ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ(Karnataka Assembly Elections 2023) ಕಾವು ರಂಗೇರಿದೆ. ಅಳೆದುತೂಗಿ ಕಾಂಗ್ರೆಸ್ (C0ngress) ತನ್ನ ಮೊದಲ ಸಾಲಿನ ಹುರಿಯಾಳುಗಳನ್ನ ಅಖಾಡಕ್ಕಿಳಿಸಿದೆ. ಅಹಿಂದ ಮತಗಳ ಭದ್ರಕೋಟೆ, ಕಲ್ಯಾಣ ಕರ್ನಾಟಕ(kalyana karnataka) ಕಬ್ಜಕ್ಕೆ ಕೈಪಡೆ ನೂರೆಂಟು ಲೆಕ್ಕಚಾರ ಹಾಕುತ್ತಿದೆ. ಇಷ್ಟು ದಿನ ಹೈದರಾಬಾದ್ ಕರ್ನಾಟಕದ ಅಧಿಪತ್ಯಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿದ್ದ ಸಂಗ್ರಾಮಕ್ಕೆ ಈಗ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಧುಮುಕಿದ್ದಾರೆ. ತನ್ನದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನ ಕಟ್ಟಿಕೊಂಡಿರುವ ರೆಡ್ಡಿ ರಾಷ್ಟ್ರೀಯ ಪಕ್ಷಗಳಿಗೆ ಮಗ್ಗಲ ಮುಳ್ಳಾಗಿದ್ದಾರೆ. ಅಷ್ಟಕ್ಕೂ ಕಲ್ಯಾಣ ಕರ್ನಾಟಕ ಗೆಲ್ಲಲು 3 ಪಕ್ಷಗಳ ರಣತಂತ್ರಗಳೇನು.? ಸದ್ಯದ ಬಲಾಬಲಗಳೇನು? ರೆಡ್ಡಿ ಮಾಸ್ಟರ್ ಪ್ಲ್ಯಾನ್ಗಳೇನು? ಎನ್ನುವುದು ಈ ಕೆಳಗಿನಂತಿದೆ ನೋಡಿ.
ಇದನ್ನೂ ಓದಿ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾದ ಸಿದ್ದರಾಮಯ್ಯ, ವರುಣಾ ಜೊತೆ 2ನೇ ಕ್ಷೇತ್ರ ಯಾವುದು?
ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ. ಅರ್ಟಿಕಲ್ 371ರ ಅಡಿ ವಿಶೇಷ ಸ್ಥಾನಮಾನ ಸಿಕ್ಕ ಬಳಿಕ ಈ ಏಳು ಜಿಲ್ಲೆಗಳ ರಾಜಕೀಯ ಚಿತ್ರಣವೇ ಬದಲಾಗಿದೆ. SC, ST, ಮುಸ್ಲಿಂ ಸೇರಿದಂತೆ ಹಿಂದುಳಿದ ವರ್ಗದ ಮತಗಳೇ ನಿರ್ಣಾಯಕವಾಗಿರುವ ಕಲ್ಯಾಣ ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ಗರಿಷ್ಠ ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲು ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿವೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಟ್ಟು 41 ವಿಧಾನ ಕ್ಷೇತ್ರಗಳಿವೆ. ಈ ಪೈಕಿ ಕಾಂಗ್ರೆಸ್ 19, ಬಿಜೆಪಿ 18 ಹಾಗೂ ಜೆಡಿಎಸ್ 4 ಸ್ಥಾನಗಳನ್ನು ಕಳೆದ ಚುನಾವಣೆಯಲ್ಲಿ ಗಳಿಸಿಕೊಂಡಿವೆ. ಕಲಬುರಗಿ ಜಿಲ್ಲೆಯ ಒಟ್ಟು 9 ಮತಕ್ಷೇತ್ರಗಳ ಪೈಕಿ ಕಾಂಗ್ರೆಸ್ 4, ಬಿಜೆಪಿ 5 ಸ್ಥಾನ ಗೆಲುವು ಸಾಧಿಸಿದ್ರೆ, ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ 1, ಬಿಜೆಪಿ 2, ಜೆಡಿಎಸ್ 1 ಸ್ಥಾನದಲ್ಲಿ ಗೆದ್ದಿದೆ. ಬೀದರ್ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಬಿಜೆಪಿ 2 ಹಾಗೂ ಜೆಡಿಎಸ್ 1 ಸ್ಥಾನ ಪಡೆದುಕೊಂಡಿದೆ. ಇನ್ನು ಜನಾರ್ಧನ ರೆಡ್ಡಿ ಪ್ರಭಾವ ಇದ್ದ ಬಳ್ಳಾರಿಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 2 ಸ್ಥಾನದಲ್ಲಿ ಗೆದ್ದಿದೆ. ವಿಜಯನಗರದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2, ಬಿಜೆಪಿ 3 ಸ್ಥಾನದಲ್ಲಿ ಗೆದ್ದಿದ್ರೆ, ರಾಯಚೂರು ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಬಿಜೆಪಿ 2, ಜೆಡಿಎಸ್ 2 ಸ್ಥಾನದಲ್ಲಿ ಗೆದ್ದಿದೆ. ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2 ಹಾಗೂ ಬಿಜೆಪಿ 3 ಸ್ಥಾನದಲ್ಲಿ ಗೆದ್ದಿದೆ.
ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸಲು ಸ್ವತಃ ಪ್ರಧಾನಿ ಮೋದಿ ರಣರಂಗಕ್ಕೆ ಇಳಿದಿದ್ರು. ಯಾದಗಿರಿ, ಕಲಬುರಗಿಯಲ್ಲಿ ಸುಮಾರು 10,800 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿ ರಣಕಹಳೆಯನ್ನೂ ಮೊಳಗಿಸಿದ್ರು. ಆದ್ರೆ, ಯಾವಾಗ ರೆಡ್ಡಿ ಬಿಜೆಪಿ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ರೋ ಹೈದ್ರಾಬಾದ್ ಕರ್ನಾಟದ ರಾಜಕೀಯ ಚಿತ್ರಣವೇ ಬದಲಾಗಿತ್ತು. ಮುಖ್ಯವಾಗಿ ಕಲ್ಯಾಣ ಕರ್ನಾಟಕವನ್ನೇ ಟಾರ್ಗೆಟ್ ಮಾಡಿರುವ ರೆಡ್ಡಿ ಬಿಜೆಪಿ ಜೊತೆ ಕಾಂಗ್ರೆಸ್ ರಣಕಲಿಗಳನ್ನ ಸೋಲಿಸಲು ಖೆಡ್ಡಾ ತೋಡಲು ಶುರು ಮಾಡಿದ್ದಾರೆ.
ಬಳ್ಳಾರಿ ರಾಜಕೀಯದಿಂದ ದೂರವಾದ ಮೇಲೆ ಗಂಗಾವತಿಯನ್ನೇ ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿರುವ ರೆಡ್ಡಿ, ಗಂಗಾವತಿಂದಯಿಂದಲೇ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ಗಂಗಾವತಿಯಿಂದ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಅಂಜನಾದ್ರಿಯ ಪುಣ್ಯಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿ ನಡೆಯೋದು ಫಿಕ್ಸ್.
ಕಾಂಗ್ರೆಸ್ ಸೇಡಂ ಮತಕ್ಷೇತ್ರದಿಂದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ಗೆ ಮಣೆ ಹಾಕಿದೆ. ಪಾಟೀಲ್ಗೆ ಎದುರಾಳಿಯಾಗಿ ರೆಡ್ಡಿ ತನ್ನ ಅಳಿಯ ಲಲ್ಲೇಶ್ ರೆಡ್ಡಿಯನ್ನೆ ಕಣಕ್ಕಳಿಸಿದ್ದಾರೆ. ಸೇಡಂ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದಲ್ಲಿ ರೆಡ್ಡಿ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ರೆಡ್ಡಿ ಮುಸ್ಲಿಂ ಮತಗಳ ಮೇಲೆಯೂ ಕಣ್ಣಿಟ್ಟಿರೋದು ಕಾಂಗ್ರೆಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಕನಕಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಶಿವರಾಜ ತಂಗಡಗಿಯನ್ನ ಕಣಕ್ಕಿಳಿಸಿದೆ. ಆದ್ರೆ ಕನಕಗಿರಿಯಿಂದ KRPP ಅಭ್ಯರ್ಥಿಯಾಗಿ ರೆಡ್ಡಿ, ತನ್ನ ಸ್ನೇಹಿತನ ಪುತ್ರನ ಡಾ. ಚಾರುಲ್ ದಾಸರಿಯನ್ನ ಅಖಾಡಕ್ಕಿಳಿಸಿದ್ದು, ರೆಡ್ಡಿಯೇ ಪ್ರಚಾರ ಮಾಡಿದ್ದಾರೆ. ದಲಿತ ಹಾಗೂ ಮುಸ್ಲಿಂಗಳು ರೆಡ್ಡಿ ಪಾರ್ಟಿಗೆ ಶಿಫ್ಟ್ ಆಗುತ್ತಾ ಅನ್ನೋ ಆತಂಕ ಶುರುವಾಗಿದೆ.
ಹೂವಿನ ಹಡಗಲಿ ಕ್ಷೇತ್ರದಲ್ಲಿ ಎದ್ದಿರುವ ಅಸಮಧಾನದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ರೆಡ್ಡಿ ದಾಳ ಉರುಳಿಸಿದ್ದಾರೆ. ಟಿಕೆಟ್ ಸಿಗದೆ ಕೋಪಗೊಂಡಿರುವ ಕೃಷ್ಣನಾಯಕ್ರನ್ನ KRPPಗೆ ಸೆಳೆದು, ಪಿಟಿ ಪರಮೇಶ್ವರ್ ನಾಯಕ್ ವಿರುದ್ಧ ಕಣಕ್ಕಿಳಿಸುವ ತಯಾರಿಗಳು ನಡೆಯುತ್ತಿವೆ. ಏನಾದ್ರೂ ಕೃಷ್ಣನಾಯಕ್ ರೆಡ್ಡಿ ಪಾಳಯ ಸೇರಿದ್ರೆ, ಸಂಡೂರು, ಹಗರಿಬೊಮ್ಮಾನಹಳ್ಳಿಯಲ್ಲೂ ಕಾಂಗ್ರೆಸ್ಗೆ ಶಾಕ್ ತಟ್ಟಲಿದೆ.
ಜನಾರ್ದನ ರೆಡ್ಡಿ ಟಾರ್ಗೆಟ್ ಕೇವಲ ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ. ಬಳ್ಳಾರಿ ನಗರ, ಕೊಪ್ಪಳ , ಯಲಬುರ್ಗಾ, ಕುಷ್ಟಗಿ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದ್ದಾರೆ. ಬಿಜೆಪಿ ಈ ಕ್ಷೇತ್ರಗಳಿಂದ ಯಾರನ್ನ ಕಣಕ್ಕಿಳಿಸುತ್ತೋ ಅನ್ನೋದನ್ನ ಕಾಯುತ್ತಿರುವ ರೆಡ್ಡಿ, ನೆಕ್ಸ್ಟ್ ಮುಂದಿನ ದಾಳ ಉರುಳಿಸುವ ಯೋಜನೆಯಲ್ಲಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಿಂದ ರೆಡ್ಡಿ ತನ್ನ ಪತ್ನಿ ಅರುಣಾಳನ್ನ ಕಣಕ್ಕಿಳಿಸಿದ್ದು, ಸಹೋದರ ಸೋಮಶೇಖರ್ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಖೆಡ್ಡಾ ತೋಡುತ್ತಿದ್ದಾರೆ. ಇನ್ನೂ ಕೊಪ್ಪಳದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಸಂಸದ ಸಂಗಣ್ನ ಕರಡಿ ಮತ್ತು ಸಿ.ವಿ ಚಂದ್ರಶೇಖರ್ ನಡುವೆ ತೀವ್ರ ಪೈಪೋಟಿನ ಇದ್ದು, ಟಿಕೆಟ್ ಮಿಸ್ಸಾದ ಅಭ್ಯರ್ಥಿಯನ್ನ ತನ್ನ ಪಕ್ಷಕ್ಕೆ ಸೆಳೆಯಲು ರೆಡ್ಡಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಜೊತೆಗೆ ಯಲಬುರ್ಗಾ ಕ್ಷೇತ್ರದಿಂದ ಗಾಣಿಗ ಅಭ್ಯರ್ಥಿಗೆ ಟಿಕೆಟ್ ನೀಡಿದ ರಾಯರೆಡ್ಡಿಗೂ ಶಾಕ್ ನೀಡುವ ತಯಾರಿಯಲ್ಲಿದ್ದಾರೆ.
ಮೊದಲ ಚುನಾವಣೆಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಭರ್ಜರಿ ಇಂಪ್ಯಾಕ್ಟ್ ಮಾಡುವ ತರಾತರಿಯಲ್ಲಿರುವ ರೆಡ್ಡಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಮಗ್ಗಲ ಮುಳ್ಳಾಗಿದ್ದಾರೆ. ಕರ್ನಾಟಕದ ಗದ್ದುಗೆ ಹಿಡಿಯಲು ಇಷ್ಟು ದಿನ ಬಿಜೆಪಿ ಮತ್ತು ಜೆಡಿಎಸ್ ಜೊತೆ ಗುದ್ದಾಡುತ್ತಿದ್ದ ಕೈ ಪಡೆ, ಕಲ್ಯಾಣ ಕರ್ನಾಟಕವನ್ನ ಉಳಿಸಿಕೊಳ್ಳಲು ರೆಡ್ಡಿ ಟೀಂನೊಂದಿಗೂ ಕಾಳಗ ಮಾಡಬೇಕಿದೆ.
ಇನ್ನಷ್ಟು ರಾಜಕೀಯ ಹಾಗೂ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ