲ್ಲೂ ಇಂದು ಅಭಿವೃದ್ಧಿಯನ್ನು ಹೊಂದುತ್ತಿದೆ ಎಂದಿದ್ದಾರೆ.

INDIA ಒಕ್ಕೂಟದ ವಿರುದ್ಧ ವಾಗ್ದಾಳಿ

ದೇಶದಲ್ಲಿ ಇಂದು ಅನೇಕ ಹೊಸ ರೈಲು ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ನನ್ನ ಟ್ರ್ಯಾಕ್ ರೆಕಾರ್ಡ್​ ಮೇಲೆ ಮಾತನಾಡುತ್ತೇನೆ. ಇಂದು ದೇಶದಲ್ಲಿ 5ಜಿ ನೆಟ್​ವರ್ಕ್​ ಇದೆ. ಬಿಜೆಪಿ ಸರ್ಕಾರದಲ್ಲಿ 4 ಕೋಟಿ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಪ್ರತಿ ಮನೆಗೆ ನಲ್ಲಿ ನೀರು ಪೂರೈಕೆ ಯೋಜನೆ ಮುಂದುವರಿದಿದೆ. ಇಂದು ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮಾರಣೆ. ಮೋದಿಯ ಗ್ಯಾರಂಟಿ ವಾಹನ ನಮ್ಮ ಹಳ್ಳಿಗೂ ಬರುತ್ತಿದೆ ಎನ್ನುತ್ತಿದ್ದಾರೆ. ದೇಶವನ್ನು ಒಡೆಯುವ ವಿನಾಶಕಾರಿ ಶಕ್ತಿಗಳು ಮತ್ತೆ ಒಗ್ಗೂಡುತ್ತಿದ್ದಾರೆ ಎಂದು ಪರೋಕ್ಷವಾಗಿ INDIA ಒಕ್ಕೂಟದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sun, 3 December 23