ಮೋದಿ ವಿರುದ್ಧದ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಯುಟರ್ನ್ ಹೊಡೆದ ಮಲ್ಲಿಕಾರ್ಜುನ ಖರ್ಗೆ

|

Updated on: Apr 27, 2023 | 5:32 PM

ಮೋದಿ ವಿಷ ಸರ್ಪ ಇದ್ದಂಗೆ, ನೆಕ್ಕಿದರೆ ಸತ್ತು ಹೋಗುತ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿವಾದ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಯೂಟರ್ನ್ ಹೊಡೆದ ಅವರು, ಬಿಜೆಪಿ ಹಾವು ಇದ್ದಂತೆ ಎಂದು ಹೇಳಿದ್ದಾರೆ.

ಮೋದಿ ವಿರುದ್ಧದ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಯುಟರ್ನ್ ಹೊಡೆದ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ
Follow us on

ಗದಗ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿಷದ ಹಾವಿದ್ದಂತೆ, ನೆಕ್ಕಿದರೆ ಸತ್ತು ಹೋಗುತ್ತಾರೆ ಎಂದು ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಸದ್ಯ ಯೂಟರ್ನ್ ಹೊಡೆದು ಮೈಮೇಲೆ ಎಳೆದುಕೊಂಡ ವಿವಾದವನ್ನು ಹೊಡೆದೋಡಿಸುವ ಪ್ರಯತ್ನ ಮಾಡಿದ್ದಾರೆ. ನಾನು ಮೋದಿಗೆ ವಿಷದ ಹಾವು ಅಂತ ಹೇಳಿಲ್ಲ, ಬಿಜೆಪಿಗೆ ಹೇಳಿದ್ದಾಗಿ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯವಾಗಿ ಟೀಕಿಸುವ ಭರದಲ್ಲಿ ಕೆಲವೊಮ್ಮೆ ತೀರಾ ವೈಯಕ್ತಿಕ ವಿಚಾರವಾಗಿ ಇಳಿಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ದೇಶದ ಪ್ರಧಾನಿ ಎಂಬುದನ್ನು ಲೆಕ್ಕಿಸದೆ ವೈಯಕ್ತಿಕವಾಗಿ ಟೀಕಿಸುತ್ತಾರೆ. ಅದರಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟು ಸುಟ್ಟುಕೊಂಡಿದ್ದಾರೆ. ಹಾಗಿದ್ದರೆ ತಮ್ಮ ವಿವಾದಾತ್ಮಕ ಹೇಳಿಕೆಗೆ ಖರ್ಗೆ ಕೊಟ್ಟ ಸ್ಪಷ್ಟನೆ ಏನು?

ಇದನ್ನೂ ಓದಿ: ಮೋದಿ ವಿಷ ಸರ್ಪ ಇದ್ದಂಗೆ, ನೆಕ್ಕಿದ್ರೆ ಸತ್ತ: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಗದಗ ಜಿಲ್ಲೆಯ ರೋಣದಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಖರ್ಗೆ, ನಾನು ಪ್ರಧಾನಿ ಮೋದಿಯನ್ನು ವಿಷದ ಹಾವು ಎಂದು ಹೇಳಿಲ್ಲ. ಭಾರತೀಯ ಜನತಾ ಪಾರ್ಟಿ ಹಾವು ಇದ್ದಂತೆ, ಅದನ್ನು ನೆಕ್ಕಿ ನೋಡುತ್ತೇನೆ ಅಂದರೆ ಸತ್ತು ಹೋಗ್ತಾರೆ ಅಂತಾ ಹೇಳಿದ್ದೆ. ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರು ಹೇಳಿಲ್ಲ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ವಿರುದ್ಧ ನಾಲಗೆ ಹರಿಬಿಟ್ಟದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಮೋದಿಯನ್ನು ವೈಯಕ್ತಿವಾಗಿ ಟೀಕಿಸಿದ್ದು. ಹೌದು, ಮೋದಿ ಓರ್ವ ನರಹಂತಕ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ‌ ಮತಯಾಚನೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯನ್ನು ಟೀಕಿಸಲು ಹೋಗಿ ವಿವಾದದ ಸುಳಿಕೆ ಸಿಲುಕಿಕೊಂಡಿದ್ದಾರೆ. ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದರೆ ಸತ್ತು ಹೋಗುತ್ತಾರೆ. ಮೋದಿ ಓರ್ವ ಸುಳ್ಳುಗಾರ. ಕಪ್ಪು ಹಣ ತಂದು 15 ಲಕ್ಷ ಕೊಡುತ್ತೇನೆ ಅಂದರು. ಆದರೆ ಇನ್ನೂ ಕೊಟ್ಟಿಲ್ಲ. ಎಲ್ಲ ಹಣ ಅದಾನಿ ಹತ್ತಿರ ಇಟ್ಟಾರೆನೋ? 18 ಕೋಟಿ ಯುವಕರಿಗೆ ನೌಕರಿ‌ ಕೊಡಬೇಕಿತ್ತು. ಆದರೆ ಉದ್ಯೋಗ ಕೊಟ್ಟಿಲ್ಲ. ಅವರು ಸುಳ್ಳಿನ ಸರದಾರ ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Thu, 27 April 23