ಮಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ. ನಿನ್ನೆಯಷ್ಟೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬೊಮ್ಮಾಯಿ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಅವರು “ಬಹುಮತದ ಸರ್ಕಾರ ಬರಬೇಕು, ಹಿಂದೂ ಧರ್ಮ ಉಳಿಯಬೇಕು” ಎಂದು ಹೇಳಿದ್ದಾರೆ. ಇದಕ್ಕೆ “ಅರ್ಚಕರ ಮಾತಿಗೆ ನಾನೇನು ಮಾಡಬೇಕು” ಅಂತಾ ಹೇಳಿದ ಸಿಎಂ ಬೊಮ್ಮಾಯಿ ಮುಗುಳ್ನಕ್ಕರು.
ಟಿಕೆಟ್ ಕೈತಪ್ಪಿದ ಹಿನ್ನೆಲೆ ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿದ್ದು, ಇಂದು ಬೆಂಬಲಿಗರ ಬೃಹತ್ ಸಭೆ ಕರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಲಕ್ಷ್ಮಣ ಸವದಿ ಅವರು ಆತುರದ ನಿರ್ಧಾರ ಕೈಗೊಳ್ಳಬಾರದು ಎಂದಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇಗುಲ ಬಳಿ ಮಾತನಾಡಿದ ಅವರು, ಅವರು ಹಿರಿಯ ನಾಯಕರಾಗಿದ್ದಾರೆ. ಬಹಳ ನೋವಾಗುತ್ತದೆ. ಜೀವನದಲ್ಲಿ ಇಂತಹ ಘಟನೆಗಳು ಬರುತ್ತವೆ. ನಾವು ಸ್ವಲ್ಪ ಸಂಯಮದಿಂದ ದುಡುಕದೆ ನಿರ್ಧಾರಕ್ಕೆ ಬರಬೇಕು. ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಲಕ್ಷ್ಮಣ ಸವದಿಗೆ ಉತ್ತಮ ಭವಿಷ್ಯವಿದೆ. ಸವದಿ ದುಡುಕಿ ನಿರ್ಧಾರ ಕೈಗೊಳ್ಳದೆ ಸಂಯಮದಿಂದ ಇರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ನವರಿಗೆ 60-65 ಕ್ಷೇತ್ರಗಳಿಗೆ ಟಿಕೆಟ್ ಇರಲಿಲ್ಲ, ಅದಕ್ಕೆ 160 ಮಾಡಿ ನಿಲ್ಲಿಸಿದಾರೆ. ಅವರದ್ದು ಆರಂಭ ಶೂರತ್ವ, ಈಗ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅವರ ಬಳಿ ಸಮರ್ಥ ಅಭ್ಯರ್ಥಿ ಇಲ್ಲ, ಅವರು ಅಧಿಕಾರಕ್ಕೆ ಬರಲ್ಲ. ರಾಜಕಾರಣದಲ್ಲಿ ಪಕ್ಷ ಬದಲಿಸುವುದು ಸಾಮಾನ್ಯ, ಆಗುತ್ತಾ ಇರುತ್ತದೆ. ಬಂಡಾಯ ಸರಿ ಪಡಿಸುತ್ತಾ ಇದ್ದೇವೆ. ಕಾರ್ಯಕರ್ತರು ಮತ್ತು ಪಕ್ಷ ಗಟ್ಟಿ ಇರುವುದರಿಂದ ಡ್ಯಾಮೇಜ್ ಆಗಲ್ಲ ಎಂದರು.
ಇದನ್ನೂ ಓದಿ: ಉಡುಪಿ: ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ
ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಿದೆ, ಇನ್ನು 12 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕೆಲವೆಡೆ ಆಕಾಂಕ್ಷಿಗಳು, ಎಂಎಲ್ಸಿಗಳು ರಾಜೀನಾಮೆ ಕೊಟ್ಟಿದ್ದಾರೆ. ಅಸಮಾಧಾನಗೊಂಡ ನಾಯಕರ ಜತೆ ಹಿರಿಯರು ಮಾತನಾಡುತ್ತಿದ್ದಾರೆ. ಭಿನ್ನಮತ ಶಮನ ಆಗುತ್ತದೆ. ಲಕ್ಷ್ಮಣ ಸವದಿ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಬೇಕು. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ. ನೆಹರು ಓಲೇಕಾರ್1500 ಕೋಟಿ ಅಲ್ಲ, ಯಾವುದೇ ಆರೋಪ ಬೇಕಾದರೂ ಮಾಡಲಿ. ಆದರೆ ದಾಖಲೆ ಸಮೇತ ಆರೋಪ ಮಾಡಲಿ. ಹೇಳಿಕೆಗಳಿಂದ ಹಗರಣ ಆಗಲ್ಲ, ಸತ್ಯಾಸತ್ಯತೆ ಹೊರಬರಲಿ ಎಂದರು.
ಟಿಕೆಟ್ ಘೋಷಣೆಯಾಗಿದ್ದೇ ತಡ ಸಿಎಂ ಬೊಮ್ಮಾಯಿ ಟೆಂಪಲ್ ರನ್ ಆರಂಭಿಸಿದ್ದಾರೆ. ನಿನ್ನೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಸಿಎಂ ಇಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದಂಪಂತಿ ಸಹಿತ ಆಗಮಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಕೊಲ್ಲೂರಿನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ನಲ್ಲಿ ಬಂದಿಳಿದ ಸಿಎಂ, ರಸ್ತೆ ಮಾರ್ಗದ ಮೂಲಕ ಮಂಗಳೂರು ತಾಲೂಕಿನ ಕಟೀಲು ದೇವಸ್ಥಾನಕ್ಕೆ ಆಗಮಿಸಿದರು. ಈ ವೇಳೆ ದೇವಸ್ಥಾನದ ವತಿಯಿಂದ ಬಸವರಾಜ ಬೊಮ್ಮಾಯಿ ದಂಪತಿಗೆ ಸ್ವಾಗತ ಕೋರಲಾಯಿತು. ಬಳಿಕ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದ ನೀಡಿ ಮಲ್ಲಿಗೆ ಹಾರ, ಶಾಲು ಹೊದಿಸಿ ಸಿಎಂಗೆ ಗೌರವ ಸಲ್ಲಿಸಲಾಯಿತು. ಬಳಿಕ ದಂಪತಿ ಅನ್ನಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ಸಿಎಂ ಅವರನ್ನು ಮೂಡಬಿದಿರೆ ಕ್ಷೇತ್ರದ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ಭೇಟಿಯಾದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Thu, 13 April 23