ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Assembly Election) ಕಾಂಗ್ರೆಸ್ (Congress) ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಾಲು ದೊಡ್ಡದಿದ್ದ ಕಾರಣ ಅದಕ್ಕೆ ತಕ್ಕುದಾಗಿ ನಿರೀಕ್ಷೆಗಳೂ ಹೆಚ್ಚಾಗಿದ್ದವು. ನಮಗೇ ಟಿಕೆಟ್ ಸಿಗುತ್ತೆ ಕಾದು ಕುಳಿತಿದ್ದವರೆಲ್ಲಾ ಎರಡನೇ ಪಟ್ಟಿಗಾಗಿ ಕುತೂಹಲದಿಂದ ಎದುರುನೋಡುತ್ತಿದ್ದರು. ಎರಡನೇ ಪಟ್ಟಿ ಹೊರಬಿದ್ದ ಕೂಡಲೇ ಸಂಭ್ರಮವಿರಬೇಕಾದ ಕಾಂಗ್ರೆಸ್ ಮನೆಯಲ್ಲಿ ಸಮರವೇ ಶುರುವಾಗಿದೆ. 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿ ಬಿಜೆಪಿ, ಜೆಡಿಎಸ್ ವಿರುದ್ಧ ತೊಡೆತಟ್ಟಿದ್ದ ಕಾಂಗ್ರೆಸ್‌ಗೆ 2ನೇ ಪಟ್ಟಿಯಲ್ಲಿ ಬಂಡಾಯದ ಬೇಗುದಿ ಅಪ್ಪಳಿಸಿದೆ. ಟಿಕೆಟ್ ಸಿಗದ್ದಕ್ಕೆ ರೊಚ್ಚಿಗೆದ್ದಿರೋ ಕೈ ಕಲಿಗಳು ಕಿಚ್ಚು ಹೊತ್ತಿಸುತ್ತಿದ್ದಾರೆ.
ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಡ್ನಾಳ್ ರಾಜಣ್ಣಗೆ ಟಿಕೆಟ್ ಕೈತಪ್ಪಿದ್ದಕ್ಕೆ ಭಿನ್ನಮತ ಸ್ಫೋಟಗೊಂಡಿದೆ. ಅವರ ಬೆಂಬಲಿಗರು ಗುರುವಾರ ರಾತ್ರಿ ಶಿವಮೊಗ್ಗ ಗಾಂಧಿನಗರದಲ್ಲಿರುವ ವಡ್ನಾಳ್ ರಾಜಣ್ಣ ನಿವಾಸದ ಬಳಿ ಜಮಾಯಿಸಿದ್ದರು. ರಾಜಣ್ಣ ಅಥವಾ ಅವರ ಸೋದರ ಮಗನಿಗೆ ಟಿಕೆಟ್ ನೀಡಬೇಕು. ಇಲ್ಲವಾದ್ರೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಹೊರಹಾಕಿದ ವಡ್ನಾಳ್ ರಾಜಣ್ಣ, ಕೊನೆಯ ಕ್ಷಣದಲ್ಲಿ ನನಗೆ ಟಿಕೆಟ್ ತಪ್ಪಿಸಲಾಗಿದೆ. ಬಂಡಾಯವಾಗಿ ಸ್ಪರ್ಧೆ ಬಗ್ಗೆ ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಆಪ್ತ ರಘು ಆಚಾರ್ ಚಿತ್ರದುರ್ಗದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ ಇಲ್ಲಿ ನಟ ದೊಡ್ಡಣ್ಣ ಅಳಿಯ ಕೆ.ಸಿ. ವೀರೇಂದ್ರಗೆ ಟಿಕೆಟ್ ನೀಡಲಾಗಿದೆ. ಇದ್ರಿಂದ ರಘು ಆಚಾರ್ ಆಕ್ರೋಶಗೊಂಡಿದ್ದು, ಬೆಂಬಲಿಗರ ಜತೆ ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 14ಕ್ಕೆ ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ತೊರೆದು ಕೈ ಹಿಡಿದಿದ್ದ ವೈಎಸ್‌ವಿ ದತ್ತಾಗೆ ಶಾಕ್ ಎದುರಾಗಿದೆ. ಕಡೂರಿನಲ್ಲಿ ಆನಂದ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು, ವೈಎಸ್‌ವಿ ದತ್ತಾ ಬೆಂಬಲಿಗರು ಸಿಡಿದೆದ್ದಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ಗೆ ವಾಪಸ್ ಬರುವಂತೆ ದಳ ಮುಖಂಡರು ದತ್ತಾಗೆ ಆಫರ್ ಕೊಟ್ಟಿದ್ದಾರೆ.
ಗೋಕಾಕ್‌ನಲ್ಲಿ ಅಶೋಕ್ ಪೂಜಾರಿಗೆ ಟಿಕೆಟ್ ನೀಡದಿರುವುದಕ್ಕೆ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಪ್ರತಿಭಟನೆ ನಡೆಸಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕಿತ್ತೂರಿನಲ್ಲಿ ಬಾಬಾಸಾಹೇಬ್ ಪಾಟೀಲ್‌ಗೆ ಟಿಕೆಟ್ ನೀಡಲಾಗಿದ್ದು, ಮಾಜಿ ಸಚಿವ ಡಿ.ಬಿ ಇನಾಮ್‌ದಾರ್‌ಗೆ ನಿರಾಸೆಯಾಗಿದೆ. ಅವರ ಬೆಂಬಲಿಗರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮೂಹಿಕವಾಗಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಈ ಮಧ್ಯೆ, ಡಿ.ಬಿ ಇನಾಮ್‌ದಾರ್ ಸೊಸೆ ಲಕ್ಷ್ಮೀ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರವಿಕುಮಾರ್‌ಗೆ ಮಣೆ ಹಾಕಲಾಗಿದೆ. ಇದರಿಂದ ಮಂಡ್ಯ ಕಾಂಗ್ರೆಸ್ ಪಾಳಯದಲ್ಲಿ ಬೆಂಕಿಹೊತ್ತಿಕೊಂಡಿದೆ. ರಾಧಾಕೃಷ್ಣ ಬೆಂಬಲಿಗರಿಂದ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಗದಗ್ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಇಲ್ಲಿ ರಾಯಚೂರು ಮೂಲದ ಅಂಬಣ್ಣಗೆ ಟಿಕೆಟ್ ಕೈತಪ್ಪಿದ್ದಕ್ಕೆ, ಅಸಮಾಧಾನಗೊಂಡಿರೋ ಸ್ಥಳೀಯರು ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಭಾರಿ ಬಡಿದಾಟಕ್ಕೆ ಕಾರಣವಾಗಿದ್ದ ಧಾರವಾಡ ಜಿಲ್ಲೆ ಕಲಘಟಗಿ ಕಾಂಗ್ರೆಸ್ ಟಿಕೆಟ್ ಮತ್ತೆ ಸಂತೋಷ್ ಲಾಡ್ ಪಾಲಾಗಿದೆ. ಹೀಗಾಗಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ಕುಕ್ಕರ್‌ಗಳನ್ನು ಹಂಚಿ ಮತದಾರರ ಓಲೈಕೆ ಶುರು ಮಾಡಿದ್ದ ಡಿಕೆ ಬಣದ ನಾಗರಾಜ್ ಛಬ್ಬಿಗೆ ನಿರಾಸೆಯಾಗಿದೆ. ಇದರಿಂದ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲು ಛಬ್ಬಿ ಮತ್ತು ಬೆಂಬಲಿಗರು ನಿರ್ಧರಿಸಿದ್ದಾರೆ.
ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಟೆಕೆಟ್ ನೀಡಲಾಗಿದ್ದು, ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಸಿಟ್ಟಾಗಿದ್ದಾರೆ.
ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸಿದ್ದರಾಮಯ್ಯ ಈ ಬಾರಿ ಬಾದಾಮಿ ತೊರೆದಿದ್ದಾರೆ. ಆದರೆ, ಅವರ ಬೆಂಬಲಿಗರು, ಅಭಿಮಾನಿಗಳು ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಚಿಮ್ಮನಕಟ್ಟಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ, ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರಿನ ನಗರಲ್ಲಿ ಮಾಜಿ ಶಾಸಕ ಶಫಿ ಅಹ್ಮದ್ ಹಾಗೂ ರಫಿಕ್ ಅಹಮದ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹ್ಮದ್ ಹೇಳಿದ್ದಾರೆ.
ಮೊದಲ ಪಟ್ಟಿ ಬಿಡುಗಡೆಯಾದಾಗ ಕಾಂಗ್ರೆಸ್‌ಗೆ ಅಷ್ಟಾಗಿ ತಟ್ಟದ ಬಂಡಾಯದ ಬಿಸಿ, ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಪಕ್ಷದ ಬುಡವನ್ನೇ ನಡುಗಿಸುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:54 pm, Fri, 7 April 23