Karnataka Government Formation Live News Updates Today: ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕೊನೆಗೂ ಬಗೆಹರಿದಿದೆ. ಕಳೆದ ನಾಲ್ಕೈದು ದಿನಗಳಿಂದ ದೆಹಲಿ ನಡೆಯುತ್ತಿದ್ದ ಸಿಎಂ ಕಗ್ಗಂಟನ್ನು ಹೈಕಮಾಂಡ್ ಬಿಡಿಸುವಲ್ಲಿ ಯಶಸ್ವಿಯಾಗಿದೆ. 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಸೂತ್ರದ ಮೂಲಕ ಹೈಕಮಾಂಡ್ ನಾಯಕರು ಡಿಕೆ ಶಿವಕುಮಾರ್ ಅವರ ಮನವೊಲಿಸಿದ್ದಾರೆ. ದೆಹಲಿಯಿಂದ ಕರ್ನಾಟಕದವರೆಗೆ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯಿತ್ತಿದ್ದು, ಅವುಗಳ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ ನೋಡಿ.
ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿವಕುಮಾರ್ ಪದಗ್ರಹಣ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿವಿಧ ರಾಜ್ಯಗಳ ಹಲವು ಗಣ್ಯರಿಗೆ ಭದ್ರತೆಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ನಿಯೋಜನೆಗೆ ಮನವಿ ಮಾಡಲಾಗಿದೆ. ಮೇ 19ರಿಂದ ಭದ್ರತೆಗೆ ಅಧಿಕಾರಿ, ಸಿಬ್ಬಂದಿ ಒದಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಆಡಳಿತ ವಿಭಾಗದ ಅಪರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಜನ್ಮದಿನ. ಹೀಗಾಗಿ ಸರ್ಕಾರ ರಚನೆ ಹಕ್ಕು ಮಂಡಿಸಲು ಆಗಮಿಸಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯಲಾರು ಸಿಹಿ ಹಂಚಿದರು. ಈ ವೇಳೆ ರಾಜ್ಯಪಾಲರಿಗೆ ಕೈ ನಾಯಕರು ಶುಭಾಶಯ ಕೋರಿದರು.
ನಿಯೋಜಿತ ಸಿಎಂ ಸಿದ್ದರಾಮಯ್ಯ, ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಮ್ಮ ಗೆಲುವಿಗೆ ನಾವು ಕಾರ್ಯಕರ್ತರಿಗೆ ಅಭಿನಂದನೆಗಳು ತಿಳಿಸಬೇಕು. ಇದು ಕಾಂಗ್ರೆಸ್ಗೆ ಐತಿಹಾಸಿಕ ಗೆಲುವಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರಿಗೂ ಅಭಿನಂದನೆಗಳು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ 8 ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಪಶ್ಚಿಮಬಂಗಾಳ ಸಿಎಂ ಮಮತಾ, ರಾಜಸ್ಥಾನ ಸಿಎಂ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಹಿಮಾಚಲಪ್ರದೇಶದ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಪುದುಚೆರಿ ಸಿಎಂ ರಂಗಸ್ವಾಮಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಗಮಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತ್ಯಾಗವನ್ನು ಪಕ್ಷ ಮರೆಯಲ್ಲ. ಅವರ ತ್ಯಾಗಕ್ಕೆ ದೊಡ್ಡ ಹುದ್ದೆ ಕೂಡ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಎಐಸಿಸಿ ವೀಕ್ಷಕ ಸುಶೀಲ್‌ಕುಮಾರ್ ಶಿಂಧೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನಾನು ಪಿಸಿಸಿ ಅಧ್ಯಕ್ಷರಾಗಿದ್ದಾಗ ಅಧಿಕಾರಕ್ಕೆ ಬಂದಿದ್ದೇವೆ. ಆಗ ನನಗೆ ಸಿಎಂ ಸ್ಥಾನ ಕೊಟ್ಟಿರಲಿಲ್ಲ, ಬಳಿಕ ರಾಜ್ಯಪಾಲರ ಹುದ್ದೆ ನೀಡಿದ್ದರು ಎಂದು ನೆನಪಿಸಿಕೊಂಡರು.
ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇದ್ದರು.
ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಸಭಾ ಭವನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಕೇವಲ 25 ನಿಮಿಷ ಸಭೆ ನಡೆಸಲಾಯಿತು. ಇನ್ನು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಮನವಿ ಮಾಡಲಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಶಾಸಕರೆಲ್ಲರೂ ಸಹಮತ ಸೂಚಿಸಿದ ಹಿನ್ನೆಲೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.
ನನ್ನ ಪತಿ ವಿಜಯನಾಂದ ಕಾಶಪ್ಪನವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿರೋದು ತುಂಬಾ ಖುಷಿಯಾಗಿದೆ. ನಮ್ಮ ಸಮುದಾಯಕ್ಕೂ ಡಿಸಿಎಂ ಕೊಡಬೇಕು. ನಾಲ್ವರಿಗೆ ಸಚಿವ ಸ್ಥಾನ ನೀಡಬೇಕು. ಸಿದ್ದರಾಮಯ್ಯ ಹಾಗೂ ಡಿಕೆಶಿ ಒಗ್ಗಟ್ಟಿನಿಂದ ಹೋಗುತ್ತಾರೆ. ನನಗೂ ಒಳ್ಳೇ ಜವಾಬ್ದಾರಿ ಕೊಡುತ್ತಾರೆ ಅನ್ನೋ ನಿರೀಕ್ಷೆ ಇದೆ ಎಂದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿರುವ ಇಂದಿರಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದೆ. ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಲವು ಶಾಸಕರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಪ್ರತ್ಯೇಕ ದ್ವಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ವಾಸ್ತು ಪ್ರಕಾರ ಕೆಪಿಸಿಸಿ ಕಛೇರಿಯ ಎಡಬಾಗದಲ್ಲಿ ಪ್ರತ್ಯೇಕ ದ್ವಾರದಲ್ಲಿ ಡಿಕೆಶಿ ಎಂಟ್ರಿಕೊಟ್ಟರೆ, ಎಲ್ಲಾ ಶಾಸಕರು ಬಂದ ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಡಿಕೆಶಿ ಆಗಮನಕ್ಕೆ ಪೊಲೀಸರು ಬ್ಯಾರಿಗೇಡ್ ಹಾಕಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಿರಿಯ ಶಾಸಕರಾದ ಆರ್ ವಿ ದೇಶಾಪಂಡೆ, ಶಿವಾನಂದ ಪಾಟೀಲ್, ತನ್ವೀರ್ ಸೇಠ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ, ನಾಗೇಂದ್ರ, ಶಿವರಾಜ್ ತಂಗಡಗಿ, ಎಂ ಕೃಷ್ಣಪ್ಪ, ನಯನ ಮೋಟಮ್ಮ, ಎಚ್ ಡಿ ತಮ್ಮಯ್ಯ ಶಾಸಕಾಂಗ ಸಭೆಗೆ ಹಾಜರಾಗಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿ ವರ್ಷವೂ ದೇವೇಗೌಡರ ಹುಟ್ಟುಹಬ್ಬಕ್ಕೆ ಬಂದು ಶುಭಾಶಯ ಕೋರುತ್ತಿದ್ದೇವೆ. ಅದೇ ರೀತಿ ಇಂದೂ ಕೂಡಾ ಬಂದು ಶುಭಾಶಯ ಕೋರಿದ್ದೇವೆ ಎಂದರು. ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಜೆಡಿಎಸ್ ಬೆಂಬಲ ಕೋರುವ ವಿಚಾರದ ಮೇಲೆ ಭೇಟಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವತ್ತು ಹುಟ್ಟುಹಬ್ಬಕ್ಕೆ ಶುಭಕೋರಲು ಬಂದಿದ್ದೇವೆ ಅಷ್ಟೇ . ಬೇರೆ ಏನೂ ಚರ್ಚೆ ನಡೆಸಿಲ್ಲ. ಇನ್ನೂ ಕೂಡಾ ಸರ್ಕಾರವೇ ರಚನೆ ಆಗಿಲ್ಲ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಸಿದ್ದರಾಮಯ್ಯ ಅವರು ಬೆಂಗಳೂರು ನಗರದಲ್ಲಿರುವ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಡಿಕೆ ಶಿವಕುಮಾರ್ ಕೂಡ ಆಗಮಿಸಿದ್ದಾರೆ.
ನಾಳೆ ಸಿದ್ದರಾಮಯ್ಯ ಅವರು ಸಂಭಾವ್ಯ ಸಚಿವರ ಪಟ್ಟಿ ಜತೆ ದೆಹಲಿಗೆ ತೆರಳಲಿದ್ದಾರೆ. ಬೆಳಗ್ಗೆ 9 ಗಂಟೆಗೆ ನವದೆಹಲಿಗೆ ತೆರಳಲಿದ್ದಾರೆ.
7.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುತ್ತೇವೆ. ನಂತರ ರಾಜಭವನಕ್ಕೆ ಹೊರಟು ಸರ್ಕಾರ ರಚನೆಗೆ ಅವಕಾಶ ಕೇಳುತ್ತೇನೆ ಎಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಹೇಳಿದ್ದಾರೆ.
ಸಿಎಂ, ಡಿಸಿಎಂ ಆಗಿ ಆಯ್ಕೆಯಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಿದ ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ, ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ. ರಾಜಕಾರಣದಲ್ಲಿ ಪಾತ್ರಗಳನ್ನು ತೀರ್ಮಾನಿಸುವುದು ಜನರು. ನಮಗೆ ವಿಪಕ್ಷವಾಗಿ ಜನ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಜನರಿಗೆ ದೊಡ್ಡ ವಿಶ್ವಾಸ ಇದೆ. ಜನರಿಗೆ ನೀಡಿದ ಎಲ್ಲ ಗ್ಯಾರಂಟಿ ಕಾಂಗ್ರೆಸ್ ಸರ್ಕಾರ ಈಡೇರಿಸಲಿ. ಯಾವ ರೀತಿ ನಿಭಾಯಿಸುತ್ತಾರೆ ಅಂತಾ ಕಾದು ನೋಡೋಣ ಎಂದರು.
ದೇವನಹಳ್ಳಿ: ದೆಹಲಿಯಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಆಗಮಿಸಿದ್ದಾರೆ. ಕಾಂಗ್ರೆಸ್ನ ಶಾಸಕರು ಮೇ 20ರಂದು ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದು-ಡಿಕೆಶಿ ಅವರನ್ನು ಸ್ವಾಗತಿಸಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ದೇವನಹಳ್ಳಿ: ಅಧಿಕಾರ ಹಂಚಿಕೆ ಬಗ್ಗೆ ಹೇಳುತ್ತಿದ್ದಾರೆ, ಮುಂದೆ ನೋಡೋಣ, 20:30, 30:40 ಸೂತ್ರಾನ ಅನ್ನೋದನ್ನು ಕಾದು ನೋಡಬೇಕು ಎಂದು ವಿಮಾನ ನಿಲ್ದಾಣದ ಬಳಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ನನಗೂ ಸಚಿವ ಸ್ಥಾನ ಕೊಡಿ ಎಂದು ವರಿಷ್ಠರಿಗೆ ಕೇಳಿದ್ದೇನೆ. ವರಿಷ್ಠರು ಯಾರಿಗೆ ಸ್ಥಾನ ನೀಡುತ್ತದೆ ಅನ್ನೋದನ್ನ ನೋಡೋಣ ಎಂದರು.
ಬೋವಿ ಸಮುದಾಯದ ಶಾಸಕರಿಗೆ ಸಚಿವಗಿರಿ ನೀಡುವಂತೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ. ಬೋವಿ ಸಮುದಾಯದಿಂದ ಶಿವರಾಜ್ ತಂಗಡಗಿ, ಎ.ಸಿ.ಶ್ರೀನಿವಾಸ್, ವೆಂಕಟೇಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂವರು ಶಾಸಕರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಲಿ. ಬಿಜೆಪಿ ಸರ್ಕಾರದಲ್ಲೂ ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದರು.
ದೇವನಹಳ್ಳಿ: ದೆಹಲಿಯಿಂದ ಆಗಮಿಸಿ ಏರ್ಪೋಟ್ ನಲ್ಲಿ ಕೆಹೆಚ್ ಮುನಿಯಪ್ಪ ಅವರು, ಹೈಕಮಾಂಡ್ ಸೂತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾವು ಏನು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದಲಿತ ಡಿಸಿಎಂ ರೇಸ್ನಲ್ಲಿ ನಾನೇನು ಇಲ್ಲ. ನಾನು ದೇಶದಲ್ಲಿ ಮಂತ್ರಿಯಾಗಿದ್ದವನು. ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ. ನೀವು ರಾಜ್ಯದಲ್ಲಿ ಸ್ಪರ್ಧೆ ಮಾಡಿ ಅಂತ ಹೈಕಮಾಂಡ್ ಹೇಳಿತ್ತು. ಅದ್ರಂತೆ ನಾನು ಸ್ವರ್ಧಿಸಿ ಗೆದ್ದೀದ್ದೇನೆ. ಉಳಿದದ್ದು ಹೈಕಮಾಂಡ್ಗೆ ಬಿಟ್ಟದ್ದು ಎಂದರು.
ಸಿದ್ದರಾಮಯ್ಯ ಆಗಮನ ಹಿನ್ನೆಲೆ HAL ಏರ್ಪೋಟ್ ಬಳಿ ಗೊಂಬೆ ಕುಣಿತ, ಕಂಸಾಳೆ, ಕಂಬಳಿ ಕುರುಬ ತಂಡದಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಲಿದೆ. ಸಿದ್ದರಾಮಯ್ಯರನ್ನ ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಜೈಕಾರ ಕೂಗುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಹಿನ್ನೆಲೆ ನಗರದಲ್ಲಿರುವ ಕೆಪಿಸಿಸಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 11ಎಸಿಪಿ, 25 ಇನ್ಸ್ಪೆಕ್ಟರ್ , 350 ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇನ್ನೂ ಮುಂಗಾರು ಪ್ರಾರಂಭ ಆಗಿಲ್ಲ, ಈಗಾಗಲೇ ಬಿತ್ತನೆ ಬೀಜ, ಗೊಬ್ಬರ, ಕೃಷಿ ಸಾಲಕ್ಕೆ ಅರ್ಜಿ ಕರೆಯಬೇಕಾಗಿತ್ತು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಅದರ ಕಡೆ ಗಮನ ಕೊಡಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕಾಂಗ್ರೆಸ್ ಅವರ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆಪಾದನೆ ಮಾಡಿದೆ. ಬಿಜೆಪಿ ಮೇಲೆ ಗೂಬೆ ಕೂರಿಸುವುದು ಬಿಟ್ಟು ತಕ್ಷಣವೇ ಸರ್ಕಾರ ರಚನೆ ಮಾಡಿ. ಕಾಂಗ್ರೆಸ್ ಹೇಳಿರುವ ಐದು ಗ್ಯಾರಂಟಿಗಳನ್ನು ತಕ್ಷಣ ಜಾರಿ ಮಾಡಬೇಕು. ಜನರಲ್ಲಿ ಇರುವ ಗೊಂದಲವನ್ನು ಪರಿಹರಿಸಬೇಕು ಎಂದರು.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಆಗಮಿಸುತ್ತಿರುವ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಾರತ್ತಹಳ್ಳಿ ಎಸಿಪಿ ಕಿಶೋರ್ ಭರಣಿ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವಿಜಯಪುರ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಫ್ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ದೂರು ನೀಡಿದ್ದಾರೆ. ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಯತ್ನಾಳ್ ಅಧ್ಯಕ್ಷರಾಗಿರುವ ಸಿದ್ಧಸಿರಿ ಸಂಸ್ಥೆಯ ಬ್ಯಾಂಕ್ ಸಿಬ್ಬಂದಿ, ಸಕ್ಕರೆ ಕಾರ್ಖಾನೆ ಸಿಬ್ಬಂದಿ ಹೆಸರಲ್ಲಿ ನಕಲಿ ಮತದಾನ ಮಾಡಿಸಿದ್ದಾರೆ. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಮುಶ್ರಫ್ ಒತ್ತಾಯಿಸಿದ್ದಾರೆ.
ಕೋಲಾರ: ಕೋಲಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಅವರು ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತಿದ್ದಾರೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ತಮ್ಮದೇ ತಪ್ಪುಗಳಿಂದ ಸೋತಿದ್ದೇವೆ. ಮಾಲೂರು ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೇಸ್ ಅಭ್ಯರ್ಥಿ ಮತಗಳಿಗಿಂತ ಬಿಜೆಪಿ ಹಾಗೂ ಬಂಡಾಯ ಬಿಜೆಪಿ ಅಭ್ಯರ್ಥಿಯ ಮತಗಳೇ ಹೆಚ್ಚಿವೆ. ಈ ಮೂಲಕ ಅಲ್ಲಿನ ಮತದಾರರು ಬಿಜೆಪಿ ಪರವಾಗಿದ್ದಾರೆ. ಬಂಗಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಟ್ರಾಂಗ್ ಆಗಿದ್ದರು, ಗೊಂದಲದಿಂದ ಸೋತಿದ್ದೇವೆ. ಕೆಜಿಎಫ್ನಲ್ಲಿ ಹಣದ ಹೊಳೆ ಹರಿಸಿದ್ದರಿಂದ ಕಾಂಗ್ರೇಸ್ ಅಭ್ಯರ್ಥಿ ಗೆದ್ದಿದ್ದಾರೆ. ಕೋಲಾರದಲ್ಲಿ ಒಂದು ಸಮುದಾಯದ ಮತ ಕಾಂಗ್ರೇಸ್ಗೆ ಹೋಗಿದ್ದರಿಂದ ಸೋತಿದ್ದೇವೆ, ವಾಸ್ತವಾಂಶ ಏನೇ ಇದ್ದರು ಜನತೆ ಕೊಟ್ಟ ತೀರ್ಪಿಗೆ ಬದ್ಧರಾಗಿದ್ದೇವೆ. ಗೆದ್ದಿರುವ ಶಾಸಕರಿಗೆ ಬೆಂಬಲ ನೀಡುತ್ತೇವೆ, ವಿರೋಧ ಪಕ್ಷದಲ್ಲಿ ಇದ್ದು ನಮ್ಮ ಕರ್ತವ್ಯ ನಾವು ನಿಭಾಯಿಸುತ್ತೇವೆ ಎಂದರು.
ಬೆಳಗಾವಿ: ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಆಯ್ಕೆ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಈ ಸರ್ಕಾರ ಬಹಳ ದಿವಸ ಉಳಿಯಲ್ಲ. ಸಂಪೂರ್ಣ ಬಹುಮತ ಇದ್ದಾಗ ಸಿಎಂ ಅಭ್ಯರ್ಥಿ ಘೋಷಣೆಗೆ ಒಂದೇ ಗಂಟೆ ಬೇಕು. ನಾಲ್ಕು ದಿವಸ ಪ್ಯಾಚ್ ಅಪ್ ಮಾಡಿದ್ದಾರೆ ಎಂದರೆ ತಿಳಿದುಕೊಳ್ಳಿ. ಎಷ್ಟು ತೂತುಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ, ಅವೇನು ತುಂಬುವುದಿಲ್ಲ. ಸಿಎಂ ಆಯ್ಕೆಗೆ 4 ದಿವಸ ತೆಗೆದುಕೊಂಡಿದ್ದರಿಂದ ಸರ್ಕಾರದ ಬಗ್ಗೆ ಈಗಲೇ ಜನರಲ್ಲಿ ವಿಶ್ವಾಸ ಕಡಿಮೆ ಆಗಿದೆ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ ಚುನಾವಣೆ ಮೊದಲಿನಿಂದಲೂ ಇತ್ತು. ಚುನಾವಣೆ ಮುಗಿದ ಮೇಲೆ ಇದು ಪ್ರಬಲ ಆಗಿದೆ ಎಂದರು.
ಸತತ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಜಿ.ಎಸ್.ಪಾಟೀಲ್ ಅವರಿಗೆ ಸಚಿವಸ್ಥಾನ ನೀಡುವಂತೆ ಆಗ್ರಹಗಳು ಕೇಳಿಬಂದಿವೆ. ಗದಗ ಜಿಲ್ಲೆ ರೋಣ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಇದು ಕೊನೆಯ ಚುನಾವಣೆ. 50 ವರ್ಷಗಳ ಕಾಲ ಪಕ್ಷ ಕಟ್ಟಿಬೆಳೆಸಿರುವ ಜಿ.ಎಸ್.ಪಾಟೀಲ್ಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕೆಲವ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮೇ 20ರಂದು ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಅವಕಾಶ ನೀಡುವಂತೆ ನಿನ್ನೆ ರಾತ್ರಿ ಒಂದು ಗಂಟೆಗೆ ನಾನೇ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ನಂತರ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ನೀಡುತ್ತೇವೆ ಎಂದರು.
ಸಿದ್ದರಾಮಯ್ಯಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಡಿಸಿಎಂ ಸ್ಥಾನ ನೀಡಿರುವ ವಿಚಾರವಾಗಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದವರು ಸೇರಿ ಈ ಬಗ್ಗೆ ತೀರ್ಮಾನ ಮಾಡಿದ್ದಾರೆ. ಅದರ ಬಗ್ಗೆ ನಾನೇನೂ ಮಾತನಾಡಲ್ಲ ಎಂದರು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈಗ ಹೊಸ ಸರ್ಕಾರ ರಚನೆ ಆಗಬೇಕು. ಅವರ ಬಜೆಟ್ ಹಾಗೂ 5 ಗ್ಯಾರಂಟಿಗಳನ್ನು ಹೇಗೆ ಅನುಷ್ಠಾನಕ್ಕೆ ತರುತ್ತಾರೋ ನೋಡಬೇಕು ಎಂದರು.
ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಬೆಂಗಳುರು ಏರ್ಪೋರ್ಟ್ಗೆ ಬಂದಿಳಿದಿದ್ದಾರೆ.
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯಿಸಿದ್ದಾರೆ. ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಲು ಆಗ್ರಹಿಸಿದ್ದಾರೆ. ಒಳಮೀಸಲಾತಿ ವಿರೋಧಿಸಿದ ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳು ಕಾಂಗ್ರೆಸ್ಗೆ ಮತನೀಡಿದ್ದೇವೆ. ಈ ಸಮುದಾಯಗಳ ಸಾಂಘಿಕ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನ ನೀಡಲು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ 2.O ಎಂಬ ಬರಹವುಳ್ಳ ಸುಮಾರು 7 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಲಾಗಿದೆ.
ಚುನಾವಣಾ ಸೋಲಿನ ಪರಾಮರ್ಶೆ ವಿಚಾರಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆ ನಿಲ್ತೇವೆ. ನನ್ನ ನಿರೀಕ್ಷೆ ಹುಸಿಯಾಗಿದೆ, ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ. ಪಂಚರತ್ನ ಯೋಜನೆಗಳು ಜನರಗೆ ಇಡಿಸಲಿಲ್ಲ ಅನ್ಸುತ್ತೆ. ಕಾಂಗ್ರೆಸ್ನ ಗ್ಯಾರಂಟಿಗಳ ನಂಬಿ ಮತಹಾಕಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಏನೆಲ್ಲಾ ಆಗಿದೆ ಅನ್ನೊದರ ಬಗ್ಗೆ ಮಾಹಿತಿ ಕಲೆ ಹಾಕ್ತೇನೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ. ದೇವೇಗೌಡರು ಎರಡು ಬಾರಿ ಸೋತ ಬಳಿಕವೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜನ ಮುಂದಿನ ದಿನಗಳಲ್ಲಿ ಮತ್ತೆ ಜೆಡಿಎಸ್ ಬೇಕು ಅಂತ ಬಯಸ್ತಾರೆ ಎಂದು ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಆಯ್ಕೆ ಹಿನ್ನೆಲೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜೊತೆಗೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲು ಕೆಲಸ ಮಾಡ್ತೇವೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ.
ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ. pic.twitter.com/V0OoO7JUKQ
— Siddaramaiah (@siddaramaiah) May 18, 2023
ನಾನು ಕೂಡ ಸಿಎಂ, ಡಿಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಈಗ ಹೈಕಮಾಂಡ್ನವರು ಸಿಎಂ, ಡಿಸಿಎಂ ಘೋಷಣೆ ಮಾಡಿದ್ದಾರೆ. ಮುಂದೆ ಏನಾದರೂ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ನೋಡೋಣ ಎಂದು ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ 2ನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಿ. ದಲಿತ ಸಮುದಾಯದ ನಿರೀಕ್ಷೆ ಬಹಳ ದೊಡ್ಡದಿದೆ. ಅದನ್ನು ಅರ್ಥಮಾಡಿಕೊಂಡು ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಾಡದಿದ್ದರೆ ಸ್ವಾಭಾವಿಕವಾಗಿ ಸಮುದಾಯ ಪ್ರತಿಕ್ರಿಯೆ ಇದ್ದೇ ಇರುತ್ತೆ. ಪ್ರತಿಕ್ರಿಯೆ ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದರು.
ಸಿಎಂ ಆಗಿ ಘೋಷಣೆ ನಂತರ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಎಐಸಿಸಿ ಏನು ಹೇಳಿದೆಯೋ ಅದೇ ನನ್ನ ನಿರ್ಧಾರ ಎಂದಿದ್ದಾರೆ.
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಕೆ.ಸಿ.ವೇಣುಗೋಪಾಲ್ ಘೋಷಿಸಿದ್ದಾರೆ. ಡಿಕೆ ಶಿವಕುಮಾರ್ ಒಬ್ಬರು ಮಾತ್ರ ಡಿಸಿಎಂ ಆಗಿರುತ್ತಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮುಂದುವರಿಯಲಿದ್ದಾರೆ. ಮೇ 20ರಂದು ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮೇ 20ರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಮೇ 20ರಂದು ಕೆಲ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಘೋಷಣೆ ಮಾಡಿದರು.
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ ಆರಂಭವಾಗಿದೆ. ರಣದೀಪ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಕರ್ನಾಟಕದ ಗೆಲುವಿನ ಶ್ರೇಯಸ್ಸು ಸೋನಿಯಾ ಗಾಂಧಿ, ಪ್ರಿಯಾಂಕಾ ಗಅಂಧಿ, ರಾಹುಲ್ ಗಾಂಧಿ ಸೇರಿ ಎಲ್ಲ ಹಿರಿಯ ನಾಯಕರಿಗೂ ಸಲ್ಲುತ್ತದೆ. ಭಾರತ್ ಜೋಡೋ ಪಾದಯಾತ್ರೆ ಬಳಿಕ ಕಾಂಗ್ರೆಸ್ ಗೆದ್ದಿದೆ. ಕರ್ನಾಟಕದಲ್ಲಿ ಅನುಭವಿ, ಸಮರ್ಥ ಕಾಂಗ್ರೆಸ್ ನಾಯಕರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸಂಘಟಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಸಮರ್ಥ ನಾಯಕರು ಎಂದರು.
ಮಧ್ಯಾಹ್ನ ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬೆಂಗಳೂರಿನತ್ತ ಪ್ರಯಾಣಿಸಲಿದ್ದಾರೆ. ಸದ್ಯ ಈಗ ನವದೆಹಲಿಯ ರಾಜಾಜಿ ಮಾರ್ಗ್ 10ರಲ್ಲಿರುವ ಖರ್ಗೆ ನಿವಾಸದಲ್ಲೇ ಇದ್ದಾರೆ.
ದೆಹಲಿಯ ರಹಸ್ಯ ಸ್ಥಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸುತ್ತಿದ್ದಾರೆ. ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದು ಸಭೆ ನಡೆಸಲಾಗುತ್ತಿದೆ. K.H.ಮುನಿಯಪ್ಪ, ಎಂ.ಬಿ.ಪಾಟೀಲ್, ಜಮೀರ್ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮತ್ತೆ ಮೂರು ಡಿಸಿಎಂ ಸ್ಥಾನ ಸೃಷ್ಟಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ. ಮುಸ್ಲಿಂ,ದಲಿತ, ಲಿಂಗಾಯತ ಸಮಾಜಕ್ಕೆ ಡಿಸಿಎಂ ಸ್ಥಾನಕ್ಕಾಗಿ ಒತ್ತಾಯಿಸಲಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕರ ಪ್ರತ್ಯೇಕ ಸಭೆ ಅಚ್ಚರಿ ಮೂಡಿಸಿದೆ.
ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು. ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆಂಬುದು ಸೂಕ್ತ ಅಲ್ಲ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಲಿ. ನಾನೂ ಕೂಡ ಡಿಸಿಎಂ ಆಗಿದ್ದವನು. ಎಲ್ಲರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ಡಿಕೆ ಶಿವಕುಮಾರ್ ಮಾತ್ರ ಡಿಸಿಎಂ ಎಂಬುದಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಕೇವಲ ಕೆಲವರು ಮಾತ್ರ ಅಧಿಕಾರದಲ್ಲಿ ಇರಬೇಕು ಎಂಬುದು ಸರಿಯಲ್ಲ. ಎಲ್ಲ ಸಮುದಾಯಗಳ ಹಿರಿಯರಿಗೂ ಡಿಸಿಎಂ ಸ್ಥಾನ ನೀಡಬೇಕು. ದಲಿತ ಲಿಂಗಾಯತ ಸಮುದಾಯ ಸೇರಿ ಪ್ರಮುಖ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಲೇಬೇಕು ಎಂದು ಎಐಸಿಸಿ ನಾಯಕರ ಮುಂದೆ ಪಟ್ಟು ಹಿಡಿಯಲು ಹಿರಿಯ ನಾಯಕರು ನಿರ್ಧರಿಸಿದ್ದಾರೆ.
ಅಧಿಕೃತವಾಗಿ ಸರ್ಕಾರ ರಚನೆಗೆ ಕಾಂಗ್ರೆಸ್ ಮುಂದಾಗಿದೆ. ಡಾ.ಪರಮೇಶ್ವರ್ ರಾಜಭವನದಲ್ಲಿ ರಾಜ್ಯಪಾಲರ ಭೇಟಿಯಾಗಿದ್ದಾರೆ. ಮೇ 20ರಂದು ಪದಗ್ರಹಣಕ್ಕೆ ದಿನಾಂಕ ನಿಗದಿ ಮಾಡಲು ಮನವಿ ಮಾಡಿದ್ದು ಡಾ.ಪರಮೇಶ್ವರ್ ರಾಜ್ಯಪಾಲರಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ಭೇಟಿ ನೀಡಲಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಆಯ್ಕೆ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ 101 ಈಡುಗಾಯಿ ಹೊಡೆದಿದ್ದಾರೆ. ಸರ್ಕಾರ ಐದು ವರ್ಷ ಆಡಳಿತ ನಡೆಸಲಿ, ಯಾವುದೇ ತೊಂದರೆ ಆಗದಿರಲಿ ಎಂದು ಪೂಜೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಟಿವಿ9ಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡುತ್ತಾರೆ. ನಾನು ಯಾವುದೇ ಸಚಿವಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದೇನೆ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಯಾವುದೇ ಷರತ್ತು ಹಾಕಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದರು.
ಡಿಕೆಶಿಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಸಂಪೂರ್ಣ ಸಂತೋಷವಿಲ್ಲ. ಆದರೆ ಕರ್ನಾಟಕದ ಹಿತದೃಷ್ಟಿಯಿಂದ ಡಿಕೆಶಿ ಒಪ್ಪಿದ್ದಾರೆ. ‘ನಾವು ನೀಡಿರುವ ಭರವಸೆ ಮೊದಲು ಈಡೇರಿಸಬೇಕು’ ‘ಅದಕ್ಕಾಗಿ ಡಿ.ಕೆ.ಶಿವಕುಮಾರ್ ಒಪ್ಪಿಕೊಳ್ಳಬೇಕಾಯ್ತು’ ‘ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದನ್ನು ನೋಡುತ್ತೇವೆ’ ಮುಂದೇನಾಗುತ್ತೆ ಕಾದು ನೋಡೋಣ ಎಂದರು.
ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಬಂದು ನಾಲ್ಕು ದಿನಗಳು ಕಳೆದರೂ ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಸಿದ್ದರಾಮಯ್ಯ ಅಥವಾ ಡಿಕೆಶಿ ಯಾರಾಗ್ತಾರೆ ಸಿಎಂ ಎಂಬ ಕುತೂಹಲದ ಮಧ್ಯೆ ಇದೀಗ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬೆಳಗಾವಿ ಕಾಂಗ್ರೆಸ್ ಶಾಸಕರು ಲಾಭಿ ನಡೆಸಿದ್ದಾರೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬಿರು ಬಿಸಿಲು ಜೋರಾಗಿದೆ. ಮುಂಗಾರು ಮಳೆ ಬಹುತೇಕ ವಿಫಲಗೊಂಡಿದೆ. ಹೀಗಾಗಿ, ಮತ್ತೊಮ್ಮೆ ಬರದ ಛಾಯೆ ಮನೆ ಮೂಡಿದ್ದು, ಬಿತ್ತನೆ ಕುಂಠಿತಗೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಎದುರಾಗುತ್ತದೆಂಬ ನಂಬಿಕೆ ಜನರಲ್ಲಿದ್ದು, ಬರದ ಭೀತಿ ಮೂಡಿದೆ.
ಮೇ 20ರಂದೇ ಸಚಿವ ಸಂಪುಟ ರಚನೆ ಸಾಧ್ಯತೆ ಇದ್ದು ಸಿಎಂ, ಡಿಸಿಎಂ ಜೊತೆ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಮೊದಲ ಹಂತದ ಮಂತ್ರಿ ಮಂಡಲ ಅಸ್ತಿತ್ವ ಬರುವ ನಿರೀಕ್ಷೆ ಇದೆ. 10ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಿಎಂ ಸ್ಥಾನ ಯಾರಿಗೆ ಎಂಬ ಬಗ್ಗೆ ಬಹುತೇಕ ಖಚಿತವಾಗುತ್ತಿದ್ದಂತೆ ಸಚಿವ ಸ್ಥಾನ ಆಕಾಂಕ್ಷಿಗಳ ಕೂಗು ಕೇಳಿಸತೊಡಗಿದೆ. ತುಮಕೂರು ಜಿಲ್ಲೆಯಲ್ಲಿ ನಾಲ್ವರು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದಾರೆ. ಮಧುಗಿರಿ ಕೈ ಶಾಸಕ ಕೆಎನ್ ರಾಜಣ್ಣ ಈಗಾಗಲೇ ಬಹಿರಂಗವಾಗಿ ಸಚಿವ ಸ್ಥಾನ ಬೇಕೆಂದಿದ್ದಾರೆ. ಇದರ ಜೊತೆಗೆ ಕೊರಟಗೆರೆ ಶಾಸಕ ಮಾಜಿ ಡಿಸಿಎಂ ಪರಮೇಶ್ವರ್, ಶಿರಾ ಶಾಸಕ ಜಯಚಂದ್ರ ಹಾಗೂ ತಿಪಟೂರು, ಶಾಸಕ ಷಡಕ್ಷರಿ ರೇಸ್ನಲ್ಲಿದ್ದಾರೆ. ಹಿರಿಯರಾಗಿರುವ ಪರಮೇಶ್ವರ್, ಜಯಚಂದ್ರ ಹಾಗೂ ರಾಜಣ್ಣ ನಡುವೆ ಪೈಪೋಟಿ ಹೆಚ್ಚಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ. ದೆಹಲಿಯಲ್ಲಿರುವ ವೇಣುಗೋಪಾಲ್ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಾರೆ.
Published On - 9:51 am, Thu, 18 May 23