ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ: ಖರ್ಗೆ ಹತ್ಯೆ ಆಡಿಯೋ ಬಗ್ಗೆ ಸಿದ್ದರಾಮಯ್ಯ ಕಿಡಿ

ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆ ಬಗೆಗಿನ ಆಡಿಯೋ ವೈರಲ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆಡಿಯೋ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ: ಖರ್ಗೆ ಹತ್ಯೆ ಆಡಿಯೋ ಬಗ್ಗೆ ಸಿದ್ದರಾಮಯ್ಯ ಕಿಡಿ
ಸಿದ್ದರಾಮಯ್ಯ
Follow us
Rakesh Nayak Manchi
|

Updated on: May 06, 2023 | 8:08 PM

ಚಿಕ್ಕಮಗಳೂರು: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹತ್ಯೆಗೆ ಸಂಚು ವಿಚಾರವಾಗಿ ಆಕ್ರೋಶ ಹೊರಹಾಕಿದ ವರುಣಾ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ. ಅವರಿಗೆ ಸಿದ್ಧಾಂತಕವಾಗಿ ಎದುರಿಸಲು ಬರಲ್ಲ ಅದಕ್ಕೆ ಈ ರೀತಿಯ ದಾರಿಯನ್ನ ತುಳಿಯುತ್ತಾರೆ ಎಂದು ಹೇಳಿದ್ದಾರೆ. ಜಿಲ್ಲೆಯ ತರೀಕೆರೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಖರ್ಗೆ ಹಾಗೂ ಕುಟುಂಬದ ಹತ್ಯೆ ಸಂಚು ಆರೋಪದ ಕುರಿತಾದ ಆಡಿಯೋ ಭಾರೀ ಸಂಚಲನ ಮೂಡಿಸುತ್ತಿದೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೋ ಬಗ್ಗೆ ಒಂದೆಡೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಗಿಬಿದ್ದರೆ, ಇತ್ತ ಬಿಜೆಪಿ, ಆಡಿಯೋ ನಕಲಿ ಎನ್ನುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿರುವ ಸಿದ್ದರಾಮಯ್ಯ; ಪ್ರಧಾನಿ ಮೋದಿ ವ್ಯಂಗ್ಯ

ಇನ್ನು, ಬಾದಾಮಿಯಿಂದ ಸಿದ್ದರಾಮಯ್ಯ ಓಡಿ ಹೋಗಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಾದಾಮಿಯಿಂದ ನಾನು ಓಡಿಹೋಗಿಲ್ಲ, ನಾನೇ ಬೇಡವೆಂದು ಸ್ಪರ್ಧಿಸಿಲ್ಲ ಎಂದರು. ಬಾದಾಮಿ ಕ್ಷೇತ್ರದ ಜನ ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು. ಐದಾರು ಬಾರಿ ನಮ್ಮ ಮನೆ ಬಳಿಗೆ ಬಂದು ಒತ್ತಾಯ ಮಾಡಿದ್ದರು. ಆದರೆ ಬಾದಾಮಿ ಕ್ಷೇತ್ರ ದೂರವಾಗುತ್ತದೆ ಎಂದು ನಾನೇ ಸ್ಪರ್ಧೆ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಜನರ ಭಾವನೆಗಳು ಏನು ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅದೇ ಕಾರಣಕ್ಕೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಾದಾಮಿಯಲ್ಲಿ ನರೇಂದ್ರ ಮೋದಿ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯರನ್ನು ಜನ ಗೆಲ್ಲಿಸಿದರು. ಆದರೆ, ಅವರು ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದ್ದರು. ಸಿದ್ದರಾಮಯ್ಯ ಅವರು ಈ ಬಾರಿ ಬಾದಾಮಿಯ ಬದಲಿಗೆ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ