ಬಿಜೆಪಿಗೆ ಗುಡ್​ ಬೈ ಹೇಳಿ ಜೆಡಿಎಸ್​ ಸೇರ್ಪಡೆಯಾದ ಎಬಿ ಮಾಲಕರೆಡ್ಡಿ

|

Updated on: Apr 15, 2023 | 3:36 PM

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಎಬಿ ಮಾಲಕರೆಡ್ಡಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಯಾದಗಿರಿ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಮಾಲಕರೆಡ್ಡಿ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಗೆ ಗುಡ್​ ಬೈ ಹೇಳಿ ಜೆಡಿಎಸ್​ ಸೇರ್ಪಡೆಯಾದ ಎಬಿ ಮಾಲಕರೆಡ್ಡಿ
ದೇವೇಗೌಡರ ಜೊತೆ ಎಬಿ ಮಾಲಕರೆಡ್ಡಿ (ಎಡಚಿತ್ರ) ಮತ್ತು ಮಾಲಕರೆಡ್ಡಿ (ಬಲ ಚಿತ್ರ)
Follow us on

ಯಾದಗಿರಿ: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಭಿನ್ನಮತ, ಅಸಮಾಧಾನ ಸ್ಫೋಟಗೊಂಡಿದ್ದು, ರಾಜೀನಾಮೆ ಪರ್ವ ಆರಂಭವಾಗಿದೆ. ಲಕ್ಷ್ಮಣ ಸವದಿ (Laxman Savadi) ಸೇರಿದಂತೆ ಕೆಲವು ಹಿರಿಯ ನಾಯಕರು ಕಾಂಗ್ರೆಸ್, ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇದೀಗ ಮತ್ತೊಂದು ವಿಕೆಟ್ ಪತನಗೊಂಡಿದೆ. ಹೌದು, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ (Dr. AB Malaka Reddy) ಅವರು ಇಂದು ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ (JDS) ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ ನಂತರ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಯಾದಗಿರಿ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಾಲಕರೆಡ್ಡಿ ಬೆಂಗಳೂರಿನಲ್ಲಿರುವ ಪಕ್ಷದ ವರಿಷ್ಠ ಹೆಚ್​ ಡಿ ದೇವೇಗೌಡ ನಿವಾಸಕ್ಕೆ ತೆರಳಿ ಅವರಿಂದ ಬಿ ಫಾರ್ಮ್ ಪಡೆದಿದ್ದಾರೆ. ಶಹಾಪುರ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆ ಜೆಡಿಎಸ್ ಸೇರಿದ್ದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಕ್ಷೇತ್ರದ ಜೆಡಿಎಸ್ ಟಿಕೆಟ್ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂದು ಮಾಲಕರೆಡ್ಡಿ ಕಮಲ ಕೈಯಿಂದ ಬಿಟ್ಟು ತೆನೆ ಹೊತ್ತಿದ್ದಾರೆ.

ಕಾಂಗ್ರೆಸ್​ನಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದೊಂದಿಗಿನ ವೈಯಕ್ತಿಕ ದ್ವೇಷ ಹಿನ್ನೆಲೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಯಾದಗಿರಿ ಜಿಲ್ಲಾ ಉಸ್ತುವರಿಯನ್ನಾಗಿ ಪ್ರಿಯಾಂಕ್ ಖಾರ್ಗೆ ಅವರನ್ನು ನೇಮಿಸಿದ ನಂತರ ಮಾಲಕರೆಡ್ಡಿ ಅವರು ಖರ್ಗೆ ಕುಟುಂಬದೊಂದಿಗೆ ದ್ವೇಷ ಆರಂಭವಾಗಿತ್ತು. ನಂತರ ಅವರು ಪಕ್ಷದಿಂದ ದೂರ ಉಳಿದಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು ಮಲ್ಲಿಕಾರ್ಜುನ ಖರ್ಗೆ ಸೋಲಿಸುವಲ್ಲಿ ಪಾತ್ರವಹಿಸಿದ ಪ್ರಮುಖರಲ್ಲಿ ಇವರೂ ಒಬ್ಬರಾಗಿದ್ದರು.

ಹೀಗೆ ಕಾಂಗ್ರೆಸ್ ಜೊತೆಗಿನ ಸುದೀರ್ಘ ಸಂಬಂಧವನ್ನು ಕಳಚಿಕೊಂಡಿದ್ದ ಮಾಲಕರೆಡ್ಡಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮರಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಖರ್ಗೆ ಕುಟುಂಬದೊಂದಿಗೆ ಇದ್ದ ಹಳೆ ದ್ವೇಷ ಮರೆತು ಕೈ ಪಡೆ ಸೇರಲು ಮುಂದಾಗಿದ್ದರು. ಈ ನಡುವೆ ಜೆಡಿಎಸ್ ಸಂಪರ್ಕಕ್ಕೆ ಬಂದ ಮಾಲಕರೆಡ್ಡಿ ಯಾದಗಿರಿ ಟಿಕೆಟ್ ಖಚಿತಪಡಿಸಿ ಇಂದು ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 15 April 23