Karnataka Assembly Elections 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣೆ ಮೇ10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಈ ಸಂಬಂಧ ಹೀಗಾಗಲೆ ಮೂರು ಪ್ರಮುಖ ಪ್ರಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಇದರಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ನಾಯಕಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹಾಗೇ ಬಿಜೆಪಿ ರಾಷ್ಟ್ರೀಯ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಹಾಗೂ ಇನ್ನಿತರೆ ನಾಯಕರು ಮತಾಯಾಚಿಸುತ್ತಿದ್ದಾರೆ. ಇವರೊಂದಿಗೆ ಚಂದನವನ ಮಂದಿ ಕೂಡ ಕೈ ಜೋಡಿಸಿದೆ. ಇದರೊಂದಿಗೆ ಲೇಟೆಸ್ಟ್ ಅಪ್ಡೇಟ್ಸ್
ಬೆಂಗಳೂರು: ಪರಮೇಶ್ವರ್ ಮೇಲೆ ಕಲ್ಲು ಎಸೆದ ವಿಚಾರವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚುನಾವಣೆಗಳಲ್ಲಿ ಕಲ್ಲು ಎಸೆಯುವುದು, ಹೆದರಿಸುವುದು ಸರಿಯಲ್ಲ. ಒಬ್ಬ ಅಭ್ಯರ್ಥಿಗೆ ಕಲ್ಲು ಎಸೆಯುವುದು, ಹೆದರಿಸುವುದು, ಭಾಷಣಕ್ಕೆ ಅಡ್ಡಿ ಪಡಿಸುವುದನ್ನು ನಾನು ಖಂಡಿಸುತ್ತೇನೆ. ಈ ರೀತಿ ನಡೆದುಕೊಂಡರೆ ಅವರಿಗೆ ಮತದಾರರು ಒಲಿಯುವುದಿಲ್ಲ. ಮತದಾರರು ಚಾಣಾಕ್ಷರಿದ್ದಾರೆ. ಪರಮೇಶ್ವರ ಅವರು ಭಾರೀ ಬಹುಮತದಿಂದ ಗೆಲ್ಲಿಸುತ್ತಾರೆ ಎಂದರು.
ತುಮಕೂರು: ಮಾಜಿ ಡಿಸಿಎಮ್ ಪರಮೇಶ್ವರ್ ತಲೆ ಮೇಲೆ ಕಲ್ಲು ಎಸೆದ ಪ್ರಕರಣ ಸಂಬಂಧ ಪರಮೇಶ್ವರ್ ನಿವಾಸ ಬಳಿ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದರು. ಸದ್ಯ ಎಸ್ಪಿ ರಾಹುಲ್ ಕುಮಾರ್ ಅವರು ಪರಮೇಶ್ವರ್ ನಿವಾಸದಲ್ಲಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಪರಮೇಶ್ವರ್ಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಪ್ರಚಾರ ನಡೆಸಿದರು. ರೋಡ್ ಶೋ ಮೂಲಕ ಅಭ್ಯರ್ಥಿ ಸಪ್ತಗಿರಿ ಗೌಡ ಪರ ಮತಯಾಚನೆ ಮಾಡಿದರು. ಈ ವೇಳೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮತ್ತು ಭಾಗಿಯಾದರು. ಓಕಳಿಪುರಂ ವಾರ್ಡ್ ಸುಜಾತಾ ವೃತ್ತದಿಂದ ಸನ್ ರೈಸ್ ವೃತ್ತದವರೆಗೆ ರೋಡ್ ಶೋ ನಡೆಯಿತು.
ರಾಯಚೂರು: ಜೆಡಿಎಸ್ನವರು ಗೆದ್ದ ಎತ್ತಿನ ಬಾಲ ಹಿಡಿಯುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಗೆದ್ದರೆ ಬಿಜೆಪಿ ಜೊತೆ, ನಾವು (ಕಾಂಗ್ರೆಸ್) ಗೆದ್ದರೆ ನಮ್ಮ ಜೊತೆ ಬರುತ್ತಾರೆ ಎಂದು ಸಿಂಧನೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದರು. ಜೆಡಿಎಸ್ ಅಭ್ಯರ್ಥಿಗೆ ವೋಟ್ ಕೊಟ್ಟರೆ ಬಿಜೆಪಿಗೆ ಕೊಟ್ಟಂತೆ ಅಂತಾನೂ ಹೇಳಿದರು. ಜೆಡಿಎಸ್ಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. 2 ಬಾರಿ ಮುಖ್ಯಮಂತ್ರಿ ಆಗಿದ್ದಾಗ ಮಾಡದ ಪಂಚರತ್ನ ಯಾತ್ರೆ ಈಗ ಯಾಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆ ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್ ಅವರ 27 ಮಂದಿ ಆಪ್ತರನ್ನು ಉಚ್ಛಾಟಿಸಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂತೋಷ ಚವ್ಹಾಣ್ ಆದೇಶ ಹೊರಡಿಸಿದ್ದಾರೆ. ಮಾಜಿ ನಿಗಮ ಮಂಡಳಿ ಅಧ್ಯಕ್ಷರು, ಪಕ್ಷದ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸೇರಿ 27 ಜನ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಘೋಷಣೆಯಾಗಿದ್ದರೂ ಜಗದೀಶ್ ಶೆಟ್ಟರ್ ಪರ ನಿಂತ ಹಿನ್ನೆಲೆ ಉಚ್ಛಾಟಿಸಲಾಗಿದೆ. ಉಚ್ಛಾಟನೆಗೊಂಡವರಲ್ಲಿ ಮಲ್ಲಿಕಾರ್ಜುನ ಸಾವುಕಾರ, ನಾಗೇಶ ಕಲಬುರಗಿ, ರಾಧಾ ಪಟ್ಟಣಶೆಟ್ಟಿ, ಮಹೇಶ್ ಪತ್ತಾರ, ವೀರುಪಾಕ್ಷಿ ರಾಯನಗೌಡ ಸೇರಿದ್ದಾರೆ.
ಬಳ್ಳಾರಿ: ರಾಜ್ಯ ಬಿಜೆಪಿ ನಾಯಕರಿಗೆ 40 ನಂಬರ್ ಚೆನ್ನಾಗಿ ಒಪ್ಪುತ್ತದೆ, ಬಿಜೆಪಿಗೆ 40 ಸ್ಥಾನ ಮಾತ್ರ ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ಗೆಲ್ಲಬೇಕು ಅಂತಾ ನೀವು ನಿರ್ಣಯ ತೆಗೆದುಕೊಳ್ಳಬೇಕು. ನೀವು ಗೆಲ್ಲಿಸಿದ ಶಾಸಕರನ್ನು ಕಿತ್ತುಕೊಂಡು ಸರ್ಕಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 140-150 ಸ್ಥಾನ ಗೆಲ್ಲಬೇಕು. ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ ಮಾಡುತ್ತೇವೆ. ಸಾಮಾನ್ಯವಾಗಿ ಭರವಸೆ ನೀಡಲ್ಲ, ನೀಡಿದರೆ ಮಾಡಿ ತೋರಿಸುತ್ತೇವೆ. ಪ್ರಧಾನಿ ಮೋದಿ ರೀತಿ ನಾನು ಸುಳ್ಳು ಆಶ್ವಾಸನೆಯನ್ನು ನೀಡಲ್ಲ. ನಾವು ಅಧಿಕಾರದಲ್ಲಿದ್ದಾಗ 371ಜೆ ಜಾರಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಬೋರ್ಡ್ ಸಹ ಸ್ಥಾಪಿಸಲಿಲ್ಲ ಎಂದರು.
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯನ್ನು ವಿಷದ ಹಾವಿಗೆ ಹೋಲಿಕೆ ವಿಚಾರವಾಗಿ ಇಂದು ಮತ್ತೆ ಅಮಿತ್ ಶಾ ಅವರು ಗುಡುಗಿದ್ದಾರೆ. ಹರಿಹರ ಪಟ್ಟಣದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ವಿಷಕಾರಿ ಹಾವು ಎನ್ನುವುದು ಎಷ್ಟು ಸೂಕ್ತ? ಇಂತಹ ಪಕ್ಷಕ್ಕೆ ಕರ್ನಾಟಕದ ಜನ ಮತ ನೀಡಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. ಕಾಂಗ್ರೆಸ್ಸಿಗರು ಗ್ಯಾರಂಟಿ ಕೊಡುತ್ತಿದ್ದಾರೆ, ಆದರೆ ಅವರು ಅಧಿಕಾರಕ್ಕೆ ಬರಲ್ಲ. ಸಂವಿಧಾನ ಪ್ರಕಾರ ಧರ್ಮಾಧಾರಿತವಾಗಿ ಮೀಸಲಾತಿ ನೀಡುವಂತಿಲ್ಲ. ಮುಸ್ಲಿಮರ ಮೀಸಲಾತಿ ತೆಗೆದು ಲಿಂಗಾಯತ, ಒಕ್ಕಲಿಗರಿಗೆ ನೀಡಿದ್ದೇವೆ ಎಂದರು.
ಗದಗ: ನಾಳೆ ಗದಗ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತಯಾಚನೆ ಮಾಡಲಿದ್ದಾರೆ. ರೋಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದು, ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಹಿರಂಗ ಸಭೆ ಮಾಡಲಿದ್ದಾರೆ.
ಹುಬ್ಬಳ್ಳಿ: ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತರ ಮಾಡಿದರು ಎಂದು ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು. ಲಿಂಗಾಯತ ನಾಯಕತ್ವವಿಲ್ಲದೆ ಸರ್ಕಾರ ರಚಿಸಿದ್ದನ್ನು ತೋರಿಸಬೇಕಿತ್ತು. ಆ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದ ಜಗದೀಶ್ ಶೆಟ್ಟರ್, ಶೆಟ್ಟರ್ ನಾಯಕತ್ವ ಕ್ಲೋಸ್ ಮಾಡಲು ಷಡ್ಯಂತ್ರ ನಡೆಯುತ್ತಿತ್ತು. ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತಾ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಬಿ.ಎಲ್.ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ಇದೆಲ್ಲ ಆಗುತ್ತಿದೆ. ಇಡೀ ದೇಶದಲ್ಲಿ ಬಿ.ಎಲ್.ಸಂತೋಷ್ ವಿರುದ್ಧ ಮಾತಾಡಿದ್ದು ನಾನೇ, ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ಗೂ ಆಗಿದೆ. ತೇಜಸ್ವಿನಿಗೂ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವ ಮುಗಿಸುವ ಉದ್ದೇಶವಿತ್ತು ಎಂದರು.
ತುಮಕೂರು: ಕಾಂಗ್ರೆಸ್ ತೊರದ ಪಿಎನ್ ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್, ಇಂದು ಸುಧಿರ್ಘವಾಗಿ ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದ ಕಾರ್ಯಕರ್ತ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಿಎನ್ ಕೃಷ್ಣಮೂರ್ತಿ ರವರು ಮಾಜಿ ಜಿಪಂ ಸದಸ್ಯರಾಗಿ ಕೆಲಸ ಮಾಡಿದ್ದವರು. ಕಾಂಗ್ರೆಸ್ನಲ್ಲಿ ಅವರ ಸೇವೆ ಕಡೆಗಣಿಸುವ ಕೆಲಸ ಆಗಿದೆ. ಇಂದು ಬಿಜೆಪಿ ಸೇರ್ಪಡೆಯಿಂದ ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಆನೆ ಬಲ ಬಂದಾಂಗಿದೆ. ಕೊರಟಗೆರೆ, ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿಯಲ್ಲಿ ಆನೆ ಬಲ ಬಂದಿದೆ. ಇವರ ಜೊತೆಗೆ ಸಾಕಷ್ಟು ಮುಖಂಡರು ಬಿಜೆಪಿಗೆ ಬರಲಿದ್ದಾರೆ. ಪಿಎನ್ ಕೃಷ್ಣಮೂರ್ತಿ ಆಗಮನದಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಬಿಜೆಪಿಯಲ್ಲಿ ಅವರಿಗೆ ಗೌರವ ಸಿಗಲಿದೆ. ಕೊರಟಗೆರೆಯಲ್ಲಿ ಅಚ್ಚರಿಯ ತಿರ್ಮಾನ ಕ್ಷೇತ್ರದ ಜನರು ಮಾಡುತ್ತಾರೆ ಎಂದರು.
ಗದಗ: ಶಿರಹಟ್ಟಿ ಪಟ್ಟಣದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷ ಡಾ.ಅಂಬೇಡ್ಕರ್ರನ್ನು ಅಪಮಾನ ಮಾಡಿದೆ. ಮೋದಿ ಸರ್ಕಾರ ಬಂದ ಮೇಲೆ ಡಾ.ಅಂಬೇಡ್ಕರ್ರಿಗೆ ಗೌರವ ನೀಡಲಾಗಿದೆ. ಡಾ.ಅಂಬೇಡ್ಕರ್ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಿದ್ದೇವೆ. ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿ ಆಗಿದ್ದಾರೆ. ನಮ್ಮ ಸರ್ಕಾರ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುತ್ತಿದೆ ಎಂದರು.
ಧಾರವಾಡ: ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇದು ಶಂಕರ ಪಾಟೀಲ್ ವಿಜಯೋತ್ಸವದ ಸಭೆ. ಅಣ್ಣಿಗೇರಿ ಪಂಪನ ಜನ್ಮ ಸ್ಥಳ ಇದು. ಅಮಿತ್ ಶಾ ಅವರಿಗೂ ಸಾಹಿತ್ಯ, ಕಲೆ ಮೇಲೆ ಅತಿ ಹೆಚ್ಚು ಆಸಕ್ತಿ ಇದೆ. ಜೈನ ಸಾಹಿತ್ಯ, ತುಮಕೂರಿನ ವಚನ ಸಾಹಿತ್ಯದ ತರಬೇತಿ ಪಡೆದಿದ್ದಾರೆ. ಇಂತಹ ನಾಡಿಗೆ ಅವರು ಬಂದಿದ್ದಾರೆ. ಕಾಶ್ಮೀರ ನಮ್ಮ ಭಾಗದಲ್ಲಿದ್ದರೂ ಸಹ ಯಾರಿಗೂ ಗೊತ್ತಿರಲಿಲ್ಲ. 370 ಆರ್ಟಿಕಲ್ ತೆಗೆದವರು ಅಮಿತ್ ಶಾ. ಮಹಾದಾಯಿ ಟ್ರುಬ್ಯೂನಲ್ ಆದೇಶ ಶಾ ಅವರ ಕೊಡುಗೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರು ಲಾಠಿಯಿಂದ ರೈತರಿಗೆ ಹೊಡೆದು ಜೈಲಿಗೆ ಕಳುಹಿಸಿದ್ದರು. ಆದರೆ ಅಮಿತ್ ಶಾ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದರು. ಧಾರವಾಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹರ್ ಘರ್ ಪಾನಿ ಮೂಲಕ ನೀರು ಬರುತ್ತಿದೆ. ಒಂದು ವರ್ಷದ ಒಳಗೆ ಮಲಪ್ರಭಾ ನೀರು ನಿಮ್ಮ ಮನೆಗೆ ಬರಲಿದೆ ಎಂದರು.
ಧಾರವಾಡ: ಜಿಲ್ಲೆಯ ಅಳ್ನಾವರದಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜ್ ಪರ ಕಿಚ್ಚ ಸುದೀಪ್ ರೋಡ್ ಶೋ ನಡೆಸಿದರು. ಹೇಗಿದ್ದಿರಿ ಅಂತ ಮಾತು ಆರಂಭಿಸಿದ ಸುದೀಪ್, ನಾಗರಾಜ್ ಅವರಿಗೆ ಬೆಸ್ಟ್ ಆಫ್ ಲಕ್ ಹೇಳುತ್ತೇನೆ. ಮತ್ತೊಮ್ಮೆ ನಾನಿಲ್ಲಿ ಬರಬೇಕು ಅಂದರು. ರಾಜಕಾರಣಿಗಳು ಜನರನ್ನು ಮರಿಯಬಾರದು. ಗೆದ್ದಮೇಲೆ ಇವರು ಯಾರನ್ನೂ ಮರೀಬಾರದು. ನಾನು ಕ್ಯಾಂಪೇನ್ಗಾಗಿ ಕಲಾವಿದನಾಗಿ ಬಂದಿದ್ದೇನೆ. ನಾನು ರಾಜಕಾರಣಿಯಲ್ಲ. ಚೆನ್ನಾಗಿ ಕೆಲಸ ಮಾಡಿದಾಗ ನಿಮ್ಮನ್ನ ನೋಡಲು ಬರುತ್ತೇನೆ. ಚೆನ್ನಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನ ನೋಡಲು ಬರುತ್ತೇನೆ. ನಾಗರಾಜ್ ಅವರ ಮುಖ ನೋಡಿ ಬೇರೆಯವರಿಗೆ ವೋಟ್ ಹಾಕಬೇಡಿ ಎಂದು ಹೇಳಿ ಮದಕರಿ ಡೈಲಾಗ್ ಹೇಳಿ ಅಭಿಮಾನಿಗಳನ್ನ ಫಿದಾ ಮಾಡಿದರು.
ಮೈಸೂರು: ಸಿದ್ದರಾಮಹುಂಡಿ ಗಲಾಟೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ, 7.30 ಕ್ಕೆ ಸೋಮಣ್ಣ ಸಿದ್ದರಾಮನಹುಂಡಿಗೆ ಬಂದಿದ್ದರು. ಪ್ರಚಾರ ನಡೆಯುವಾಗ ಯಾವುದೇ ಗಲಾಟೆ ನಡೆದಿರಲಿಲ್ಲ. 25 ನಿಮಿಷ ಸಿದ್ದರಾಮಯ್ಯ ಮನೆ ಮುಂದೆ ಸಿದ್ದರಾಮಯ್ಯರನ್ನು ಭಾಷಣ ವೇಳೆ ಬೈದರು ಜನ ಸುಮ್ಮನಿದ್ದರು. ಅದೆಲ್ಲ ರೆಕಾರ್ಡ್ ಕೂಡ ಆಗಿದೆ. ಗಲಾಟೆ ಆಗಿದ್ದರೆ ವಿಡಿಯೋ ಬಿಡುಗಡೆ ಮಾಡಲಿ. ಪೊಲೀಸ್ ಮಾಹಿತಿ ಪ್ರಕಾರ ದುಡ್ಡು ಹಂಚಿಕೆ ವಿಚಾರದಲ್ಲಿ ಆಗಿರುವ ಗಲಾಟೆ ಇದು. ಅಡ್ಮಿಟ್ ಆದಾ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಡಾಕ್ಟರ್ ಕೇಳಿದರು ಏನಾಗಿದೆ ಅಂತ ಆತ ಹೇಳಿಲ್ಲ. ಪೋನ್ ಬರುವವರೆಗೆ ಅವನು ಏನು ಮಾತನಾಡಿಲ್ಲ. ಪೋನ್ ಬರುವವರೆಗೆ ಆಸ್ಪತ್ರೆಯಲ್ಲಿ ಸುಮ್ಮನೆ ಮಲಗಿಸಿದ್ದರು. ಬಳಿಕ ಆಡ್ಮಿಟ್ ಮಾಡಿಸಿದ್ದಾರೆ. ಎಸ್ ಪಿ ಕೂಡ ಯಾವುದೇ ಗಲಾಟೆ ಆಗಿಲ್ಲ ಅಂತ ಮಾಹಿತಿ ನೀಡಿದ್ದಾರೆ ಆದರೆ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಗಲಾಟೆ ಮಾಡಿಸುವ ಸಲುವಾಗಿಯೇ ವರುಣದಲ್ಲಿ ಓಡಾಟ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಯಾರು ? ಬೇರೆ ಕ್ಷೇತ್ರಗಳಿಲ್ಲದ ಪ್ರತಾಪ್ ಸಿಂಹ ಓಡಾಟ ವರುಣದಲ್ಲೇ ಯಾಕೆ ? ಪ್ರತಾಪ್ ಸಿಂಹರಿಗೆ ನಾಚಿಕೆ ಇದೆಯಾ ? ಎಂದು ಪ್ರಶ್ನಿಸಿದರು.
ಬಾಗಲಕೋಟೆ: ಮೋದಿ ವಿಷಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮುಧೋಳ ನಗರದಲ್ಲಿ ತಿರುಗೇಟು ನೀಡಿದ ಗೋವಿಂದ ಎಂ ಕಾರಜೋಳ, ಕಾಂಗ್ರೆಸ್ ಸಂಸ್ಕೃತಿನೇ ಕೀಳಿದೆ. ದೇಶದ ಪ್ರಧಾನಿ ಬಗ್ಗೆ ಏನು ಶಬ್ದ ಬಳಸಬೇಕು ಅಂತ ಗೊತ್ತಿಲ್ಲ. ಇವತ್ತು ಸಿದ್ದರಾಮಯ್ಯ ಕೂಡ ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತಾಡುತ್ತಾರೆ. ಇದು ಕಾಂಗ್ರೆಸ್ ಸಂಸ್ಕೃತಿ. ಸಂಸ್ಕೃತಿ ಗೊತ್ತಿಲ್ಲದವರು ಕಾಂಗ್ರೆಸ್ನಲ್ಲಿದಾರೆ. ದೇಶದ ಪ್ರಧಾನಿ ಬಗ್ಗೆ ಗೌರವದ ಬಗ್ಗೆ ಮಾತಾಡುವ ಪರಿಜ್ಞಾನ ಇಲ್ಲದವರು ಕಾಂಗ್ರೆಸ್ನವರು. ನಾನು ಅದನ್ನು ಖಂಡಿಸುತ್ತೇನೆ. ಮೋದಿಗೆ ಕಳಂಕ ಬರುವಂತೆ ಮಾತಾಡಿದವರು ರಾಹುಲ್ ಗಾಂಧಿ. ವ್ಯವವಹಾರ ಜ್ಞಾನ ಇಲ್ಲದಂತಹ ರಾಹುಲ್ ಗಾಂಧಿ ಕಾಂಗ್ರೆಸ್ನ ಸರ್ವಶ್ರೇಷ್ಟ ನಾಯಕ. ಇದು ದೇಶದ ದುರ್ದೈವ ಎಂದರು.
ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಶಿವಮೊಗ್ಗದಲ್ಲಿ ಏರ್ಪೋರ್ಟ್ ನಿರ್ಮಿಸಿದೆ. ಆದರೆ ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಡೆಯಲು ಮುಂದಾಗಿದ್ದರು ಎಂದು ಮೂಡಿಗೆರೆ ಕ್ಷೇತ್ರದ ಕಳಸದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ನಾವು ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಚಿಂತೆಯಾಗಿದೆ. ಯಡಿಯೂರಪ್ಪ ಅವರು ಪಿಎಫ್ಐ ಸಂಘಟನೆ ವಿರುದ್ಧ 175 ಕೇಸ್ ಹಾಕಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕೇಸ್ಗಳನ್ನು ವಾಪಸ್ ಪಡೆಯುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಪೊಲೀಸ್ ನೇಮಕಾತಿಯಲ್ಲೂ ಭ್ರಷ್ಟಾಚಾರ ಆಗಿದೆ ಎಂದರು.
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅಂದರೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿದ್ದೆ ಬರಲ್ಲ. ಪ್ರಧಾನಿ ಮೋದಿಯವರನ್ನು ಖರ್ಗೆ ವಿಷದ ಸರ್ಪ ಎಂದು ಹೇಳಿದ್ದಾರೆ. ಸರ್ಪ ಶಿವನ ಕೊರಳಲ್ಲಿ ಇರುತ್ತದೆ. ಜಗತ್ತಿನ ಎಲ್ಲಾ ವಿಷವನ್ನು ಕುಡಿದ ನೀಲಕಂಠನ ಸಂಕೇತ. ಪ್ರಧಾನಿ ಮೋದಿ ಭಯೋತ್ಪಾದನೆಯನ್ನು ಹೊಡೆದೋಡಿಸಿದ್ದಾರೆ. ಸಶಕ್ತ ಭಾರತ ಕಟ್ಟಲು ಅನೇಕ ರೀತಿಯ ವಿಷ ಕುಡಿದಿದ್ದಾರೆ. ಪ್ರಧಾನಿ ಮೋದಿ ಅನೇಕ ರೀತಿಯ ವಿಷ ಕುಡಿದು ನೀಲಕಂಠ ಆಗಿದ್ದಾರೆ. ಮೋದಿ ನೇತೃತ್ವದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಸೋಲುವ ಸ್ಥಿತಿಗೆ ಬಂದಿದೆ. ಕಲಬುರಗಿ ಜಿಲ್ಲೆ ಸೇಡಂನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಪರ ನಾನು ಚುನಾವಣಾ ಪ್ರಚಾರ ಮಾಡುತ್ತೇನೆ. ಪತಿ ಶಿವರಾಜ್ಕುಮಾರ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ನಟ ಶಿವರಾಜ್ಕುಮಾರ್ ಅವರು 3 ದಿನ ಪ್ರಚಾರಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಗೀತಾ ಶಿವರಾಜ್ಕುಮಾರ್ ಹೇಳಿದ್ದಾರೆ.
ಚಿಕ್ಕಮಗಳೂರು: ಈ ಚುನಾವಣೆ ಸತ್ಯ-ಅಸತ್ಯದ ಮಧ್ಯೆ ನಡೆಯುತ್ತಿರುವ ಚುನಾವಣೆ. ಈ ಚುನಾವಣೆ ಧರ್ಮ-ಅಧರ್ಮದ ಮಧ್ಯೆ ನಡೆಯುತ್ತಿರುವ ಚುನಾವಣೆ. ಪ್ರಧಾನಿ ನರೇಂದ್ರ ಮೋದಿಯವರು ನೀವು ಬೂತ್ ಗೆಲ್ಲಸಿ, ನಾನು ದೇಶ ಗೆಲ್ಲಿಸುತ್ತೇನೆ ಎಂದಿದ್ದಾರೆ. ಮೋದಿ ರಾಜ್ಯದಲ್ಲಿ ಬಹುಮತದ ಸರ್ಕಾರ ತರುವ ಸಂಕಲ್ಪ ಮಾಡಿದ್ದಾರೆ. ನಿಮ್ಮನ್ನು ಭೂಗಳ್ಳರು ಎನ್ನುತ್ತಿದ್ದರು, ಅಧಿಕಾರಿಗಳು ಹೆದುರಿಸುತ್ತಿದ್ದರು. ಅದೇ ಭೂಮಿಯನ್ನ ನಿಮಗೆ ಗುತ್ತಿಗೆ ಕೊಡುವುದಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಅಭಿವೃದ್ಧಿಯಾಗುತ್ತೆ ಎಂದು ಜಿಲ್ಲೆಯ ಕಳಸ ಪಟ್ಟಣದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಲಬುರಗಿ: ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುತ್ತದೆ. ಮೀಸಲಾತಿ ನೀಡುವಾಗ ಜೇನುಗೂಡಿಗೆ ಕಲ್ಲು ಹಾಕಬೇಡಿ ಅಂತ ಕಾಂಗ್ರೆಸ್ ಹೇಳಿತ್ತು. ನಾನು ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನಾಡಿನಿಂದ ಬಂದಿದ್ದೇನೆ. ಜೇನು ಕಚ್ಚಿದ್ದರೂ ಪರವಾಗಿಲ್ಲಾ ಅಂತ ತಿಳಿದು ಮೀಸಲಾತಿ ಜಾರಿಗೊಳಿಸಿದ್ದೇನೆ. ಕಾಂಗ್ರೆಸ್ ದಿನಕ್ಕೊಂದು ಗ್ಯಾರಂಟಿ ನೀಡುತ್ತಿದ್ದಾರೆ. ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದಾರೆ. ಈ ಯೋಜನೆಯನ್ನು ಈಗಾಗಲೇ ನಾವು ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿಗೆ ಇವರು ಹೇಳಿದ್ದು ಅವರಿಗೆ ಕೇಳಲ್ಲಾ. ಮೇ 10 ರವರಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ನಂತರ ಗಳಗಂಟಿ ಆಗುತ್ತದೆ. ಕಾಂಗ್ರೆಸ್ ದೇತು ದಿಲಾತು ದೇನೆವಾಲೋಕೋ ದಿಕಾದೋ ನೀತಿಯಾಗಿದೆ. ಕಾಂಗ್ರೆಸ್ನವರ ಕೈಯಲ್ಲಿ ಏನು ಸಿಕ್ಕರೂ ಅದು ದನದ ಕೊಟ್ಟಿಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಯಲ್ಲಿ ಹೇಳಿದ್ದಾರೆ.
ಕಲಬುರಗಿ: ಮೀಸಲಾತಿ ಕೇಳಲು ಲಿಂಗಾಯತರು ಬಿಕ್ಷಕರಲ್ಲಾ ಅಂತ ಕಾಂಗ್ರೆಸ್ನವರು ಹೇಳಿದ್ದಾರೆ. ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗದವರು ಬಿಕ್ಷುಕರಾ? ಕಾಂಗ್ರೆಸ್ ಎಲ್ಲರನ್ನು ಬಿಕ್ಷುಕರಂತೆ ನೋಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ಅವರ ಓಲೈಕೆ ಮಾಡುತ್ತಾರೆ. ಒಳ ಮೀಸಲಾತಿ ಮತ್ತು ಮೀಸಲಾತಿ ಹೆಚ್ಚಾಗಬೇಕು ಅನ್ನೋದು ಮೂವತ್ತು ವರ್ಷಗಳ ಬೇಡಿಕೆ ಈಡೇರಿಸಿದ್ದೇನೆ. ಇಷ್ಟು ವರ್ಷ ಈ ಜನಾಂಗ ಬಾವಿಯಲ್ಲಿತ್ತು. ಅವರನ್ನು ಬಾವಿಯಿಂದ ನಾವು ಅವರನ್ನು ಎತ್ತಿ ಹೊರಗೆ ತಂದಿದ್ದೇವೆ. ಇದೀಗ ಕಾಂಗ್ರೆಸ್ ಮತ್ತೆ ಅವರನ್ನು ಬಾವಿಗೆ ಹಾಕಲು ಮುಂದಾಗಿದ್ದಾರೆ ಎಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಕಲಬುರಗಿ: ನಾನು ಭಾರತೀಯಳು ಅನ್ನುವ ಹೆಮ್ಮೆಯ ಜೊತೆಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋ ಹೆಮ್ಮೆಯಿದೆ. ಮಹಿಳೆಯರಿಗೆ ಅಗ್ರಸ್ಥಾನ ನೀಡಿದ್ದು ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಪಕ್ಷ ಉದ್ದಾರಕ್ಕೆ ತೀರ್ಮಾನ ಕೈಗೊಂಡಿಲ್ಲ. ದೇಶದ ಅಭಿವೃದ್ಧಿಗೆ ಅನೇಕ ನಿರ್ಧಾರ ಕೈಗೊಂಡಿದ್ದಾರೆ ಎಂದು ನಟಿ ಶೃತಿ ಹೇಳಿದ್ದಾರೆ.
ತುಮಕೂರು: ಮೇ 6ರಂದು ತುಮಕೂರಿನಲ್ಲಿ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ ನಡೆಸಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಕುರಿತು ಜಿಲ್ಲೆಯ ಬಿಜೆಪಿ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ತೆಲಂಗಾಣ ಬಿಜೆಪಿ ಮುಖಂಡ ವೀರೇಂದ್ರ ಗೌಡ ಜಿಲ್ಲೆಯ ಬಿಜೆಪಿ ಕಚೇರಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಗೀತಾ ಶಿವರಾಜ್ಕುಮಾರ್ ಬರಮಾಡಿಕೊಂಡಿದ್ದಾರೆ. ಅಲ್ಲದೇ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ನಿಂಗಯ್ಯ ಸಹ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಲಬುರಗಿ: ಮೋದಿಗೆ ವಿಷದ ಹಾವು ಎಂದು ಹೇಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ. ಇಡಿ ಜಗತ್ತು ಮೆಚ್ಚಿರುವಂತಾ ಒಬ್ಬ ಮಹಾನ್ ನಾಯಕನ ಬಗ್ಗೆ ಖರ್ಗೆ ಮಾತನಾಡಿರುವುದು ಖಂಡನಾರ್ಹ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ರಾಜ್ಯದಲ್ಲಿ ಮತಗಳನ್ನ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದು ಕಲಬುರಗಿಯಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕಲಬುರಗಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಹೆಣ್ಣು ಮಗಳು ಹುಟ್ಟಿದರೆ ಮನೆ ಮಂದಿ ಅಳುವ ಪರಿಸ್ಥಿತಿ ಇತ್ತು. ಅದನ್ನ ಮನಗಂಡು ನಾನು ಸಿಎಂ ಇದ್ದಾಗ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದೆ. ದೇಶದ ಪ್ರಧಾನಿ ಬಗ್ಗೆ ಖರ್ಗೆ ಅವಹೇಳನ ಕಾರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಪಂಚಾಯತಿ ಅಧ್ಯಕ್ಷನು ಕೂಡಾ ರಾಜೀನಾಮೆ ಕೊಡಲು ಹಿಂದೆಟು ಹಾಕುತ್ತಾರೆ ಆದರೆ ನಾನು ರಾಜೀಕೊಟ್ಟೆ. ಅವತ್ತೆ ನಾನು ತೀರ್ಮಾನ ಮಾಡಿದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಬೇಕೆಂದು. ಹೀಗಾಗಿ ಈ ಚುನಾವಣೆಯಲ್ಲಿ ರಾಜ್ಯದ ಮೂಲೆ ಮೂಲೆಗೆ ಹೋಗಿ ಪ್ರಚಾರ ಮಾಡುತ್ತಿರುವೆ. ಹಣದ ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಹುನ್ನಾರ ನಡಸಿದೆ ಎಂದು ವಾಗ್ದಾಳಿ ಮಾಡಿದರು.
ದೇವನಹಳ್ಳಿ: ಮತಯಾಚನೆಗೆ ತೆರಳಿದ್ದ ದೇವನಹಳ್ಳಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಜೊತೆ ಯುವ ರೈತರು ವಾಗ್ವಾದ ನಡೆಸಿದ್ದಾರೆ. ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧಿಸಿ ರೈತರು ಒಂದು ವರ್ಷದಿಂದ ಧರಣಿ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ರಾಜಕಾರಣಿಗಳು ಸ್ಪಂದಿಸಿಲ್ಲ. ಇದರಿಂದ ರೈತು ರೋಸಿ ಹೋಗಿದ್ದರು. ಈ ಹಿನ್ನೆಲೆ ನಿನ್ನೆ (ಏ.27) ರಾತ್ರಿ ದೇವನಹಳ್ಳಿ ತಾಲೂಕಿನ ಪೋಲನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ ಬಿಜೆಪಿ ಅಭ್ಯರ್ಥಿಗೆ ರೈತರು
ರೈತರ ಹೋರಾಟದ ವೇಳೆ ಬರದವರು ಈಗ ಬಂದಿದ್ದೀರಾ. ಎಂಟಿಬಿ ನಾಗರಾಜ್ ಸೇರಿದಂತೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ವಾಗ್ವಾದಕ್ಕಿಳಿದ ಯುವ ರೈತು ವಾಗ್ವಾದಕ್ಕೆ ಇಳಿದಿದ್ದಾರೆ.
ಬೆಂಗಳೂರು: ನಗರದಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ನಡೆಸಲಿದ್ದಾರೆ. ಆಪ್ತರ ಪರ ಪ್ರಚಾರದ ಅಖಾಡಕ್ಕೆ ಇಳಿಯಲಿರುವ ಇಬ್ಬರೂ ಅಧ್ಯಕ್ಷರು ಇಳಿಯುತ್ತಿದ್ದು, ಸಂಜೆ 5:30 ಕ್ಕೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ರೋಡ್ ಶೋ ನಡೆಸಲಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಅವರ ರೋಡ್ ಶೋ ಆರಂಭವಾಗಿದೆ. ಸುದೀಪ್ ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಪರ ಮತಯಾಚನೆ ಮಾಡುತ್ತಿದ್ದಾರೆ. ದೇವಾಂಗ ಪೇಟೆಯಿಂದ ಬೆಂಗೇರಿ ಕಲ್ಮೇಶ್ವರ ದೇವಸ್ಥಾನದವರೆಗೆ ರೋಡ್ ಶೋ ನಡೆಯಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ನಾನಾ ಕಡೆಗಳಲ್ಲಿ ರೋಡ್ ಶೋ ಮಾಡಲಿದ್ದಾರೆ. ಮೊದಲಿಗೆ ನಾಳೆ ಅಂದರೆ ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ರೋಡ್ ಶೋ ಆರಂಭಿಸುವ ಮೂಲಕ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ಇನ್ನು ಮೋದಿ ರೋಡ್ ಶೋಗಾಗಿ ದೆಹಲಿಯಿಂದ ಬುಲೆಟ್ ಪ್ರೂಫ್ ವಾಹನ ಬೆಂಗಳೂರಿಗೆ ಆಗಮಿಸಿದೆ. ಈ ಬುಲೆಟ್ ಪ್ರೂಫ್ ಕಾರಿನಲ್ಲಿ ನಾಳೆ ಸಂಜೆ ಬೆಂಗಳೂರು ನಾಡಿದ್ದು ಸಂಜೆ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾನುವಾರ (ಏ.30)ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಾರೆ. ನಗರದ ಗನ್ ಹೌಸ್ ವೃತ್ತದಿಂದ ರೋಡ್ ಶೋ ಆರಂಭವಾಗುತ್ತದೆ. ಈ ವೇಳೆ ನಾದಸ್ವರ ವಾದನದೊಂದಿಗೆ ಪ್ರಧಾನಿ ಮೋದಿಯವರಿಗೆ ಸ್ವಾಗತ ಮಾಡುತ್ತೇವೆ. ಅಲ್ಲದೇ ಮೈಸೂರಿನ ವಿಶೇಷತೆಗಳಾಗಿರುವ ವಸ್ತುಗಳನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡುತ್ತಾರೆ. ನಂತರ ಗನ್ ಹೌಸ್ ವೃತ್ತದಿಂದ ರೋಡ್ ಶೋ ಆರಂಭವಾಗುತ್ತದೆ. ಸಂಸ್ಕೃತ ಪಾಠಶಾಲೆ ವೃತ್ತ, ಕೆ ಆರ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಆರ್ ಎಂ ಸಿ ವೃತ್ತ, ಹೈವೇ ವೃತ್ತದ ಮಾರ್ಗವಾಗಿ ಮಿಲೇನಿಯಂ ವೃತ್ತದತ್ತದವರೆಗೆ ರೋಡ್ ಶೋ ನಡೆಯುತ್ತದೆ. ಸುಮಾರು 4 ಕಿ ಮೀ ರೋಡ್ ಶೋ ಇದಾಗಲಿದೆ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಜಗದೀಶ್ ಶೆಟ್ಟರ್ ಅವರು 100ಕ್ಕೆ 100 ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಯುವಕ ಮಂಜುನಾಥನ ನಿವಾಸಕ್ಕೆ ಇಂದು (ಏಪ್ರಿಲ್ 28) ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ.
ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ನವರ ವೋಟ್ ಬ್ಯಾಂಕ್ ಛಿದ್ರವಾಗಿದೆ. ಹಾಗಾಗಿ ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ವೋಟ್ ಕೈತಪ್ಪಿ ಅವರ ಡ್ಯಾಂ ಒಡೆದಿದೆ. ಸಿದ್ದರಾಮಯ್ಯ ವಿರುದ್ಧ 8 ಸಾವಿರ ಕೋಟಿ ಭ್ರಷ್ಟಾಚಾರ ಆರೋಪವಿದೆ. ಇದಕ್ಕೆ ಉತ್ತರ ಕೊಡಬೇಕಾಗುತ್ತೆ ಅಂತಾ ಹೀಗೆ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published On - 10:13 am, Fri, 28 April 23