ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಕಣ ರಂಗೇರಿದ್ದು, ನಾಳೆ(ಮೇ.10) ಮತದಾನ ನಡೆಯಲಿದೆ. ಜೊತೆಗೆ ನಿನ್ನೆ(ಮೇ.8) ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ಮಧ್ಯೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ(Bangalore South constituency) ಚಿಕ್ಕಲಸಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಆರ್.ಕೆ.ರಮೇಶ್ ಮತ್ತು ಬಿಜೆಪಿ ಅಭ್ಯರ್ಥಿ ಆಗಿರುವ ಎಂ.ಕೃಷ್ಣಪ್ಪ ಅವರ ಕಾರ್ಯಕರ್ತರ ನಡುವೆ ಜಟಾಪಟಿ ಶುರುವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಿಂದ ಕೈ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಕೂಡ ಕೇಳಿಬಂದಿದ್ದು, ಘಟನೆಯಿಂದ ಬಿಗುವಿನ ಸ್ಥಿತಿ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯಪುರ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ನಿಂದ ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮರದ ಬುಡದಲ್ಲಿ ಇದ್ದ ಬ್ಯಾಗ್ನಲ್ಲಿ 3 ಲಕ್ಷ ರೂ. ಪತ್ತೆ
ಹೌದು ಮನೆ ಅಷ್ಟೇ ಅಲ್ಲದೆ ರಸ್ತೆ ಪಕ್ಕದೆಲ್ಲೆಲ್ಲ ಪೊಲೀಸರು ಹುಡುಕಾಡಿದ್ದು, ಈ ವೇಳೆ ಮರದ ಬುಡದಲ್ಲಿ ಬ್ಯಾಗ್ವೊಂದು ಪತ್ತೆಯಾಗಿದ್ದು, ಅದರಲ್ಲಿ ಬರೊಬ್ಬರಿ 3 ಲಕ್ಷದಷ್ಟು ಹಣ ಸಿಕ್ಕಿದೆ. ನಂತರ ಕೆಲ ಕೈ, ಕಮಲ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ತಮಿಳುನಾಡಿನಿಂದ ಕೈ ಕಾರ್ಯಕರ್ತರು ಬಂದು ಹಣ ಹಂಚುತ್ತಿದ್ದಾರೆಂದು ಬಿಜೆಪಿ ಆರೋಪಿಸಿದ್ದರು. ಬಳಿಕ ದೂರಿನ ಮೇಲೆ ಪೊಲೀಸರು ಬರ್ತಿದ್ದಂತೆ ಹಣ ಎಸೆದು ಪರಾರಿಯಾಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ನಿಂದ ಬೀದಿ ಬೀದಿಯಲ್ಲೂ ಹುಡುಕಾಟ ಮಾಡಿದ್ದು, ಕೆಲ ತಮಿಳುನಾಡಿನ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:IT Raid:ಬೆಂಗಳೂರು ಸೇರಿದಂತೆ ದೇಶದ 22 ಕಡೆಗಳಲ್ಲಿ ಐಟಿ ದಾಳಿ
ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ ಮನೆಯಂಗಳದಲ್ಲಿದ್ದ ಗಿಡದಲ್ಲಿ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳಿಗೆ ಈ ನಗದು ಪತ್ತೆಯಾಗಿತ್ತು. ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಎಂದು ತಿಳಿದುಬಂದಿತ್ತು. ಹಣವನ್ನು ಮನೆಯಲ್ಲಿಟ್ಟರೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದಾಗ ಸಿಗಬಹುದೆಂದು ಮನೆಯಂಗಳದ ಗಿಡದಲ್ಲಿ ಇಡಲಾಗಿತ್ತು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ