ಇಷ್ಟು ದಿನ ರಾಜ್ಯವೆಲ್ಲ ಸುತ್ತಾಡಿ ಕೊನೆ ದಿನ ಸ್ವಕ್ಷೇತ್ರಗಳಲ್ಲಿ ಮತ ಬೇಟೆಗಿಳಿದ  ಘಟಾನುಘಟಿ ನಾಯಕರು

| Updated By: ಸಾಧು ಶ್ರೀನಾಥ್​

Updated on: May 08, 2023 | 8:20 AM

ಚುನಾವಣಾ ಪ್ರಚಾರಕ್ಕೆ ಇಂದು ಕೊನೆಯ ದಿನ. ಹೀಗಾಗಿ ಮೂರೂ ಕ್ಷೇತ್ರದ ಘಟಾನುಘಟಿ ನಾಯಕರು ಇಂದು ಸ್ವಕ್ಷೇತ್ರದಲ್ಲಿ ಶಿಕಾರಿಗೆ ಮುಂದಾಗಿದ್ದಾರೆ.

ಇಷ್ಟು ದಿನ ರಾಜ್ಯವೆಲ್ಲ ಸುತ್ತಾಡಿ ಕೊನೆ ದಿನ ಸ್ವಕ್ಷೇತ್ರಗಳಲ್ಲಿ ಮತ ಬೇಟೆಗಿಳಿದ  ಘಟಾನುಘಟಿ ನಾಯಕರು
ಕಾಂಗ್ರೆಸ್​, ಬಿಜಪಿ, ಜೆಡಿಎಸ್
Follow us on

ಬೆಂಗಳೂರು: ಇಂದು ಸಂಜೆಯಾಗುತ್ತಿದ್ದಂತೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಹಿನ್ನೆಲೆ ಸಭೆ, ಸಮಾರಂಭ, ಉತ್ಸವ, ಱಲಿಗಳಿಗೆ ನಿರ್ಬಂಧ ಹೇರಲಾಗಿದೆ. ಸಂಜೆ 5 ಗಂಟೆ ನಂತರ ಧ್ವನಿ ವರ್ಧಕಗಳ ಬಳಕೆ ಮಾಡುವಂತಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿ ಸೇರಿ 6 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಹೊರತುಪಡಿಸಿ, ಹೊರಗಿನಿಂದ ಬಂದ ಸ್ಟಾರ್​ ಪ್ರಚಾರಕರು ಮತ್ತು ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರಕ್ಕೆ ಅಂತ್ಯ ಹಾಡಿ, ಆಯಾ ಕ್ಷೇತ್ರದಿಂದ ಕಾಲ್ತೆಗೆಯುವುದು ಅನಿವಾರ್ಯ. ಅದು ಚುನಾವಣೆ ಆಯೋಗದ ನಿಯಮ. ಹಾಗಾಗಿ ಸೇಫ್​​​ ಆಗಿ, ಸ್ಟಾರ್​ ಪ್ರಚಾರಕರು ಮತ್ತು ಘಟಾನುಘಟಿ ನಾಯಕರು ಚುನಾವಣಾ ಪ್ರಚಾರದಿಂದ ದೂರ ಸರಿಯುವುದರ ಜೊತೆಗೆ ತಮ್ಮದಲ್ಲದ ಕ್ಷೇತ್ರಗಳಿಂದಲೂ ವಿಮುಕರಾಗಬೇಕಾಗುತ್ತದೆ. ಅದರಂತೆ ಇಂದಿನಿಂದ ಲೋಕಲ್​​ ಫೈಟ್​​ ಅಷ್ಟೇ ಪ್ರಧಾನವಾಗಿ ಕಾಣಬರುತ್ತದೆ. ಹಾಗಾಗಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ, ಪ್ರಚಾರದಲ್ಲಿ ತೊಡಗಲಿದ್ದಾರೆ.

ಹೀಗಾಗಿ ಮೂರೂ ಕ್ಷೇತ್ರದ ಘಟಾನುಘಟಿ ನಾಯಕರು ಇಂದು ಕೊನೆ ಹಂತದ ಪ್ರಚಾರಕ್ಕೆ ಭಾರೀ ಸಿದ್ಧತೆಗಳನ್ನು ನಡೆಸಿದ್ದಾರೆ. ಬಹುತೇಕ ನಾಯಕರು ಇಂದು ಸ್ವಕ್ಷೇತ್ರದಲ್ಲಿ ಶಿಕಾರಿಗೆ ಮುಂದಾಗಿದ್ದಾರೆ. ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಲಿದ್ದು ರಾಮನಗರದಲ್ಲಿಂದು ಘಟಾನುಘಟಿ ನಾಯಕರು ಅಬ್ಬರಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಹೆಚ್‌ಡಿಕೆಗೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ. ಇನ್ನು ರಾಮನಗರ ‌ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಪರ ರಾಮನಗರ, ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಪ್ರಚಾರ ನಡೆಸಲಿದ್ದಾರೆ.

ರಾಮನಗರದಲ್ಲಿ ಹೆಚ್​ಡಿಕೆ ಮತಬೇಟೆ

ಹೆಚ್​ಡಿ ಕುಮಾರಸ್ವಾಮಿ ಅವರು ಇಂದು ಸ್ವಕ್ಷೇತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಮತಬೇಟೆಯಾಡಲಿದ್ದಾರೆ. ಚನ್ನಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಚನ್ನಪಟ್ಟಣದ ಶೇರ್ವಾ ಸರ್ಕಲ್ ನಿಂದ ಮಂಗಳವಾರಪೇಟೆವರೆಗೂ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಹೆಚ್​ಡಿ ಕುಮಾರಸ್ವಾಮಿಗೆ ತಂದೆ ಹೆಚ್​ಡಿ ದೇವೇಗೌಡ, ಪುತ್ರ ನಿಖಿಲ್ ಸಾಥ್ ನೀಡಲಿದ್ದಾರೆ. ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕನಕಪುರ ಜೆಡಿಎಸ್ ಅಭ್ಯರ್ಥಿ ಪರ ಹೆಚ್​ಡಿ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಲಿದ್ದಾರೆ. ಇನ್ನು ಇಂದು ರಾಮನಗರ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಮತಯಾಚನೆ ಮಾಡಲಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರಚಾರ

ಚಾಮರಾಜನಗರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದು ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್​ನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಗಣೇಶ್​ ಪ್ರಸಾದ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಇನ್ನು ತವರು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆ ಮಾಡಲಿದ್ದಾರೆ. ನಿನ್ನೆಯಷ್ಟೇ ನಂಜನಗೂಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ರು ಇದೀಗ ಮೋದಿಗೆ ತಿರುಗೇಟು ನೀಡಿ ಸಿದ್ದರಾಮಯ್ಯ ಮತಯಾಚಿಸಲಿದ್ದಾರೆ.

ಇದನ್ನೂ ಓದಿ: ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯ: ಮನೆ ಮನೆಗೆ ತೆರಳಿ ಮತಯಾಚನೆ, ಮದ್ಯ ಮಾರಾಟ ನಿಷೇಧ

ಮಾಜಿ ಡಿಸಿಎಂ ಪರಮೇಶ್ವರ್ ಕೊರಟಗೆರೆ ಪಟ್ಟಣ ಹಾಗೂ ವಿವಿಧ ಹಳ್ಳಿಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆಸಿ ಮಾಧುಸ್ವಾಮಿ ಕೂಡ ಚಿಕ್ಕನಾಯಕನಹಳ್ಳಿ ಪಟ್ಟಣ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ತಿಪಟೂರು ಬಿಜೆಪಿ ಅಭ್ಯರ್ಥಿ ಬಿಸಿ ನಾಗೇಶ್ ತಿಪಟೂರು ನಗರದಲ್ಲಿ, ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಶಿರಾದಲ್ಲಿ ಹೀಗೆ ತಮ್ಮ ತಮ್ಮ ಬೆಂಬಲಿಗರ ಜೊತೆ ತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದು ಮತಯಾಚನೆ ಮಾಡಲಿದ್ದಾರೆ. ಇಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಪ್ರಚಾರ ನಡೆಸಲಿದ್ದಾರೆ. ಉಣಕಲ್, ಕೇಶ್ವಾಪೂರ, ದೇಶಪಾಂಡೆ ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ. ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಕೂಡ ಪ್ರಚಾರ ನಡೆಸಲಿದ್ದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕೇಂದ್ರ ಸಚಿವ ಜೋಶಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಬೆಂಗಳೂರಿನ ಪದ್ಮಾನಾಭನಗರದಲ್ಲಿ ಆರ್​ ಅಶೋಕ್​​, ಬಾದಾಮಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಚಾಮರಾಜಪೇಟೆಯಲ್ಲಿ ಕೇಂದ್ರ ಸಚಿವ ಎಲ್. ಮುರುಗನ್, ಧರ್ಮಸ್ಥಳ, ಉಡುಪಿ, ಕಾಪುಗಳಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ರಾಜರಾಜೇಶ್ವರಿ ನಗರ, ಜಯನಗರ, ಆನೇಕಲ್​ಗಳಲ್ಲಿ ಕೇಂದ್ರ ಸಚಿವ ವಿ.ಕೆ. ಸಿಂಗ್, ಕೊರಟಗೆರೆಯಲ್ಲಿ ಕೇಂದ್ರ ಸಚಿವ ಎ.‌ ನಾರಾಯಣಸ್ವಾಮಿ, ಪಿರಿಯಾಪಟ್ಟಣದಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಶಿಕಾರಿಪುರದಲ್ಲಿ ಚಲನಚಿತ್ರ ನಟ ಸುದೀಪ್, ಭದ್ರಾವತಿ, ಶಿಕಾರಿಪುರದಲ್ಲಿ ಚಲನಚಿತ್ರ ನಟಿ ತಾರಾ ಅನುರಾಧಾ, ಶಿರಸಿಯಲ್ಲಿ ಚಲನಚಿತ್ರ ನಟಿ ಶ್ರುತಿ, ನಾಗಮಂಗಲ, ರಾಮನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷ್ಣರಾಜ, ಚಾಮರಾಜದಲ್ಲಿ ತಮಿಳುನಾಡು ಶಾಸಕಿ ವಾನತಿ ಶ್ರೀನಿವಾಸ್, ಪದ್ಮನಾಭನಗರದಲ್ಲಿ ಚಲನಚಿತ್ರ ನಟ ಧ್ರುವ ಸರ್ಜಾ ಪ್ರಚಾರ ನಡೆಸಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:05 am, Mon, 8 May 23