Karnataka Assembly Elections 2023 Live News Updates: ವಿಧಾನಸಭೆ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರ ನಾಯಕರು ರಾಜ್ಯ ಪ್ರವಾಸ ಮಾಡಿ ಮತಬೇಟೆ ಶುರು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿನ್ನೆ (ಏ.23) ವಿಜಯಪುರ ಮತ್ತು ಬಾಗಲಕೋಟೆಗೆ ಭೇಟಿ ನೀಡಿದ್ದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ತೆರಳಿ ಬಸವೇಶ್ವರರ ಐಕ್ಯ ಸ್ಥಳ ದರ್ಶನ ಪಡೆದರು. ನಂತರ ವಿಜಯಪುರದಲ್ಲಿ ರೋಡ್ ಶೋ ನಡೆಸಿದರು. ಇನ್ನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜನವಾಹಿನಿ ಆರಂಭವಾಗಿದ್ದು, ಇದರ ಮೂಲಕ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
ಹುಬ್ಬಳ್ಳಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅದರಂತೆ ಬಿಜೆಪಿ ಚಾಣಕ್ಯ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದ್ದು, ಶೆಟ್ಟರ್ ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಭಾಗಿಯಾಗಿದ್ದಾರೆ. ಸೆಂಟ್ರಲ್ ಕ್ಷೇತ್ರ ಸೇರಿ ಜಿಲ್ಲೆಯ 7 ಕ್ಷೇತ್ರದಲ್ಲೂ ಬಿಜೆಪಿ ಗೆಲುವಿಗಾಗಿ ರಣತಂತ್ರ ರೂಪಿಸಲಾಗುತ್ತಿದೆ.
ಹಾವೇರಿ: ಸವಣೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಪೊಲೀಸರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆದರು. ಬೊಮ್ಮಾಯಿ ಭಾಷಣ ಮಾಡುತ್ತಿದ್ದಾಗ ಪೊಲೀಸ್ ಸಿಬ್ಬಂದಿಯೊಬ್ಬರು ಮೋಬೈಲ್ ಎತ್ತಿ ಹಿಡಿದು ಭಾಷಣ ರೆಕಾರ್ಡ್ ಮಾಡುತ್ತಿದ್ದರು. ಇದನ್ನು ನೋಡಿದ ಬೊಮ್ಮಾಯಿ, ನನ್ನ ಭಾಷಣವನ್ನು ಬೇರೆಯವರಿಗೆ ಕೇಳಿಸುವ ಕೆಲಸ ಪೋಲಿಸರು ಮಾಡಬಾರದು. ಇಂತಹ ಕೇಲಸವನ್ನು ಪೋಲಿಸರು ಮಾಡುವುದು ಇದು ಸರಿಯಲ್ಲ. ಇದು ನಾನು ಕೊಡುತ್ತಿರುವ ವಾರ್ನಿಂಗ್ ಮೊಬೈಲ್ ಒಳಗಡೆ ಇಡು ಎಂದರು.
ಬೆಂಗಳೂರು: ಮೀಸಲಾತಿ ವಿಚಾರವಾಗಿ ಕೇಂದ್ರ ಸಚಿವ ಅಮಿತ್ ಶಾ ಮಾತಾಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಯಾವ ರೀತಿ ಹೆಚ್ಚಳವಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶೇಕಡಾ 2ರಷ್ಟು ಹೆಚ್ಚುವರಿ ಮೀಸಲಾತಿ ಕೊಡಿ ಎಂದು ಕೇಳಿರಲಿಲ್ಲ. ಮುಸ್ಲಿಂ ಸಮುದಾಯ ಮೀಸಲಾತಿ ಕಿತ್ತು ಲಿಂಗಾಯತ, ಒಕ್ಕಲಿಗರು ಮೀಸಲಾತಿ ಕೊಡಿ ಎಂದು ಕೇಳಿರಲಿಲ್ಲ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಆಗದಂತೆ ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಬ್ಬರೂ ಅಸಮಾಧಾನಗೊಂಡಿದ್ದಾರೆ ಎಂದರು. ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಇಲಾಖೆ ಆರಂಭಿಸುತ್ತೇವೆ. ಹೂಡಿಕೆಗೆ ಅವಕಾಶ ಮಾಡಿಕೊಡಲು ಅನುಕೂಲ ಮಾಡಿಕೊಡುತ್ತೇವೆ ಎಂದರು.
ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ವೈದ್ಯರ ಸಲಹೆಯಂತೆ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಒಂದೆರಡು ತಿಂಗಳಿನಿಂದ ಪಂಚರತ್ನ ಯಾತ್ರೆ ಕೈಗೊಂಡು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೇ ರಾಜ್ಯದೆಲ್ಲೆಡೆ ಪ್ರವಾಸ ನಡೆಸಿದ್ದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿದಿದ ನಾರಾಯಣ ಅಲಿಯಾಸ್ ಕರಿಯಾನನ್ನು ಕೊಲೆ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯಲ್ಲಿ ಕೊಡವತ್ತಿ ಮೂಲದ ಭೂಮಿಕಾ ಎಂಬಾಕೆ ಪ್ರೀತಿಸಿ ಮದುವೆಯಾಗಿದ್ದ ಚೇತನ್ ಎಂಬಾತನ ಕೊಲೆ ಪ್ರಕರಣದಲ್ಲಿ ನಾರಾಯಣ್ ಎ6 ಆರೋಪಿಯಾಗಿದ್ದ. ಭೂಮಿಕಾ ಸಹೋದರ ಮತ್ತು ಇತರರು ಸೇರಿ ಚೇತನನನ್ನು 2021 ರಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದರು.
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸೀಕಲ್ ರಾಮಚಂದ್ರಗೌಡ ಗೆಲುವಿಗಾಗಿ ರೋಡ್ ಶೋ ಮಾಡುತ್ತಿದ್ದೇವೆ. ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಸುಧಾಕರ್, ಸೀಕಲ್ ಅಥವಾ ಕಟೀಲ್ಗಾಗಿ ನಡೆಯುತ್ತಿಲ್ಲ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ನಲ್ಲಿ ಕೆಲಸ ಮಾಡುತ್ತದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಡಬೇಕಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ ಅಭಿವೃದ್ಧಿ ಮಾಡುತ್ತಿದ್ದಾರೆ. 2018 ರಲ್ಲಿ ಕೊಟ್ಟಂತಹ ಎಲ್ಲ ಭರವಸೆಯನ್ನು ಬಿಜೆಪಿ ಈಡೇರಿಸಿದೆ. ಕುಮಾರಸ್ವಾಮಿ ಸರ್ಕಾರ ರೈತರ ಪರ ಯೋಜನೆಗಳಿಗೆ ಮನ್ನಣೆ ನೀಡಿಲ್ಲ. ಕರ್ನಾಟಕದ ಅಭಿವೃದ್ಧಿಗಾಗಿ ಮೋದಿಗಾಗಿ ಮತ ನೀಡಿ. ಕ್ಷೇತ್ರದ ಅಭಿವೃದ್ಧಿಗಾಗಿ ಸೀಕಲ್ಗೆ ಮತ ನೀಡಿ ಎಂದರು. ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಪಿಎಫ್ಐ ಮಾಡುತ್ತಿತ್ತು. ಸಿದ್ದರಾಮಯ್ಯ ಸರ್ಕಾರ ಪಿಎಫ್ಐಗೆ ಬೆಂಬಲ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಆ ಸಂಘಟನೆಯನ್ನೇ ಬ್ಯಾನ್ ಮಾಡಿದೆ. ಡಿಕೆಶಿವಕುಮಾರ್ ಪಿಎಫ್ಐ ಪರ ಧ್ವನಿ ಎತ್ತುತಿದ್ದಾರೆ. ಮುಸ್ಲಿಂರ ಮೀಸಲಾತಿಯನ್ನು ವಾಪಸ್ ತರುವ ಮಾತನಾಡುತ್ತಿದ್ದಾರೆ ಎಂದರು.
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಬಂಕಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಅಲ್ಪಸಂಖ್ಯಾತ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಬೇಧ ಭಾವ ಮಾಡಿಲ್ಲ. ಶಿಗ್ಗಾವಿ ಕ್ಷೇತ್ರದ ದರ್ಗಾ, ಮಸೀದಿಗಳಿಗೆ ಸುಮಾರು 16 ಕೋಟಿ ರೂ ಅನುದಾನ ನೀಡಿದ್ದೇನೆ. ಎಲ್ಲರೂ ಸೇರಿ ಬಂಕಾಪುರ ಅಭಿವೃದ್ಧಿ ಮಾಡೋಣ. ತಾವೆಲ್ಲಾ ಕ್ಷೇತ್ರದ ತುಂಬಾ ಪ್ರಚಾರ ಮಾಡಿ. ಬಿಜೆಪಿಗೆ ಸೇರ್ಪಡೆಯಾಗ್ತಿರೋ ಎಲ್ಲಾ ಮುಖಂಡರಿಗೆ ಅಭಿನಂದನೆ ತಿಳಿಸುವೆ ಎಂದು ಸಿಎಂ ಹೇಳಿದರು.ಳಿಕೆ
ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಿಲ್ಲಾ ಪ್ರವಾಸ ಕೈಗೊಂಡು ಉಡುಪಿಯಲ್ಲಿ ಎದ್ದಿದ್ದ ಕಾಂಗ್ರೆಸ್ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೈ ಟಿಕೆಟ್ ತಪ್ಪಿದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು. ಸದ್ಯ ಅವರು ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೆ, ಕೃಷ್ಣಮೂರ್ತಿ ಮನವೋಲಿಸಿ ಸಾರ್ವಜನಿಕರ ಸಭೆಗೆ ಡಿಕೆ ಶಿವಕುಮಾರ್ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕೈ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಕೃಷ್ಣಮೂರ್ತಿ ಆಚಾರ್ಯ ಆಲಂಗಿಸಿದರು.
ಹಾಸನ : ರೋಡ್ ಶೋ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಖುದ್ದು ಭದ್ರತೆ ನೀಡಲು ಎಸ್ಪಿ ಹರಿರಾಂ ಶಂಕರ್ ಮುಂದಾದರು. ಪೊಲೀಸರು ಡಿವೈಡರ್ ಮೇಲೆ ನಿಂತು ಭದ್ರತೆ ನೀಡುತ್ತಿದ್ದರು. ಪೊಲೀಸರಿಂದ ಕಾರ್ಯಕರ್ತರಿಗೆ ಕಿರಿಕಿರಿ ಆಗುತ್ತಿರುವುದನ್ನ ಗಮನಿಸಿದ ಅಮಿತ್ ಶಾ, ಕೂಡಲೇ ಮೈಕ್ ಪಡೆದು ಕಾರ್ಯಕರ್ತರಿಗೆ ದಾರಿಬಿಡಿ ಎಂದು ಪೊಲೀಸರು ಮತ್ತು ಭದ್ರತಾಪಡೆಗೆ ಹಿಂದೆ ಸರಿಯಲು ಸೂಚಿಸಿದರು. ಸಚಿವರ ಸೂಚನೆಯಂತೆ ಪೊಲೀಸರು ಕಾರ್ಯಕರ್ತರಿಗೆ ದಾರಿಮಾಡಿಕೊಟ್ಟರು.
ಹಾಸನ ಜಿಲ್ಲೆಯ ಆಲೂರಿನಲ್ಲಿ ರೋಡ್ ಶೋ ನಡೆಸಿ ಭಾಷಣ ಮಾಡಿದ ಅಮಿತ್ ಶಾ, ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು. ಪ್ರೀತಂಗೌಡ ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಪ್ರೀತಮ್ ಗೌಡ ಅವರನ್ನು ಜಿಲ್ಲೆಯಿಂದ ಹೊರ ಹಾಕುತ್ತೇವೆ ಅಂತಾ ಸವಾಲು ಹಾಕಿದ್ದಾರೆ. ಪ್ರೀತಮ್ ಗೌಡ ಜತೆ ನಾನು ಸೇರಿದಂತೆ ಇಡೀ ಬಿಜೆಪಿ ಪರಿವಾರವೇ ಇದೆ ಎಂದರು. ಜೆಡಿಎಸ್ನವರು ಮುಸ್ಲಿಮರಿಗೆ 4 ಪರ್ಸೆಂಟ್ ಮೀಸಲಾತಿ ನೀಡಿದ್ದರು. ಆ ಮೀಸಲಾತಿ ತೆಗೆದು ದಲಿತರು ಹಾಗೂ ಹಿಂದುಳಿದವರಿಗೆ ನೀಡಿದ್ದೇವೆ. ಆದರೆ ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ನೀಡುತ್ತಾರೆಂದು ಕಾಂಗ್ರೆಸ್ ಮತ್ತು ಜೆಡಿಎಸ್ನವರು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡಿದರೆ ಕಾಂಗ್ರೆಸ್ಗೆ ಮತ ನೀಡಿದಂತೆ. ಕಳೆದ ಬಾರಿ ಜೆಡಿಎಸ್ಗೆ ಮತ ನೀಡಿದ್ದೀರಿ, ಆದರೆ ಅವರು ಕಾಂಗ್ರೆಸ್ ಜತೆ ಹೋದರು ಎಂದರು. ಇದೇ ವೇಳೆ ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಗೆಲ್ಲಿಸಿ ಮೋದಿ ಕೈ ಬಲಪಡಿಸಿ ಅಂತಾನೂ ಹೇಳಿದರು.
ದೊಡ್ಡಬಳ್ಳಾಪುರ: ಚುನಾವಣೆ ಸಮಯದಲ್ಲೇ ಲಗ್ಗೆರೆ ನಾರಾಯಣಸ್ವಾಮಿ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಇವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. 6 ಜನ ಹಾಲಿ ನಗರ ಸಭಾ ಸದಸ್ಯರು, ಮಾಜಿ ನಗರ ಸಭಾ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಿಜೆಪಿ ಮುಖಂಡರಾದ ಕೆ.ಟಿ ಕೃಷ್ಣಪ್ಪ, ಶಿವಾನಂದ ರೆಡ್ಡಿ, ಲೋಕೇಶ್, ಮಂಜುನಾಥ್ ಸೇರಿದಂತೆ 40 ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸಂಸದ ಡಿಕೆ ಸುರೇಶ್, ಶಾಸಕ ಟಿ.ವೆಂಕಟರಮಣಯ್ಯ, ಲಗ್ಗೆರೆ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಾಗಿದೆ. ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಬೆಳಗಾವಿ: ಗೋಕಾಕ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷಣ್ ಸವದಿ, ಗೋಕಾಕದಲ್ಲಿ ಕಡಿಮೆ ಜನ ಸೇರಿದ್ದಾರೆ ಅಂತ ನಿಮಗೆ ಡೌಟ್ ಬಂದಿರಬಹುದು ಸಿದ್ದರಾಮಯ್ಯನವರೇ, ನೀವು ಹೋದಲ್ಲೆಲ್ಲ 50 ಸಾವಿರ ಲಕ್ಷ ಜನ ಸೇರ್ತಾರೆ ಇಲ್ಯಾಕೆ ಇಷ್ಟು ಜನ ಕಮ್ಮಿ ಇದಾರೆ ಅಂತ ನಿಮಗೆ ಪ್ರಶ್ನೆ ಬಂದಿರಬಹುದು. ಇಲ್ಲಿ ಸೇರಿರುವಂತವರು ನಾವೆಲ್ಲ ರೈತರು ಜೋಳದ ರಾಶಿ ಮಾಡ್ತೀವಿ, ಮೂರು ತರಹದ ವಿಂಗಡನೆ ಮಾಡ್ತೀವಿ ಬೀಜದ ತೆನೆ ಒಂದೆ ಮಾಡ್ತೀವಿ, ಮಾರಾಟ ಮಾಡುವ ತೆನೆಗಳನ್ನು ಒಂದೆಡೆ ಮಾಡ್ತೀವಿ, ಕೆಲ ಕೆಟ್ಟ ತೆನೆಗಳನ್ನ ಹೊರಗೆ ಇಡ್ತೀವಿ ಅವು ರಾಶಿಯನ್ನೆ ಕೆಡಿಸುತ್ತವೆ, ಇಲ್ಲಿಗೆ ಬಂದ ಜನ ಬೀಜದ ತೆನೆ ಇದ್ದಹಾಗೆ. ಸಿದ್ದರಾಮಯ್ಯನವರೇ ಇವತ್ತು ನೀವು ಡೊಳ್ಳು ಬಾರಿಸುವ ಮೂಲಕ ಬೀಜ ಬಿತ್ತಿದ್ದೀರಿ. ಏ.10ರಂದು ಒಂದೊಂದು ಕಾಳು ಒಂದೊಂದು ತೆನೆಯಾಗಿ ಲಕ್ಷಾಂತರ ಕಾಳುಗಳಾಗುತ್ತದೆ ಎಂದರು.
ಬೆಂಗಳೂರು: ಪುಲಿಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್ ಪರ ಮಾಜಿ ಮೇಯರ್ ಸಂಪತ್ ರಾಜ್ ಪ್ರಚಾರ ಆರಂಬಿಸಿದ್ದಾರೆ. ಈ ವೇಳೆ ಸಂಪತ್ ರಾಜ್ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಬೆಂಬಲಿಗರ ಪ್ರತಿಭಟನೆಯ ಬಿಸಿ ಎದುರಿಸಿದರು. ಅಖಂಡ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಪ್ರಚಾರ ಸ್ಥಳದಿಂದ ಸಂಪತ್ ರಾಜ್ ಕಾಲ್ಕಿತ್ತಿದ್ದಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಶಾಸಕ ಅಖಂಡ ಅವರ ಮನೆ ಸುಟ್ಟುಹಾಕಿದ ಪ್ರಕರಣದಲ್ಲಿ ಸಂಪತ್ ರಾಜ್ ಜೈಲು ಸೇರಿದ್ದರು.
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರೂ ಕೂಡ ಹೇಳೋಕೆ ಹೋಗಲ್ಲ ಎಂದು ಹೆಚ್ಡಿ ದೇವೇಗೌಡ ಹೇಳಿದರು. ಮಧುಗಿರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ಗೆ 20 ಸೀಟ್ ಬರುತ್ತದೆ ಅಂತಾ ಕಾಂಗ್ರೆಸ್ನವರು ಹೇಳುತ್ತಾರೆ. ಬಹುಶಃ ಮಧುಗಿರಿ ಒಂದೇ ಸಾಕು ಅವರಿಗೆ ಉತ್ತರ ಕೊಡುವುದಕ್ಕೆ ಎಂದರು.
ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಮತ್ತು ಅವರ ಪತ್ನಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಅವರ ಪತ್ನಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ ಕೆಜಿಎಫ್ ಬಾಬು ಅವರು ನಾಮಪತ್ರ ವಾಪಸ್ ಪಡೆದಿಲ್ಲ, ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಮಂಗಳೂರು: ಉಳ್ಳಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಅವರು ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರ್ತಾ ಇದ್ದೆ. ಈ ವೇಳೆ ಕಾಂಗ್ರೆಸ್ನ ಉಸ್ಮಾನ್ ಕಲ್ಲಾಪು ಸೇರಿ ಹಲವರು ನನ್ನನ್ನ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯಲು ಸಹಿ ಹಾಕಿಸಿದ್ದಾರೆ. ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ, ಒತ್ತಡದಿಂದ ವಾಪಾಸ್ ತೆಗೆದಿದ್ದೇನೆ. ಈ ಬಗ್ಗೆ ಕ್ರಮಕ್ಕೆ ನಾನು ದೂರು ನೀಡಿದ್ದೇನೆ ಎಂದರು.
ಬಾಗಲಕೋಟೆ: ತೇರದಾಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ನೇಕಾರ ಕುರುಹಿನಶೆಟ್ಟಿ ಪೀಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಅವರು ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ ನೇಕಾರ ಮುಖಂಡರು ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆ ಶಿವಶಂಕರ ಸ್ವಾಮೀಜಿಯನ್ನು ನಿಲ್ಲಿಸಿದ್ದರು. ಇದೀಗ ನಾಮಪತ್ರ ವಾಪಸ್ ಪಡೆದಿದ್ದಾರೆ. ಮೊದಲು ಗುರುಗಳು ನಂತರ ಸನ್ಯಾಸಿ ನಂತರ ಪೀಠ, ಕಟ್ಟಕಡೆಗೆ ರಾಜಕೀಯ. ನಮ್ಮ ಗುರುಗಳಾದ ಕಾಡಸಿದ್ದೇಶ್ವರ ಅಪ್ಪಗೋಳ ಮಾತು ಕೇಳಿ ನಾಮಪತ್ರ ವಾಪಸ್ ಪಡೆದಿದ್ದೇನೆ. ನಾನು ಮೊದಲು ಗುರುಗಳ ಅನುಮತಿ ಪಡೆಯದೆ ನಿಂತು ತಪ್ಪು ಮಾಡಿದೆ. ಮೊದಲೇ ಅನುಮತಿ ಪಡೆದಿದ್ದರೆ ಈ ತರಹ ಆಗುತ್ತಿರಲಿಲ್ಲ. ನಮ ಗುರುಗಳಿಗೆ ಸನ್ಯಾಸತ್ವಕ್ಕೆ ಗೌರವ ಕೊಟ್ಟು ರಾಜಕೀಯದಿಂದ ಹಿಂದೆ ಸರಿದಿದ್ದೇನೆ. ಸ್ಪರ್ಧೆಗೆ ಧುಮುಕುವ ಉದ್ದೇಶ ಯಳ್ಳಷ್ಟು ಇರಲಿಲ್ಲ. ಸಮಾಜದ ಹಿರಿಯರ ಒತ್ತಾಸೆ ಮೇರೆಗೆ ನಿಂತಿದ್ದೆ. ಇನ್ನಿತರ ಒಬಿಸಿ, ಹಿಂದುಳಿದವರ ತುಳಿತಕ್ಕೆ ಒಳಗಾದವರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡಿದ್ದೆ. ಈಗ ಗುರುಗಳ ಮಾತಿನಂತೆ ಹಿಂದೆ ಸರಿದಿದ್ದೇನೆ ಎಂದರು.
ಗದಗ: ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಂಡಾಯವೆದ್ದ ಶಿರಹಟ್ಟಿ ಕ್ಷೇತ್ರ ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ನಾಮಪತ್ರ ಹಿಂಪಡೆದಿದ್ದಾರೆ. ರಾಮಣ್ಣ ಜತೆ ಬಿಎಸ್ ಯಡಿಯೂರಪ್ಪ ಅವರು ದೂರವಾಣಿ ಮೂಲಕ ಚರ್ಚಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಹುಲಿ ಸೂಚನೆ ಮೇರೆಗೆ ನಾಮಪತ್ರ ಹಿಂಪಡೆದಿದ್ದಾರೆ. ಇವರೊಂದಿಗೆ ಭೀಮಸಿಂಗ್ ರಾಠೋಡ, ಗುರುನಾಥ ದಾನಪ್ಪನವರ ಕೂಡ ನಾಮಪತ್ರ ವಾಪಸ್ ಪಡೆದಿದ್ದಾರೆ.
ಮಂಡ್ಯ: ಅಂಬರೀಶ್ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ವಿರುದ್ಧ ಗರಂ ಆದ ಸಂಸದೆ ಸುಮಲತಾ, ತುಂಬಾ ಹೇಸಿಗೆ ಅನಿಸುತ್ತೆ ಕುಮಾರಸ್ವಾಮಿಯವರ ಈ ರೀತಿ ಮಾತುಗಳು. ಅಂಬರೀಶ್ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರುವುದು. ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳೋದು ಅವರಿಗೆ ಶೋಭೆ ತರಲ್ಲ ಎಂದರು. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೇನೆ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದ್ವೇಷ ಮಾಡಿದ್ದು ನಾನಾ, ಅವರ ಎಂದು ಜನ ನೋಡಿಕೊಂಡು ಬಂದಿದ್ದಾರೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರೋದು. ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ. ಅಂಬರೀಶ್ ಅವರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನ ಜೆಡಿಎಸ್ಸಿಗರು ಒಪ್ಪದ ವಿಚಾರ. ಅವ್ರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲಾ ಅವರ ಮನಸ್ಸನ್ನ ಅವರೇ ಕೇಳಿಕೊಳ್ಳಲಿ. ಒಪ್ಪಿಕೊಳ್ಳದೇ ಇರುವವರು ಅಂಬರೀಶ್ ಅವರನ್ನು ಸಂಪರ್ಕಿಸಲು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ ಗೊತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಈಗಲೂ ಕೂಡ ತುಷ್ಠೀಕರಣದ ರಾಜನೀತಿ ಮಾಡುತ್ತಿದೆ ಎಂದು ಆರೋಪಿಸಿದ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ 4 ಪರ್ಸೆಂಟ್ ಮೀಸಲಾತಿ ಕೊಟ್ಟಿತ್ತು. ಆದರೆ ಬಿಜೆಪಿ ಅದನ್ನೆಲ್ಲವನ್ನೂ ತೆಗೆದು ಹಾಕಿದೆ. ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗಿರುವ ಮೀಸಲಾತಿಯನ್ನ ಕೊಡುತ್ತೇವೆ ಅಂತಾರೆ. ನೀವೇ ಹೇಳಿ ಮುಸ್ಲಿಮರಿಗೆ ಮೀಸಲಾತಿ ಕೊಡಬೇಕಾ? ಜೋರಾಗಿ ಹೇಳಿ. ಅವರಿಗೆ ಮೀಸಲಾತಿ ಕೊಡಬೇಕಾ? ಡಿ.ಕೆ ಶಿವಕುಮಾರ್ ಅವರೇ, ಮುಸ್ಲಿಮರಿಗೆ ಮೀಸಲಾತಿ ವಾಪಸ್ ಕೊಡುವ ಬಗ್ಗೆ ಮಾತನಾಡುತ್ತೀರಿ, ಮೀಸಲಾತಿ ಕಡಿಮೆ ಯಾರಿಗೆ ಮಾಡುತ್ತೀರಿ? ಕರ್ನಾಟಕದ ಜನರಿಗೆ ಉತ್ತರ ಕೊಡಿ. ಒಕ್ಕಲಿಗರದ್ದು ಕಡಿಮೆ ಮಾಡುತ್ತೀರಾ? ಲಿಂಗಾಯತರದ್ದು ಕಡಿಮೆ ಮಾಡುತ್ತೀರಾ? ಎಸ್ಎಟಿ ಮೀಸಲಾತಿ ಕಡಿಮೆ ಮಾಡುತ್ತೀರಾ? ಈ ತುಷ್ಠೀಕರಣ ರಾಜನೀತಿಯನ್ನ ಮೊದಲು ಕಿತ್ತು ಹಾಕಿ, ಮೋದಿಯವರ ಅಭಿವೃದ್ಧಿ ರಾಜನೀತಿಯನ್ನ ತನ್ನಿ ಎಂದರು.
ಮೈಸೂರು: ನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸಿ.ಟಿ.ರವಿ ಮುಂದಿನ ಸಿಎಂ ಎಂಬ ಕಾರ್ಯಕರ್ತರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದರು. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ವ್ಯಭಿಚಾರನಾ ? ಇದನ್ನು ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ರಾಜಕೀಯ ಹಾದರದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ಹಾವೇರಿ: ಕಾಂಗ್ರೆಸ್ನವರು ಆ ಭಾಗ್ಯ ಈ ಭಾಗ್ಯ ಅಂತಾ ಹೇಳಿದ್ದರು. ಆದರೆ ಯಾವ ಭಾಗ್ಯನೂ ಜನರಿಗೆ ಮುಟ್ಟಲಿಲ್ಲ. ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆ ಅಂತಾ ಕೈ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಲ್ಲಿ ಅತ್ಯಧಿಕ ಹಣವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರಿಸುತ್ತದೆ, ಹೀಗಿದ್ದರೂ ಅನ್ನ ಭಾಗ್ಯ ನಮ್ದು ಅಂತಾ ಜನರಿಗೆ ಸಿದ್ದರಾಮಯ್ಯ ಅವರು ಮೋಸ ಮಾಡುತ್ತಿದ್ದಾರೆ. ಜನರಿಗೆ ಇವರ ಮೇಲೆ ಭರವಸೆ ಇಲ್ಲ. ಅದಕ್ಕೆ ಇವರು ಗ್ಯಾರಂಟಿ ಕಾರ್ಡ್ ಮಾಡುತ್ತಿದ್ದಾರೆ ಎಂದರು.
ತುಮಕೂರು: ಕುಮಾರಸ್ವಾಮಿ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ ಎಂದು ಶಿರಾದಲ್ಲಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದರು. ಇಲ್ಲಿ ಕೆಲವು ಅಭಿಮಾನಿಗಳು ನನ್ನ ಹೆಗಲ ಮೇಲೆ ಕುರಿ ಹೊರಿಸಿದ್ದರು. ನನಗೆ 92 ವರ್ಷ ವಯಸ್ಸಾದರೂ ನಿಮ್ಮ ಮುಂದೆ ಪ್ರದರ್ಶಿಸಿದ್ದೇನೆ. ಕುಮಾರಸ್ವಾಮಿ ಆಸ್ಪತ್ರೆಯಲ್ಲಿದ್ದಾರೆ, ಅದೆಲ್ಲ ದೇವರ ಇಚ್ಛೆ. ಅವರು ಮತ್ತೆ ಪ್ರಚಾರ ಮಾಡುತ್ತಾರೆ. ಪಂಚರತ್ನ ಯೋಜನೆ ಜಾರಿ ಮಾಡಲು ಹೋರಾಟ ಮಾಡುತ್ತಿದ್ದೇವೆ. ಮುಸ್ಲಿಂ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ, ಬಿಟ್ಟುಕೊಡುವುದು ಇಲ್ಲ. ಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ತಾಯಂದಿರ ಬಳಿ ಕ್ಷಮೆ ಕೇಳುತ್ತೇನೆ ಎಂದರು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಅವರು ಈಗ ಹೋರಾಟ ಮಾಡುತ್ತಿರುವುದು ಪಂಚರತ್ನ ಯೋಜನೆಯ ಅನುಷ್ಠಾನ ಮಾಡುವ ಸಲುವಾಗಿ ಎಂದರು.
ಬೆಂಗಳೂರು: ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಕಾಂಗ್ರೆಸ್ ಹತಾಶೆಯಿಂದ ತಳವಿಲ್ಲದ ಆರೋಪ ಮಾಡುತ್ತಿದೆ. ಕ್ಷೇತ್ರದಲ್ಲಿ ನಮಗೆ ಜನ ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮೂರೂವರೆ ವರ್ಷ ಕೆಲಸ ಮಾಡಿದ್ದೇವೆ. ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆ ಕಾಣುತ್ತಾ ಇದೆ. ಹೀಗಾಗಿ ಕರ್ನಾಟಕ ಜನ ಈ ಬಾರಿ ಬಿಜೆಪಿಗೆ ಬಹುಮತ ನೀಡಲು ನಿರ್ಧಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಆಧಾರ ರಹಿತವಾದ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿ ಪರವಾಗಿ ಜನರು ಇದ್ದಾರೆ. ಡಬಲ್ ಇಂಜಿನ ಸರ್ಕಾರ ಸಾಧನೆಯನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ, ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.
ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ರೋಡ್ಶೋ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಚಾಣಕ್ಯ ಅಮಿತ್ ಶಾ, ಮುಸ್ಲಿಂ ಹಾಗೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಾರೆ. ಸರ್ವರು ಸಂವೃದ್ದಿಯಾಗಿರಬೇಕು ಅಂದರೆ ಬಿಜೆಪಿ ಸರ್ಕಾರ ಬರಬೇಕಿದೆ, ಈ ಬಾರಿ ನಿರಂಜನ್ ಕುಮಾರ್ಗೆ ಆಶೀರ್ವಾದ ಮಾಡಿ ಮತ ಹಾಕಿ ಎಂದು ಮನವಿ ಮಾಡಿಕೊಂಡರು.
ಕಾರವಾರ: ಬಿಜೆಪಿ ಯಾವ ವರಿಷ್ಠರು ಸಂಪರ್ಕ ಮಾಡಿ ಮನವೊಲಿಕೆ ಪ್ರಯತ್ನ ಮಾಡಿಲ್ಲ. ನಾಮ ಪತ್ರ ಹಿಂಪಡೆಯುವಂತೆಯೂ ಹೇಳಿಲ್ಲ. ಶಾಸಕಿ ರೂಪಾಲಿ ನಾಯ್ಕ ಅವರಯ ಮನೆಗೆ ಬಂದು ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಳಿಕ ಯಾರು ಮನವೊಲಿಕೆ ಪ್ರಯತ್ನ ಮಾಡಿಲ್ಲ. ಹೀಗಾಗಿ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಶಾಸಕ ಪಕ್ಷೇತರ ಅಭ್ಯರ್ಥಿ ಗಂಗಾಧರ ಭಟ್ ಹೇಳಿದ್ದಾರೆ. ಕಾರವಾರ-ಅಂಕೋಲ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದಿದ್ದಾರೆ.
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಚಾರ ಮಾಡಿದರು. ರಾಣೇಬೆನ್ನೂರು ಬಸ್ ನಿಲ್ದಾಣದ ರೋಡ್ ಶೋ ಆರಂಭವಾಗಿದ್ದು, ಸಿಎಂ ಬೊಮ್ಮಾಯಿ ರೋಡ್ ಶೋ ವೇಳೆ ಕಾರ್ಯಕರ್ತರು ಪುಷ್ಪ ವೃಷ್ಟಿ ಮಾಡಿದ್ದಾರೆ.
ಮೈಸೂರು: ಹಳೆ ಬೇರು, ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಬಡವರಿಂದ ಮೇಧಾವಿಗಳವರೆಗೂ ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ನಮ್ಮ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಸ್ಪಷ್ಟ ಬಹುಮತ ನೀಡಿ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಮೈಸೂರು ನಗರದಲ್ಲಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಹೇಳಿದ್ದಾರೆ.
ಧಾರವಾಡ: ಶಾಸಕ ಅಮೃತ ದೇಸಾಯಿ, ಹೋರಾಟಗಾರ ಬಸವರಾಜ ಕೊರವರ್ ನಡುವೆ ಸಂಧಾನ ಯಶಸ್ವಿಯಾಗುವ ಮೂಲಕ ಬಿಜೆಪಿ ಬಂಡಾಯ ಶಮನಗೊಂಡಿದೆ. ಹೋರಾಟಗಾರ ಬಸವರಾಜ ಕೊರವರ್ ನಾಮಪತ್ರ ವಾಪಸ್ ಪಡೆಯುತ್ತಾರೆ. ಯಾವುದೇ ಷರತ್ತುಗಳಿಲ್ಲದೇ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಕೊರವರ್ ಪ್ರಚಾರ ಮಾಡಲಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೆಳಗಾವಿ: ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದರು. ಬಿಜೆಪಿ ವರಿಷ್ಠರು ಮನವೊಲಿಕೆ ಹಿನ್ನೆಲೆ ಇಂದು ಶಾಸಕ ಮಹಾದೇವಪ್ಪ ಯಾದವಾಡ ನಾಮ ಪತ್ರ ವಾಪಾಸ್ ಪಡೆದಿದ್ದಾರೆ. ಬೆಂಬಲಿಗರ ಕೈಯಲ್ಲಿ ಅರ್ಜಿಗೆ ಸಹಿ ಮಾಡಿ ಕೊಟ್ಟು ಕಳುಹಿಸಿ ನಾಮ ಪತ್ರ ವಾಪಾಸ್ ಪಡೆದಿದ್ದಾರೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ಶೋ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಪರ ಅಮಿತ್ ಶಾ ಪ್ರಚಾರ ಮಾಡುತ್ತಿದ್ದಾರೆ. ಅಮಿತ್ಶಾ ಅವರಿಗೆ ಸಂಸದ ಪ್ರತಾಪ್ ಸಿಂಹ, ಸಿ.ಎಸ್.ನಿರಂಜನ್ ಕುಮಾರ್ ಸಾಥ್ ನೀಡಿದ್ದಾರೆ. ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು, ಅಮಿತ್ ಶಾ ಅವರಿಗೆ ಜನರು ಹೂವಿನ ಸ್ವಾಗತ ನೀಡಿದರು.
ಮೆರವಣಿಗೆಯಲ್ಲಿ ನರೆದಿರುವ ಸಾವಿರಾರು ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಬಿಎಸ್ ಯಡಿಯೂರಪ್ಪಾ ಅವರಿಗೆ ಜೈಕಾರ ಕೂಗೂತ್ತಿದ್ದಾರೆ.
ಬೆಂಗಳೂರು: ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧನಗೊಂಡಿರುವ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಎಸ್ಪಿಯಿಂದ ಕಣಕ್ಕೆ ಇಳಿಯಲಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.
ಹುಬ್ಬಳ್ಳಿ: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಇಂದು ಸಂಜೆ 6.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಹಾವೇರಿ, ಗದಗ, ಧಾರವಾಡ ಜಿಲ್ಲೆ ಪದಾಧಿಕಾರಿಗಳ ಜತೆ ಸಭೆ ಮಾಡಲಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಇಂದು (ಏ.24) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಭಾಗಿಯಾಗಿದ್ಧಾರೆ. ಹಾಗೇ ಸಾವಿರಾರು ಕಾರ್ಯಕರ್ತರು ಕೂಡ ಪಾಲ್ಗೊಂಡಿದ್ದಾರೆ.
ಮೈಸೂರು: ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮಿತ್ ಶಾ ಅವರಿಗೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಾಯಕ ರಾಮದಾಸ್ ಸಾಥ್ ನೀಡಿದರು.
ಹುಬ್ಬಳ್ಳಿ: ಏಪ್ರಿಲ್ 29ರಂದು ಬೆಳಗಾವಿ ಜಿಲ್ಲೆಯ ಕುಡಚಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಲಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ. ಎರಡು ಬಾರಿ ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ. ಸಂಜೆ ಹುಬ್ಬಳ್ಳಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಜಿಲ್ಲಾ ಪದಾಧಿಕಾರಿಗಳು, ಮಂಡಳ ಅಧ್ಯಕ್ಷರ ಜತೆ ಸಭೆ ಮಾಡುತ್ತಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಚೆನ್ನಾಗಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಶಿವಮೊಗ್ಗ: ಶಿವಮೊಗ್ಗದಲ್ಲಿನ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಕಚೇರಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆದಿದೆ. ಸಭೆಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ವೀರಶೈವ ಸಮಾಜದ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು (ಏ.24) ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಬೆಂಗಳೂರು: ನಿನ್ನೆ (ಏ.23) ರಾತ್ರಿ 9.30ಕ್ಕೆ ಹೈದರಾಬಾದ್ನಿಂದ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಇಂದು (ಏ.23) ಬೆಳಗ್ಗೆ 8.55ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಅವರು ಬೆಳಗ್ಗೆ 10.30ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯಲಿದ್ದಾರೆ. ಅಲ್ಲಿಂದ ಬೆಳಗ್ಗೆ 11.30ಕ್ಕೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಗೆ ತೆರಳಿ ಗುಂಡ್ಲುಪೇಟೆಯಲ್ಲಿ ರೋಡ್ಶೋ ನಡೆಸಲಿದ್ದಾರೆ.
ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರಲ್ಲ. ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಸಹ ಸೋಲುತ್ತಾರೆ. ರಾಜ್ಯಕ್ಕೆ ಅಮಿತ್ ಶಾ ಎಂಟ್ರಿಕೊಟ್ಟಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಕೂಡ ಬರುತ್ತಾರೆ ಎಂದು ಹೇಳಿದರು.
ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ದು ಫಿಲ್ಡ್ಗೆ ಇಳಿದಿದ್ದು, ಕಲ್ಪತರುನಾಡು ತುಮಕೂರಿಗೆ ಇಂದು (ಏ.24) ಭೇಟಿ ನೀಡಿದ್ದಾರೆ. ಒಂದೇ ದಿನ ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಮೊದಲಿಗೆ ಜೆಡಿಎಸ್ ಭದ್ರಕೋಟೆಯಾಗಿರುವ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿರುವ ಹೆಚ್ಡಿ ದೇವೇಗೌಡರು ಶ್ರೀ ನಂಜಾವಧೂತ ಸ್ವಾಮಿಜಿಗಳನ್ನ ಭೇಟಿಯಾಗಿ ಆಶಿರ್ವಾದ ಪಡೆಯಲಿದ್ದಾರೆ.
ಉಡುಪಿ: ಕರ್ನಾಟಕದಲ್ಲಿ ಅತಿ ಭ್ರಷ್ಟ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ಅವರದ್ದೇ ಪಕ್ಷದ ಅನೇಕ ನಾಯಕರು ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯಬೇಕು. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಕೊಲ್ಲೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಲ ಕಾಂಗ್ರೆಸಿಗರು ಪಕ್ಷಾಂತರ ಮಾಡುತ್ತಿದ್ದು, ಕೈ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು: ಇಂದು (ಏ.24) ಮಧ್ಯಾಹ್ನ 1:45ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ರೋಡ್ಶೋದಲ್ಲಿ ಭಾಗಿಯಾಗಿ, ಸಂಜೆ 4.30ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಇದಾದ ನಂತರ ಸಂಜೆ 6.30ಕ್ಕೆ ದೇವನಹಳ್ಳಿಯಲ್ಲಿ ಬಿಜೆಪಿ ಮುಖಂಡರ ಜೊತೆ ಜೆ.ಪಿ.ನಡ್ಡಾ ಸಭೆ ನಡೆಸಿ, ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಹಿಂದಿರುಗುತ್ತಾರೆ.
Published On - 9:01 am, Mon, 24 April 23