ಮಗನ ಆರೋಗ್ಯ ಸರಿ ಇಲ್ಲದ ಕಾರಣ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಖುದ್ದು ಅಖಾಡಕ್ಕಿಳಿದ ಹೆಚ್​ಡಿ ದೇವೇಗೌಡ

|

Updated on: Apr 24, 2023 | 12:19 PM

ಮಗನ ಅನಾರೋಗ್ಯದ ಹಿನ್ನೆಲೆ ತಮ್ಮ ಆರೋಗ್ಯ ಲೆಕ್ಕಿಸದೆ ಹೆಚ್​ಡಿ ದೇವೇಗೌಡ್ರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ(ಏಪ್ರಿಲ್ 23) ಪದ್ಮನಾಭನಗರ, ಇಂದು ತುಮಕೂರು ಜಿಲ್ಲೆ ಶಿರಾ, ಕೊರಟಗೆರೆ, ಮಧುಗಿರಿಯಲ್ಲಿ ಹಾಗೂ ನಾಳೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆಆರ್ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ರಾಜ್ಯ ರಾಜಕಾರಣ ರಂಗೇರಿದೆ. ಕಾಂಗ್ರೆಸ್(Congress), ಬಿಜೆಪಿಯ(BJP) ರಾಷ್ಟ್ರ ನಾಯಕರು ರಾಜ್ಯಕ್ಕೆ ಆಗಮಿಸಿ ಭರ್ಜರಿ ಪ್ರಕಾರ ನಡೆಸುತ್ತಿದ್ದಾರೆ. ಆದ್ರೆ ಮತ್ತೊಂದೆಡೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಜೆಡಿಎಸ್​ಗೆ ಭಾರೀ ಹಿನ್ನಡೆಯಾದಂತಿದೆ. ಹೀಗಾಗಿ ಖುದ್ದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ(HD Deve Gowda) ಅಖಾಡಕ್ಕಿಳಿದಿದ್ದಾರೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪಕ್ಷಕ್ಕಾಗಿ ಪ್ರಚಾರ ಮಾಡಲು ಮುಂದಾಗಿದ್ದಾರೆ.

ಮಗನ ಅನಾರೋಗ್ಯದ ಹಿನ್ನೆಲೆ ತಮ್ಮ ಆರೋಗ್ಯ ಲೆಕ್ಕಿಸದೆ ಹೆಚ್​ಡಿ ದೇವೇಗೌಡ್ರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ(ಏಪ್ರಿಲ್ 23) ಪದ್ಮನಾಭನಗರ, ಇಂದು ತುಮಕೂರು ಜಿಲ್ಲೆ ಶಿರಾ, ಕೊರಟಗೆರೆ, ಮಧುಗಿರಿಯಲ್ಲಿ ಹಾಗೂ ನಾಳೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆಆರ್ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ತೀವ್ರ ಜ್ವರದಿಂದ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ತಾವೇ ಖುದ್ದು ಪ್ರಚಾರಕ್ಕೆ ತೆರಳುತ್ತಿದ್ದಾರೆ. ಹೆಚ್​ಡಿ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗದಿದ್ದರೆ ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ನಾನೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೆಚ್​ಡಿ ದೇವೇಗೌಡ್ರು ನಿನ್ನೆಯಿಂದ ಮತ ಶಿಕಾರಿ ಆರಂಭಿಸಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದ ನಡುವೆಯೂ ಆಸ್ಪತ್ರೆಯಿಂದಲೇ ಹೆಚ್​ಡಿ ಕುಮಾರಸ್ವಾಮಿ ಚುನಾವಣಾ ರಣತಂತ್ರ

ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಗೌಡರಿಗೆ ಪ್ರಚಾರಕ್ಕೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಕುಮಾರಸ್ವಾಮಿಗೋಸ್ಕರ ವೈದ್ಯರ ತಂಡದೊಂದಿಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಮಗ ಕುಮಾರಸ್ವಾಮಿಗೆ ತಂದೆ ಹೆಚ್​ಡಿ ದೇವೇಗೌಡರು ಬೆನ್ನಿಗೆ ನಿಂತಿದ್ದಾರೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮತಬೇಟೆ

ಶಿರಾ, ಮಧುಗಿರಿ, ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್​​ ಅಭ್ಯರ್ಥಿಗಳ ಪರ H.D.ದೇವೇಗೌಡರು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಮಠಕ್ಕೆ ಹೆಚ್​ಡಿಡಿ ಭೇಟಿ ನೀಡಿದ್ದು ನಂಜಾವಧೂತಶ್ರೀ ಭೇಟಿಯಾಗಿ ಆಶೀರ್ವಾದ ಪಡೆದ್ರು. ಮಠದ ಶ್ರೀ ಓಂಕಾರೇಶ್ವರ ಸನ್ನಿದಿಯಲ್ಲಿ ಸತತ ಒಂದು ಗಂಟೆಗೂ ಅಧಿಕ ಕಾಲ‌ ಪೂಜೆಯಲ್ಲಿ ತೊಡಗಿದ್ರು. ಗುರುಗುಂಡಾ ಬ್ರಹ್ಮೇಶ್ವರ ಮಠದ ಓಂಕಾರೇಶ್ವರ ಸ್ವಾಮಿ ದೇವರ ಪೂಜೆ ವೇಳೆ ಓಂಕಾರೇಶ್ವರ ಸ್ವಾಮಿ ತಲೆ‌ ಮೇಲಿಂದ ಹೂ ಬಿದ್ದಿದೆ. ಪೂಜೆ ಬಳಿಕ ನಂಜಾವದೂತ ಸ್ವಾಮಿಜಿ ಜೊತೆ ಮಠದ ಕೊಠಡಿಯಲ್ಲಿ ಹೆಚ್​ಡಿ ದೇವೇಗೌಡ್ರು ಮಾತುಕತೆ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:18 pm, Mon, 24 April 23