ಬಿಜೆಪಿ ಸೋಲಿಗೆ ಕಟೀಲ್, ಬಿಎಲ್​ ಸಂತೋಷ್ ಹೊಣೆಗಾರರಲ್ಲ: ಬಿವೈ ವಿಜಯೇಂದ್ರ

|

Updated on: May 15, 2023 | 4:10 PM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಎಲ್ ಸಂತೋಷ್ ಕಾರಣ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಲಿನ ಬಗ್ಗೆ ಬಿವೈ ವಿಜಯೇಂದ್ರ ಹೇಳಿದ್ದೇನು?

ಬಿಜೆಪಿ ಸೋಲಿಗೆ ಕಟೀಲ್, ಬಿಎಲ್​ ಸಂತೋಷ್ ಹೊಣೆಗಾರರಲ್ಲ: ಬಿವೈ ವಿಜಯೇಂದ್ರ
ನಳಿನ್ ಕುಮಾರ್ ಕಟೀಲ್, ಬಿವೈ ವಿಜಯೇಂದ್ರ, ಬಿಎಲ್ ಸಂತೋಷ್
Follow us on

ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಬಿಜೆಪಿಯ ಹೀನಾಯ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹಾಗೂ ಬಿಎಲ್ ಸಂತೋಷ್ (BL Santhosh) ಕಾರಣ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಬಿಜೆಪಿ ಸೋಲಿಗೆ ಕಟೀಲು ಹಾಗೂ ಬಿ.ಎಲ್​.ಸಂತೋಷ್ ಹೊಣೆಗಾರರಲ್ಲ. ಪಕ್ಷದ ಹಿನ್ನಡೆಗೆ ಸಾಕಷ್ಟು ಕಾರಣಗಳಿವೆ. ಈ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಾತನಾಡಿದ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ, ಸೋಲಿನ ಬಗ್ಗೆ ಹಲವಾರು ರೀತಿ ಚರ್ಚೆಗಳು ನಡೆಯುತ್ತಿವೆ. ಪಕ್ಷದ ಹಿನ್ನಡೆಗೆ ಸಾಕಷ್ಟು ಕಾರಣಗಳಿವೆ, ಇದರ ಬಗ್ಗೆ ಚರ್ಚಿಸುತ್ತೇವೆ. ಬಿಜೆಪಿ ನಾಯಕರು ಸೋಲಿನ ಬಗ್ಗೆ ಅವಲೋಕನ ಮಾಡಲಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಗಟ್ಟಿಯಾಗಿದ್ದಾರೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಲಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು, ಪಕ್ಷವನ್ನು ಪುನರ್ ಸಂಘಟನೆ ಹೇಗೆ ಮಾಡಬೇಕು ಎಂಬುದರ‌ ಚರ್ಚೆ ನಡೆಯಲಿದೆ. ನಮ್ಮಂತ ಯುವಕರು ಶಾಸಕರು ತುಂಬಾ ಜನ ಗೆದ್ದಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ಪಕ್ಷವನ್ನ ಮೊತ್ತೊಮ್ಮೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಕಾಂಗ್ರೆಸ್​ನ ​ಹಿಂಸಾ ಸ್ಕೀಮ್ ಸಹಿಸಲ್ಲ ಎಂದ ನಳಿನ್ ಕುಮಾರ್ ಕಟೀಲ್

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಆಡಳಿತ ನಡೆಸುತ್ತಿದ್ದ ಪಕ್ಷ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಫಲಿತಾಂಶದ ಬೆನ್ನಲ್ಲೇ ಪಕ್ಷದ ನಾಯಕತ್ವದ ಆಕ್ರೋಶಗಳು ಭುಗಿಲೆದ್ದವು. ಇದರ ಬೆನ್ನಲ್ಲೇ ಸೋಲಿನ ಹೊಣೆಯನ್ನು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೊತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸೋಲು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಎರಡು ಮಾನದಂಡಗಳು ಬೇರೆ ಬೇರೆಯಾಗಿವೆ. ಹೀಗಾಗಿ ಈ ಫಲಿತಾಂಶ ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ. ಈ ಸೋಲನ್ನ ಒಪ್ಪಿಕೊಂಡಿದ್ದೇವೆ, ಸೋಲಿನಿಂದ ಪಾಠ ಕಲಿತು ಎಚ್ಚೆತ್ತುಕೊಂಡು ಕೆಲಸ ಮಾಡಿಲಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮೋದಿಯವರ ಕೈ ಬಲ ಪಡಿಸುತ್ತೇವೆ ಎಂದರು.

ನನ್ನ ಮೊದಲ ಚುನಾವಣೆಯಲ್ಲಿಯೆ ಶಿಕಾರಿಪುರ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಶ್ರಮ ಪಟ್ಟು ನಾನು ವಿಧಾನಸಭೆಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಪೂಜ್ಯರ ಆಶಿರ್ವಾದ ಪಡೆಯುವುದು ನಮ್ಮ ಧರ್ಮ. ಹೀಗಾಗಿ ಮಠಕ್ಕೆ ಬಂದು ಆಶಿರ್ವಾದ ಪಡೆದಿದ್ದೇನೆ. ಯಡಿಯೂರು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿಗೆ ಲಿಂಗಾಯತರು ಕೈ ಕೊಟ್ಟಿದ್ದಾರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಒಂದು ಜಾತಿ ಆಧಾರದ ಮೇಲೆ ಚುನಾವಣೆ ಮಾಡಲು ಸಾಧ್ಯವಿಲ್ಲ. ಗೆಲ್ಲುವುದಕ್ಕೂ ಆಗಲ್ಲ. ಶಿಕಾರಿಪುರ ಕ್ಷೇತ್ರದಲ್ಲಿ ಲಿಂಗಾಯತರು ಸೇರಿದಂತೆ ಹಾಲುಮತ ಸಮಾಜ, ಎಸ್​​ಸಿ ಎಸ್​ಟಿ ಸಮಾಜಗಳು ಸೇರಿ ನನ್ನನ್ನ ಗೆಲ್ಲಿಸಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ