ಬೆಂಗಳೂರು: ಬಿಜೆಪಿ ಪಕ್ಷ ತೊರೆದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರುಗಳನ್ನು ಅವರವರದೇ ಕ್ಷೇತ್ರಗಳಲ್ಲಿ ಕಟ್ಟಿಹಾಕಲು ಮತ್ತು ಅವರ ಪ್ರಭಾವವನ್ನು ಕುಗ್ಗಿಸಲು ಸಾಕ್ಷಾತ್ ರಾಜಾ ಹುಲಿಯನ್ನೆ ಅಖಾಡಕ್ಕೆ ಬಿಡಲಾಗಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಆಗಿರುವ ಅಮಿತ್ ಶಾ ಅವರೇ ಈ ಬಗ್ಗೆ ಖುದ್ದು ನಿರ್ಣಯ ತೆಗೆದುಕೊಂಡಿದ್ದಾರೆ. ಆ ಇಬ್ಬರು ನಾಯಕರು ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸುವುದಕ್ಕೆ ರಾಜಾ ಹುಲಿಯಿಂದ ಮಾತ್ರವೇ ಸಾಧ್ಯ ಎಂಬುದಕ್ಕೆ ತಕ್ಷಣಕ್ಕೆ ಕಂಡುಕೊಂಡಿರುವ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಮ್ಯಾಕ್ಸಿಮಮ್ ಬಳಸಿಕೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಕಟದ ಕ್ಷೇತ್ರಗಳತ್ತ ಹೆಚ್ಚಾಗಿ ಬಳಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಆರೋಗ್ಯ ಮತ್ತು ಉತ್ತರ ಕರ್ನಾಟಕದ ಪ್ರಖರ ಬಿಸಿಲನ್ನು ಪರಿಗಣಿಸಿ, ಬಿಜೆಪಿಯ ಹಿರಿಯ ನಾಯಕನಿಗೆ ಪ್ರವಾಸ ಆಯಾಸವನ್ನು ತಗ್ಗಿಸಲು ಹೆಲಿಕಾಪ್ಟರ್ಅನ್ನೇ ಬಳಸುವಂತೆ ಸೂಚಿಸಿಲಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಅಸೆಂಬ್ಲಿ ಮತದಾನ ಮುನ್ನಾ ದಿನಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಹೆಚ್ಚು ಪ್ರವಾಸ ಕೈಗೊಳ್ಳುವಂತೆ ಹೆಲಿಕಾಪ್ಟರ್ ಹತ್ತಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಚುನಾವಣಾ ಪ್ರಚಾರದಲ್ಲಿ ಮಾಜಿ ಸಿಎಂ ಬಿಎಸ್. ಯಡಿಯೂರಪ್ಪಅವರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಹೆಲಿಕಾಫ್ಟರ್ ವ್ಯವಸ್ಥೆ ಮಾಡಲಾಗಿದೆ. ಪಕ್ಷ ಒದಗಿಸಿರುವ ಪ್ರತ್ಯೇಕ ಹೆಲಿಕಾಫ್ಟರ್ನಲ್ಲೇ ಬಿಎಸ್ ಯಡಿಯೂರಪ್ಪನವರು ಪ್ರಚಾರಕ್ಕೆ ಇಳಿಯಲಿದ್ದಾರೆ. ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪ ಅವರಿಗಾಗಿ ಒಂದು ಹೆಲಿಕಾಫ್ಟರ್ ಮೀಸಲಿಡಲಾಗಿದೆ. ಯಡಿಯೂರಪ್ಪ ಈಗಲೇ ನಮ್ಮ ಕ್ಷೇತ್ರಕ್ಕೆ ಬರೋದು ಬೇಡ. ಮೇ 1 ರ ಮೇಲೆಯೇ ನಮ್ಮಲ್ಲಿಗೆ ಯಡಿಯೂರಪ್ಪ ಬರಬೇಕು ಎಂದು ಪಕ್ಷದ ಮುಂದೆ ಬಿಜೆಪಿ ಅಭ್ಯರ್ಥಿಗಳು ಡಿಮ್ಯಾಂಡ್ ಮಾಡಿದ್ದಾರೆ. ಈಗಲೇ ಯಡಿಯೂರಪ್ಪ ಬಂದು ಹೋದರೆ ಮತ್ತೊಮ್ಮೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಪ್ರಚಾರದ ಕೊನೆಯ ದಿನಗಳಲ್ಲಿ ಚುನಾವಣೆ ಬಿಸಿ ಇರುವಾಗಲೇ ನಮ್ಮಲ್ಲಿಗೆ ಯಡಿಯೂರಪ್ಪ ಬರಬೇಕು. ಈಗ ಬಂದು ಹೋದರೆ ಕಾಂಗ್ರೆಸ್ ನವರು ಕೌಂಟರ್ ಸ್ಟ್ರಾಟಜಿ ಮಾಡಿಬಿಡುತ್ತಾರೆ. ಅದಕ್ಕಾಗಿ ನಮ್ಮ ಕ್ಷೇತ್ರಗಳಿಗೆ ಮೇ 1 ರ ಬಳಿಕವೇ ಯಡಿಯೂರಪ್ಪ ಬರಬೇಕು. ಎಂದು ಅಭ್ಯರ್ಥಿಗಳು ಪಕ್ಷಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Assembly Polls: ಬಿಎಸ್ ಯಡಿಯೂರಪ್ಪ ಕುಟುಂಬದೊಂದಿಗೆ ಕಟ್ಟಿಕೊಂಡ ವೈಮನಸ್ಸು ವಿ ಸೋಮಣ್ಣಗೆ ಮುಳುವಾಯಿತೇ?
ಮೇ 1 ರ ಬಳಿಕವೇ ಬನ್ನಿ ಎಂದು ಬೆಳಗಾವಿ ಜಿಲ್ಲಾ ಅಭ್ಯರ್ಥಿಗಳ ಒತ್ತಾಯದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರು ಶಿಕಾರಿಪುರದಲ್ಲೇ ಉಳಿದುಕೊಂಡಿದ್ದಾರೆ. ಮೇ 1 ರ ಬಳಿಕ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗಾವಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಂದ ಪ್ರಚಾರದ ಕೊನೆಯ ವಾರದಲ್ಲಿ ಯಡಿಯೂರಪ್ಪಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ಯಡಿಯೂರಪ್ಪನವರು ಚುನಾವಣೆ ವಾರ ಇರುವಂತೆ ಫುಲ್ ಬಿಜಿಯಾಗಲಿದ್ದಾರೆ. ಚುನಾವಣೆಯ ಅಂತ್ಯದ ದಿನಗಳಲ್ಲಿ ಯಡಿಯೂರಪ್ಪಗೆ ಡಿಮ್ಯಾಂಡ್ ಹೆಚ್ಚಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:50 am, Mon, 24 April 23