ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಜಗದೀಶ್ ಶೆಟ್ಟರ್(Jagdish Shettar) ಬಿಜೆಪಿಗೆ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ. ಏಪ್ರಿಲ್ 17ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಇತ್ತ ಜಗದೀಶ್ ಶೆಟ್ಟರ್ ನಡೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಅಸಮಾಧಾನಗೊಂಡಿದ್ದು ಕೆಂಡಕಾರಿದ್ದಾರೆ.
ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ. ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನಿಲ್ಲ ಸ್ಥಾನ ನೀಡಬಹುದು ಅದನ್ನೆಲ್ಲ ಕೊಟ್ಟಿದೆ. ಜಗದೀಶ್ ಶೆಟ್ಟರ್ ಪಕ್ಷ ತೊರೆದು ಯಾವ ಮೆಸೇಜ್ ನೀಡಿದ್ರು. ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರ್ಲಿಲ್ವಾ? ವೈಯಕ್ತಿಕ ಲಾಭ ನಷ್ಟವನ್ನು ಹಾಕಿ ನನಗೆ ಲಾಭ ಆದ್ರೆ ಮಾತ್ರ ಬಿಜೆಪಿ. ಇನ್ನೊಬ್ಬರಿಗೆ ಆದ್ರೆ ಬಿಜೆಪಿ ಅಲ್ಲ ಎಂಬ ಮನಸ್ಥಿತಿ ಆಶ್ಚರ್ಯ ತರಿಸಿದೆ. ಜಗದೀಶ್ ಶೆಟ್ಟರ್ ಅವರಿಂದ ಇಂತಹದನ್ನ ನಿರೀಕ್ಷೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಸಮಸ್ಯೆ ಆದ್ರೆ ಸಮಾಧಾನವಾಗಿ ಬಗೆಹರಿಸುವವರು ಈ ನಿರ್ಣಯ ತೆಗೆದುಕೊಂಡಿದ್ದು ದುರಾದೃಷ್ಟಕರ. ಬಿಜೆಪಿ ಪಕ್ಷ ಕಷ್ಟಗಳನ್ನು ದಾಟಿ ಬಂದಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ಬೆಳವಣಿಗೆಯ ಇತಿಹಾಸದಲ್ಲಿ ಇದ್ದ ಸ್ಥಾನ ಶೆಟ್ಟರ್ ಕಳೆದುಕೊಂಡಿದ್ದಾರೆ. ಒಂದು ಪಕ್ಷ ನಷ್ಟವನ್ನು ರಿಕವರಿ ಮಾಡಿಕೊಳ್ಳುತ್ತೆ. ಆದ್ರೆ ವ್ಯಕ್ತಿ ನಷ್ಟವನ್ನು ರಿಕವರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಕುಟುಂಬ ಎಂಬ ಹೆಗ್ಗಳಿಕೆಯಿಂದ ದೂರ ಆಗಿದ್ದಾರೆ. ಬಿಜೆಪಿ ಕಟ್ಟಿ ಬೆಳಿಸಿದ ನಾಯಕರ ಸಾಲಿಗೆ ಸೇರಬಹುದಾದಂತ ಅವಕಾಶವನ್ನು ಕಳೆದುಕೊಂಡಿದ್ದಾರೆ. ಎಲ್ಲವನ್ನು ಅನುಭವಿಸಿ ಪಕ್ಷ ತೊರೆದಿದ್ದು ದುರದೃಷ್ಟಕರ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್: ಬಿಜೆಪಿಯೊಂದಿಗನ ಮೂರು ದಶಕಗಳ ಹೆಚ್ಚಿನ ನಂಟು ಮುರಿದುಕೊಂಡ ಮಾಜಿ ಸಿಎಂ
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುತ್ತಿದ್ದಂತೆ ಸಿಟಿ ರವಿ ಕೆರಳಿದ್ದು ಬಿಜೆಪಿ ನಾಯಕರ ಜೊತೆ ನಿರಂತರವಾಗಿ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊಬೈಲ್ನಲ್ಲಿ ಮಾತನಾಡುತ್ತಾ ಅಸಮಾಧಾನ ಹೊರ ಹಾಕಿದ್ದಾರೆ. ಏನು ಆಗಿಲ್ಲ ಅನ್ನುವ ಹಾಗಿಲ್ಲ. ಇಂಥ ದೊಡ್ಡ ಪಾರ್ಟಿಗೆ ದೊಡ್ಡ ನೋವನ್ನು ಕೊಟ್ಟು ಹೋಗ್ತಿದ್ದಾರಲ್ಲ? ಎಲ್ಲಾ ಅನುಭವಿಸಿದವರೇ ಪಾರ್ಟಿ ಬಿಟ್ಟು ಹೋಗ್ತಿದ್ದಾರಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಯಾರಿಂದ ಹಾನಿಯೇ ಆಗಲ್ಲ ಅನ್ನುವಂತಿಲ್ಲ. ಭಾಗಶಃ ಹಾನಿ ಒಬ್ಬ ಕಾರ್ಯಕರ್ತ ಹೋದ್ರು ಆಗುತ್ತೆ. ಯಾರಿಂದಲೂ ಪಕ್ಷಕ್ಕೆ ನಷ್ಟವಾಗಲ್ಲ ಅಂತ ಹೇಳುವುದಿಲ್ಲ. ಎಲ್ಲವನ್ನು ಪಡೆದುಕೊಂಡು ಹೀಗೆ ಮಾಡುವುದು ಇತಿಹಾಸದಲ್ಲಿ ಬ್ಲಾಕ್ ಮಾರ್ಕ್ ಮೂಡಿಸಿಕೊಂಡು ಹೋಗ್ತಾರೆ. ಸೋತ ಮೇಲು ಲಕ್ಷ್ಮಣ್ ಸವದಿಗೆ ಎಂಎಲ್ಸಿ ಮಾಡಿ ಉಪಮುಖ್ಯಮಂತ್ರಿ ಮಾಡಿದ್ರು. ಸೋತಾಗಲೇ ಅವಕಾಶವನ್ನು ನೀಡಿದ ಪಕ್ಷ ಇನ್ನಷ್ಟು ಅವಕಾಶಗಳನ್ನು ಕೊಡುತ್ತಿತ್ತು. ಯಾರ ಮೇಲೆ ನಂಬಿಕೆ ಇಡಬಾರದಿತ್ತು ಅಂಥವರ ಮೇಲೆ ನಂಬಿಕೆ ಇಟ್ಟಿದ್ವಾ ಎಂಬ ಅನುಮಾನ ಕಾಡುತ್ತೆ. ಈ ಬೆಳವಣಿಗೆಯ ಬಗ್ಗೆ ಅವಲೋಕನ ಮಾಡುತ್ತೇವೆ. ಲಕ್ಷಾಂತರ ಜನ ಬಿಜೆಪಿ ಸೇರಿದ್ದು ಸಿದ್ಧಾಂತದ ಕಾರಣಕ್ಕೆ. ಸಿದ್ದಾಂತದ ಕಾರಣಕ್ಕೆ ನಾವು ಸೇರಿದ್ದು ಅಧಿಕಾರದ ಕಾರಣಕ್ಕಲ್ಲ. ಪಕ್ಷ ಮುಂದುವರಿಸಿ ನಾಯಕತ್ವ ಕೊಡುವ ಲಕ್ಷಾಂತರ ಜನ ಬರುತ್ತಾರೆ. ಈ ನಡುವಿನ ಪ್ರಯಾಣದಲ್ಲಿ ಕೆಲವರು ಹೀರೋಗಳಾಗುತ್ತಾರೆ. ಇನ್ನು ಕೆಲವರು ವಿಲನ್ಗಳಾಗುತ್ತಾರೆ ಇನ್ನು ಕೆಲವರು ಏನು ಇಲ್ಲದಂತೆ ಕಳೆದು ಹೋಗುತ್ತಾರೆ. ಅವರ ಪಾತ್ರ ಏನು ಅನ್ನುವುದನ್ನ ನಾನು ವಿಶ್ಲೇಷಣೆ ಮಾಡುವುದಿಲ್ಲ. ತಾತ್ಕಾಲಿಕ ಹಿನ್ನಡೆ ಆದರೂ ನಾವು ಎದುರಿಸುತ್ತೇವೆ ಎಂದು ಸಿಟಿ ರವಿ ಕಿಡಿಕಾರಿದರು.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:35 am, Mon, 17 April 23