ಬೆಂಗಳೂರು: ಮೋದಿ ವಿಷದ ಹಾವು ಇದ್ದಂತೆ, ನೆಕ್ಕಿದರೆ ಸುತ್ತ ಎಂಬ ತಮ್ಮ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ಮೋದಿಯನ್ನು ನರಹಂತಕ ಎಂದು ಹೇಳಿದ್ದ ಖರ್ಗೆ ಅವರು ಇದೀಗ ಮೋದಿ (Narendra Modi) ವಿಷದ ಹಾವು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿಕೊಂಡಿದ್ದಾರೆ. ವಿವಾದದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಖರ್ಗೆ, ತಾನು ಮೋದಿಗೆ ಹೇಳಿಲ್ಲ, ಬಿಜೆಪಿಗೆ ಹೇಳಿದ್ದು ಎಂಬ ಸ್ಪಷ್ಟನೆ ನೀಡಿದ್ದರು. ಆದರೂ ಬಿಜೆಪಿ ನಾಯಕರ ಟೀಕೆಗೆ ಜಗ್ಗಿದ ಖರ್ಗೆ, ಕ್ಷಮೆಯಾಚಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆ ಇರಲಿ ಎಂದರು. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡು ನೋವಾಗಿದ್ದರೆ ವಿಷಾದ ಇರಲಿ. ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಾಗಲಿ ಅಥವಾ ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಬಿಜೆಪಿ-ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧಾಂತ ವಿಷಕಾರಿಯಾಗಿದೆ ಎಂದರು.
ಇದನ್ನೂ ಓದಿ: Mallikarjun Kharge; ಮಲ್ಲಿಕಾರ್ಜುನ ಖರ್ಗೆ ಹಣೆಗೆ ಹಚ್ಚಿದ ಕುಂಕುಮವನ್ನು ಬಾಡಿಗಾರ್ಡ್ ಒರೆಸಿದ್ಯಾಕೆ?
ಈ ಬಗ್ಗೆ ಟ್ವೀಟ್ ಮಾಡಿದ ಖರ್ಗೆ, ನಾನು ಬಡವರು ಮತ್ತು ದೀನದಲಿತರ ನೋವನ್ನು ನೋಡಿದ್ದೇನೆ ಮತ್ತು ಸಹಿಸಿಕೊಂಡಿದ್ದೇನೆ. ಐದು ದಶಕಗಳಿಂದ, ನಾನು ಯಾವಾಗಲೂ ಬಿಜೆಪಿ ಮತ್ತು ಆರ್ಎಸ್ಎಸ್ನ ವಿಭಜಕ ಸಿದ್ಧಾಂತವನ್ನು ವಿರೋಧಿಸುತ್ತೇನೆ. ನನ್ನ ರಾಜಕೀಯ ಹೋರಾಟವು ಅವರ ರಾಜಕೀಯದ ವಿರುದ್ಧವಾಗಿತ್ತು, ಇದೆ ಮತ್ತು ಯಾವಾಗಲೂ ಇರುತ್ತದೆ ಎಂದು ಹೇಳಿದ್ದಾರೆ.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ ಮತಯಾಚನೆ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದರೆ ಸತ್ತು ಹೋಗುತ್ತಾರೆ. ಮೋದಿ ಓರ್ವ ಸುಳ್ಳುಗಾರ. ಕಪ್ಪು ಹಣ ತಂದು 15 ಲಕ್ಷ ಕೊಡುತ್ತೇನೆ ಅಂದರು. ಆದರೆ ಇನ್ನೂ ಕೊಟ್ಟಿಲ್ಲ. ಎಲ್ಲ ಹಣ ಅದಾನಿ ಹತ್ತಿರ ಇಟ್ಟಾರೆನೋ? 18 ಕೋಟಿ ಯುವಕರಿಗೆ ನೌಕರಿ ಕೊಡಬೇಕಿತ್ತು. ಆದರೆ ಉದ್ಯೋಗ ಕೊಟ್ಟಿಲ್ಲ. ಅವರು ಸುಳ್ಳಿನ ಸರದಾರ ಎಂದು ಹೇಳಿದ್ದರು.
ಆರಂಭದಲ್ಲಿ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಯೂಟರ್ನ್ ಹೊಡೆದ ಖರ್ಗೆ, ನಾನು ಪ್ರಧಾನಿ ಮೋದಿಯನ್ನು ವಿಷದ ಹಾವು ಎಂದು ಹೇಳಿಲ್ಲ. ಭಾರತೀಯ ಜನತಾ ಪಾರ್ಟಿ ಹಾವು ಇದ್ದಂತೆ, ಅದನ್ನು ನೆಕ್ಕಿ ನೋಡುತ್ತೇನೆ ಅಂದರೆ ಸತ್ತು ಹೋಗ್ತಾರೆ ಅಂತಾ ಹೇಳಿದ್ದೆ. ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರು ಹೇಳಿಲ್ಲ ಎಂದಿದ್ದರು. ಇದೀಗ ಕ್ಷಮೆಯಾಚಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Thu, 27 April 23