ಸುರಪುರ (ಯಾದಗಿರಿ): ನಾಯಕ ಜನಾಂಗ ದೊರೆತನ ನಡೆಸಿದ ಕ್ಷೇತ್ರ ಸುರಪುರ, ಹಾಗಾಗಿ ಇಲ್ಲಿ ಏನಿದ್ದರೂ ನಾಯಕ ಸಮುದಾಯದ (Nayak Community) ನಾಯಕರದ್ದೇ ಪಾರುಪತ್ಯಯಾಗಿತ್ತು. ಕಾಂಗ್ರೆಸ್ ಪಕ್ಷದ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ನರಸಿಂಹ ನಾಯಕ್ ಅವರನ್ನು 3,672 ಮತಗಳ ಅಂತರದಿಂದ ಸೋಲಸಿದ್ದಾರೆ.
ರಾಜಾ ವೆಂಕಟಪ್ಪ ನಾಯಕ್ 1999ರಿಂದ ಇಲ್ಲಿಯವರೆಗೆ ಸ್ಪರ್ಧಿಸುತ್ತಾ ಬಂದಿದ್ದು 2023 ವಿಧಾನಸಭಾ ಚುನಾವಣೆಗಿಂತ ಮೊದಲು ಎರಡು ಬಾರಿ ಸೋತು ಎರಡು ಬಾರಿ ಗೆದ್ದಿದ್ದರು. ಎರಡೂ ಬಾರಿ ಅವರನ್ನು ಸೋಲಿಸಿದ್ದು ಬಿಜೆಪಿಯ ನರಸಿಂಹ ನಾಯಕ್. ಈ ಭಾಗದಲ್ಲಿ ರಾಜೂಗೌಡ ಎಂದೇ ಹೆಚ್ಚು ಜನಪ್ರಿಯರಾಗಿರುವ ನರಸಿಂಹ ನಾಯಕ್ 2004 ರಲ್ಲಿ ಕೆಎನ್ ಡಿಪಿ ಪಕ್ಷದಿಂದ ಸ್ಪರ್ಧಿಸಿ ವೆಂಕಟಪ್ಪ ನಾಯಕರನ್ನು ಸೋಲಿಸಿದ್ದರು. 45-ವರ್ಷದ ರಾಜೂಗೌಡ ಯುವಕರ ನಡುವೆ ಹೆಚ್ಚು ಜನಪ್ರಿಯರೆಂದರೆ ತಪ್ಪಾಗಲಿಕ್ಕಿಲ್ಲ. ಖುದ್ದು ಒಬ್ಬ ಕ್ರೀಡಾಪಟುವಾಗಿರುವ ರಾಜೂಗೌಡ ತನ್ನ ಸ್ವಗ್ರಾಮ ಕೊಡೇಕಲ್ ಮತ್ತು ಸುರಪುರದಲ್ಲಿ ಕ್ರಿಕೆಟ್ ಮತ್ತು ಕಬಡ್ಡಿ ಟೂರ್ನಮೆಂಟ್ ಗಳನ್ನು ಆಯೋಜಿಸುತ್ತಿರುತ್ತಾರೆ. ಶಾಸಕ ಮತ್ತು ಸಚಿವನಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪ್ರಚಾರದ ಹೊರತಾಗಿಯೂ ಸೋತರು.
ವೆಂಕಟಪ್ಪ ನಾಯಕ್ ಅವರಿಗೆ ವಯಸ್ಸಾಗುತ್ತಿದೆ ಮತ್ತು ಅವರು ಅದನ್ನು ಅಡ್ಮಿಟ್ ಮಾಡಿದ್ದಾರೆ. ನಾಪಪತ್ರ ಸಲ್ಲಿಸಿದ ಬಳಿಕ ಅವರು ಇದು ತಮ್ಮ ಕೊನೆಯ ಚುನಾವಣೆ ಅಂತ ಘೋಷಣೆ ಮಾಡಿದ್ದರು. ರಾಜೂಗೌಡಕ್ಕಿಂತ ಮೊದಲಿಂದ ರಾಜಕಾರಣದಲ್ಲಿದ್ದರೂ ಕಾಂಗ್ರೆಸ್ ನಾಯಕ ಅವರಷ್ಟು ಜನಪ್ರಿಯನಲ್ಲ ಅನ್ನೋದು ಸರ್ವವಿದಿತ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರವಣ್ ಕುಮಾರ್ ನಾಯಕ್ ಜನಪ್ರಿಯ ವ್ಯಕ್ತಿ ಅಲ್ಲ, ಕುಮಾರಸ್ವಾಮಿ ಅವರನ್ನು ಯಾಕೆ ಆಯ್ಕೆ ಮಾಡಿದ್ದು ಅಂತ ಅವರೇ ಹೇಳಬೇಕು. ಜೆಡಿಎಸ್ ಪಕ್ಷ ಈ ಭಾಗದಲ್ಲಿ ಬೇರೂರಲು ವಿಫಲವಾಗಿದೆ. 2013ರ ಚುನಾನವಣೆಯಲ್ಲಿ ರಾಜೂಗೌಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ 60,000 ಕ್ಕಿಂತ ಹೆಚ್ಚು ಮತ ಗಿಟ್ಟಿಸಿದ್ದರು, ಆದರೆ ಜನ ಪಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗೆ ಮಹತ್ವ ನೀಡಿದ್ದರು. ಶ್ರವಣ್ ಕುಮಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ ಇತ್ತು. 2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ 4,500 ಕ್ಕಿಂತ ಸ್ವಲ್ಪ ಹೆಚ್ಚು ಮತ ಗಳಿಸಿದ್ದರು. ಹಾಗಾಗಿ ಸುರಪುರ ಕ್ಷೇತ್ರದಲ್ಲಿ ಬಿಜೆಪಿಯ ನರಸಿಂಹ ನಾಯಕ್ ಮತ್ತು ಕಾಂಗ್ರೆಸ್ ಪಕ್ಷದ ರಾಜಾ ವೆಂಕಟಪ್ಪ ನಾಯಕ್ ನಡುವೆ ನೇರ ಸ್ಪರ್ಧೆ ಇತ್ತು.
Published On - 12:39 am, Sat, 13 May 23