ಬೆಂಗಳೂರು: ಕರ್ನಾಟಕದ ಜನರಿಗೆ ಮನಃಪೂರ್ವಕವಾಗಿ ಅಭಿನಂದನೆಗಳು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು. ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು, ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಕೆಲವೇ ಹೊತ್ತಿನಲ್ಲಿ ನೂತನ ಸರ್ಕಾರ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಗ್ಯಾರಂಟಿಗಳು ಅನುಮೋದನೆ ಆಗಲಿವೆ. ಜನರು ಪ್ರೀತಿ, ಶಕ್ತಿ ಕಾಂಗ್ರೆಸ್ಗೆ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೊದಲ ಕ್ಯಾಬಿನೆಟ್ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಹಿಂದಿನ ಸರ್ಕಾರದಲ್ಲೂ ನಾವು ಅಭಿವೃದ್ಧಿ ಕೆಲಸ ಮಾಡಿದ್ದೆವು. ನುಡಿದಂತೆ ನಾವು ನಡೆಯುತ್ತೇವೆ ಎಂದು ಹೇಳಿದರು.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜಪಾನ್ಗೆ ಹೋಗಿದ್ದಾಗ ನೋಟ್ ಬ್ಯಾನ್ ಆಗಿತ್ತು. ಈಗಲೂ ಮೋದಿ ಜಪಾನ್ ಪ್ರವಾಸ ವೇಳೆ $2000 ನೋಟು ಬ್ಯಾನ್ ಆಗಿದೆ. ನಮ್ಮ ಸರ್ಕಾರ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದನ್ನೂ ಓದಿ: Karnataka CM Oath Taking: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ
ಇದಕ್ಕೂ ಮುನ್ನ, ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಉಪ ಮುಖ್ಯಮಮತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಡಾ. ಜಿ ಪರಮೇಶ್ವರ, ಕೆಹೆಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಬಿಝಡ್ ಜಮೀರ್ ಅಹ್ಮದ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ