DK Shivakumar: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

|

Updated on: Apr 04, 2023 | 10:07 PM

ಕಾಂಗ್ರೆಸ್ ನಾಯಕ ಮತ್ತು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್​ ವಿರುದ್ಧ ಬಿಜೆಪಿ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ರಾಜ್ಯ ಎಸ್​ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದಾರೆ.

DK Shivakumar: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು
ಪ್ರಾತಿನಿಧಿಕ ಚಿತ್ರ
Image Credit source: indiatoday.in
Follow us on

ಬೆಂಗಳೂರು: ಕಾಂಗ್ರೆಸ್ ನಾಯಕ ಮತ್ತು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್​ (DK Shivakumar) ವಿರುದ್ಧ ಬಿಜೆಪಿ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಪೆನ್ ಹಿಡಿದು ದೇಶದ ಭವಿಷ್ಯ ಉಜ್ವಲಗೊಳಿಸಬೇಕಾದ ಯುವಕರಿಗೆ ಆಯುಧಗಳನ್ನು ನೀಡಿ ಅವರ ಭವಿಷ್ಯವನ್ನು ಬಿಜೆಪಿ ಹೇಗೆ ಹಾಳುಗೆಡವಿದೆ ಎನ್ನುವುದಕ್ಕೆ ನಿನ್ನೆ ಸಾತನೂರಿನ ಬಳಿ ನಡೆದ ಘಟನೆಯೇ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ಈ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಎಸ್​ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯ ವಕೀಲ ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೊಡಗಟ್ಟ ದೂರು ನೀಡಿದ್ದಾರೆ. ಜೊತೆಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ, ಒಂದು ಜನಾಂಗದ ಮತದಾರರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಚುನಾವಣೆ ಸಂದರ್ಭದಲ್ಲಿ ಆಧಾರರಹಿತವಾಗಿ ಗಂಭೀರ ಆರೋಪ ಮಾಡಿದ್ದು, ಇದರ ಹಿಂದೆ ಮತದಾರರ ಮೇಲೆ ಪ್ರಭಾವ ಬೀರುವ ಸಂಚು ಇದೆ ಎಂದು ಗಮನ ಸೆಳೆಯಲಾಗಿದೆ.

ಇದನ್ನೂ ಓದಿ: ಸಾತನೂರಿನಲ್ಲಿ ಮುಸ್ಲಿಂ ಯುವಕನ ಬಳಿ 2 ಲಕ್ಷ ನೀಡುವಂತೆ ಪೀಡಿಸಿ ನಂತರ ಕೊಂದಿದ್ದಾರೆ: ಡಿಕೆ ಶಿವಕುಮಾರ್ ಆರೋಪ

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ನೇರ ಹೊಣೆ

ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ಹಿಂದೂ ಕಾರ್ಯಕರ್ತರ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದ ವ್ಯಕ್ತಿಯ ನಿಗೂಢ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ನೇರ ಹೊಣೆ ಎಂದು ಡಿಕೆ ಶಿವಕುಮಾರ್​ ಆರೋಪಿಸಿದ್ದರು. ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ಇರ್ಗೀಷ್ ಪಾಷಾ ಅನುಮಾನಸ್ಪದ ಸಾವಿನ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಾತನೂರಿನಲ್ಲಿ ನೈತಿಕ ಪೊಲೀಸ್​ಗಿರಿ ನೆಪದಲ್ಲಿ ಕೊಲೆ ನಡೆದಿದೆ​​. ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.

ಹತ್ಯೆಯಾದ ವ್ಯಕ್ತಿ ಬಳಿ 2 ಲಕ್ಷ ನೀಡುವಂತೆ ಪೀಡಿಸಿ ಕೊಂದಿದ್ದಾರೆ. ನಿಮ್ಮ ಕಾರ್ಯಕರ್ತ, ಸಹಪಾಠಿಯೇ ಕೊಲೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಖಂಡನೀಯ. ಕೊಲೆಗಾರರನ್ನು ಕೂಡಲೇ ಬಂಧಿಸದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ರಾಮನಗರ: ಕಸಾಯಿಖಾನೆಗೆ ಜಾನುವಾರು ಸಾಗಾಟ ವಾಹನದ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ನಿಗೂಢ ಸಾವು

ಘಟನೆ ಹಿನ್ನೆಲೆ

ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರ ದಾಳಿಗೆ ಹೆದರಿ ಪರಾರಿಯಾಗಿದ್ದ ವಾಹನದಲ್ಲಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ. ಮಂಡ್ಯ ಜಿಲ್ಲೆ ಮಳವಳ್ಳಿಯ ಇರ್ಗೀಷ್ ಪಾಷಾ (35) ಸಾವನ್ನಪ್ಪಿದ ವ್ಯಕ್ತಿ. ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಇರ್ಗೀಷ್ ಪಾಷಾ ಶವ ಪತ್ತೆಯಾಗಿತ್ತು. ಆಕ್ರೋಶಗೊಂಡ ಕುಟುಂಬಸ್ಥರು ಸಾತನೂರು ಠಾಣೆ ಬಳಿ ಪ್ರತಿಭಟನೆ ನಡೆಸಿ ಇರ್ಗೀಷ್ ಪಾಷಾ ಸಾವಿಗೆ ಪುನೀತ್ ಕೆರೆಹಳ್ಳಿ ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ, ಕೂಡಲೇ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:06 pm, Tue, 4 April 23