ಮತಯಾಚನೆ ವಿಚಾರವಾಗಿ ಕಾಂಗ್ರೆಸ್​, ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ: ಕಾಂಗ್ರೆಸ್​ ಅಭ್ಯರ್ಥಿ ಕುಸುಮಾರನ್ನು ತಳ್ಳಿದ ಪೊಲೀಸ್​ ಸಿಬ್ಬಂದಿ

|

Updated on: May 06, 2023 | 10:06 PM

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾರನ್ನು ಪುರುಷ ಪೊಲೀಸ್​ ಸಿಬ್ಬಂದಿ ತಳ್ಳಾಡಿದ್ದಾರೆ ಎನ್ನಲಾಗುತ್ತಿದೆ.

ಮತಯಾಚನೆ ವಿಚಾರವಾಗಿ ಕಾಂಗ್ರೆಸ್​, ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ: ಕಾಂಗ್ರೆಸ್​ ಅಭ್ಯರ್ಥಿ ಕುಸುಮಾರನ್ನು ತಳ್ಳಿದ ಪೊಲೀಸ್​ ಸಿಬ್ಬಂದಿ
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
Follow us on

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಕಾಂಗ್ರೆಸ್ (Congress)​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾರನ್ನು (Kusuma) ಪುರುಷ ಪೊಲೀಸ್​ ಸಿಬ್ಬಂದಿ ತಳ್ಳಾಡಿದ್ದಾರೆ ಎನ್ನಲಾಗುತ್ತಿದೆ. ಕುಸುಮಾರನ್ನು ಡಿಸಿಪಿ ತಳ್ಳಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪ ಮಾಡಿದ್ದು, ಯಶವಂತಪುರ ಠಾಣೆ ಎದುರು ಕಾಂಗ್ರೆಸ್​ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಪೊಲೀಸರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ಮಾಡಲಾಗುತ್ತಿದೆ. ಕಾಂಗ್ರೆಸ್​ ಕಾರ್ಯಕರ್ತರು ಮನೆಮನೆಗೆ ತೆರಳಿ ಚೀಟಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಲಾಠಿ ಬೀಸಿದ್ದರು. ಅಭ್ಯರ್ಥಿ ಕುಸುಮಾ ಸೇರಿದಂತೆ ಎಲ್ಲರನ್ನೂ ಪೊಲೀಸರು ಚದುರಿಸಿದ್ದಾರೆ. ಪೊಲೀಸರ ಜತೆ ಸೇರಿ ಬಿಜೆಪಿ ಕಾರ್ಯಕರ್ತರು ಹಲ್ಲೆಮಾಡಿರುವುದಾಗಿ ಕಾಂಗ್ರೆಸ್​ ಆರೋಪಿಸುತ್ತಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಜಾಹೀರಾತು: ಡಿಕೆ ಶಿವಕುಮಾರ್​ಗೆ ನೋಟಿಸ್

ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹೇಳಿದಿಷ್ಟು

ಘಟನೆ ಕುರಿತಾಗಿ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಅಟ್ಟಾಡಿಸಿ ಹೊಡೆಯುತ್ತಿದ್ದಾರೆಂದು ನಮ್ಮ ಕಾರ್ಯಕರ್ತರು ನನಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರೆದುರೇ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆಂದು ಹೇಳಿದ್ದರು. ಚೀಟಿ ಹಂಚುತ್ತಿದ್ದ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ತಕ್ಷಣ ನಾನು ಸ್ಥಳಕ್ಕೆ ಬಂದಾಗ ಪೊಲೀಸರು ಸುಮ್ಮನೆ ನಿಂತಿದ್ದರು. ಬಿಜೆಪಿ ಕಾರ್ಯಕರ್ತರು ಹೊಡೆಯುತ್ತಿದ್ದನ್ನು ಕಂಡು ನಗುತ್ತಿದ್ದರು. ಹಲ್ಲೆ ತಡೆಯದ ಪೊಲೀಸರನ್ನು ಪ್ರಶ್ನಿಸಿದರೆ ಏನೂ ಆಗಿಲ್ಲ ಅಂತಾರೆ. ಮೇಲಿಂದ ನೀರು ಸುರಿಯುತ್ತಿದ್ದಾರೆ. ಒಬ್ಬ ಅಭ್ಯರ್ಥಿಗೆ ರಕ್ಷಣೆ ಇಲ್ಲವೆಂದು ವ್ಯವಸ್ಥೆ ಜೀವಂತವಿದೆಯಾ ಎಂದು ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ರೌಡಿಶೀಟರ್​ಗಳು ಸಕ್ರಿಯವಾಗಿದ್ದಾರೆ. ಪೊಲೀಸರು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಮುಕ್ತ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಆಗದಿದ್ದರೆ ರಾಜರಾಜೇಶ್ವರಿನಗರದಲ್ಲಿ BJP ಅಭ್ಯರ್ಥಿ ಗೆದ್ದಿದ್ದಾರೆಂದು ಘೋಷಿಸಿಬಿಡಿ. ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಸಂಬಂಧ ದೂರು ದಾಖಲಿಸಿದ್ದೇವೆ ಎಂದು ಹೇಳಿದರು.

ಯಶವಂತಪುರ ಪೊಲೀಸ್ ಠಾಣಾ ಮುಂದೆ ಕೆಆರ್​ಪಿ ತುಕಡಿ ನಿಯೋಜನೆ

ಸದ್ಯ ಯಶವಂತಪುರ ಪೊಲೀಸ್ ಠಾಣಾ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಮುಂದೆ ಬಿಗಿ ಬಂದೋಬಸ್ತ್​ ಮಾಡಿದ್ದು, ಕೆಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಮಾಡಿದ್ದು, ಹಲ್ಲೆ ಮಾಡುತ್ತಿದ್ದರು ಪೊಲೀಸರು ನಿಂತು ನೋಡುತ್ತಿದ್ದರು ಎಂಬ ಆರೋಪ ಸಹ ಕೇಳಿಬಂದಿದೆ. ಈಗಾಗಲೇ ಹಲವರನ್ನ ಪೊಲೀಸರು ವಶಕ್ಕೆ ಪಡೆದ್ದಾರೆ.

ಮತಯಾಚನೆಗೆ ತೆರಳಿದ್ದ ಮಹಿಳಾ ಕಾರ್ಯಕರ್ತೆಗೆ ನಿಂದಿಸಿ ಧಮ್ಕಿ: ದೃಶ್ಯ ಮೊಬೈಲ್​ನಲ್ಲಿ ಸೆರೆ 

ಬೆಂಗಳೂರು ಗ್ರಾಮಾಂತರ: ಮತಯಾಚನೆಗೆ ತೆರಳಿದ್ದ ಮಹಿಳಾ ಕಾರ್ಯಕರ್ತೆಗೆ ನಿಂದಿಸಿ ಧಮ್ಕಿ ಹಾಕಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್​ ಕಾರ್ಯಕರ್ತೆ ಶ್ಯಾಮಲಾಗೆ ನಿಂದನೆ ಮಾಡಿದ್ದು, ನಿಂದಿಸಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆ ಆಗಿದೆ. ಮತ ಕೇಳಲು ನಮ್ಮ ಏರಿಯಾಗೆ ಬರ್ತಿಯಾ ಎಂದು ನಿಂದಿಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ: ಸೋನಿಯಾ ಗಾಂಧಿ

MTB ನಾಗರಾಜ್​ ಕಡೆಯವರ ಮನೆಗಳಲ್ಲಿ ಪ್ರಚಾರ ಮಾಡದಂತೆ ಧಮ್ಕಿ ಹಾಕಿದ್ದು, ಮತ ಕೇಳಲು ಬಂದ ಕಾರ್ಯಕರ್ತೆಗೆ ಧಮ್ಕಿ ಹಾಕ್ತೀರಾ ಎಂದು ಶಾಸಕ ಶರತ್ ಎಂಟಿಬಿ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಮಲಶೆಟ್ಟಿಹಳ್ಳಿ ಠಾಣೆ ಎದುರು ಶರತ್, ಎಂಟಿಬಿ ಬೆಂಬಲಿಗರ ಜಮಾವಣೆಗೊಂಡಿದ್ದು, ಶರತ್, ಎಂಟಿಬಿ ಬೆಂಬಲಿಗರ ಮನವೊಲಿಕೆಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Sat, 6 May 23