Karnataka Assembly Election 2023: ಕಾಂಗ್ರೆಸ್​ಗೆ ಬರುವಂತೆ ರಾಮದಾಸ್​ಗೆ ಸಿದ್ದರಾಮಯ್ಯ ಪರೋಕ್ಷ ಆಹ್ವಾನ

| Updated By: Rakesh Nayak Manchi

Updated on: Apr 18, 2023 | 4:55 PM

ನಿನ್ನೆ (ಏ.17) ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೊನೆಯ ಪಟ್ಟಿಯಲ್ಲೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ರಾಮದಾಸ್​ ಅವರಿಗೂ ಕೂಡ ಟಿಕೆಟ್​ ವಂಚಿತರಾಗಿದ್ದು, ಹೊಸಬ ಶ್ರೀವತ್ಸ ಎಂಬವುರಿಗೆ ಬಿಜೆಪಿ ಅವಕಾಶ ನೀಡಿದೆ. ಈ ಹಿನ್ನೆಲೆ ಕಾಂಗ್ರೆಸ್​ ರಾಮದಾಸ್​ ಅವರಿಗೂ ಮಣೆ ಹಾಕುವ ಸಾಧ್ಯತೆ ಇದೆ.

ಮೈಸೂರು: ನಿನ್ನೆ (ಏ.17) ಬಿಜೆಪಿ (BJP) 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೊನೆಯ ಪಟ್ಟಿಯಲ್ಲೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ರಾಮದಾಸ್​ (Ramdas) ಅವರಿಗೂ ಕೂಡ ಟಿಕೆಟ್​ ವಂಚಿತರಾಗಿದ್ದಾರೆ. ಈ ಬಾರಿ ಬಿಜೆಪಿ ಹೊಸಬ ಶ್ರೀವತ್ಸ ಎಂಬವುರಿಗೆ ಅವಕಾಶ ನೀಡಿದೆ. ಟಿಕೆಟ್​ ಕೈ ತಪ್ಪಿದ ಹಿನ್ನಲ್ಲೇ ರಾಮದಾಸ್​ ಅವರ ಮನೆಗೆ ಸಂಸದ ಪ್ರತಾಪ್​ ಸಿಂಹ (Pratap Simha)​ ಭೇಟಿಯಾಗಲು ಹೋದರೂ ಸಹ ರಾಮದಾಸ್​ ಭೇಟಿಯಾಗಲಿಲ್ಲ. ಇನ್ನು ಬಿಜೆಪಿ ಟಿಕೆಟ್​ ವಂಚಿತರಾದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ (Jagadish Shettar) ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಬಂಡಾಯವೆದ್ದು, ಕಾಂಗ್ರೆಸ್ ಸೇರಿದ್ದಾರೆ. ಇದೀಗ ರಾಮದಾಸ್​ ಕೂಡ ತಮ್ಮ ಮುಂದಿನ ನಡೆಯನ್ನು ಇಂದು (ಏ.18) ಕಾರ್ಯಕರ್ತರೊಂದಿಗೆ ಚರ್ಚಿಸಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಮದಾಸ್​ ನಮ್ಮ ಪಕ್ಷಕ್ಕೆ ಬರುವುದಾದರೇ ಸ್ವಾಗತ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಬಿ.ಎಲ್​​.ಸಂತೋಷ್ ವಿರುದ್ಧ ಜಗದೀಶ್​ ಶೆಟ್ಟರ್ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಸತ್ಯವನ್ನೇ ಹೇಳಿದ್ದಾರೆ. ವರುಣಾದಲ್ಲಿ ಸೋಮಣ್ಣ ಸ್ಪರ್ಧೆಗೂ ಬಿ.ಎಲ್​.ಸಂತೋಷ್​ ಕಾರಣ. ಸೋಮಣ್ಣ ಬೇಡ ಅಂದ್ರೂ ಒತ್ತಡ ಹಾಕಿ ವರುಣದಲ್ಲಿ ನಿಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ಒಬ್ಬ ವ್ಯಕ್ತಿಯ ಕಪಿಮುಷ್ಟಿಯಲ್ಲಿದೆ. ಸಚಿವ ಸೋಮಣ್ಣಗೂ ವರುಣಾ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಿರಿಯ ನಾಯಕರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಆ ಸಾಲಿನಲ್ಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಸಹ ಒಬ್ಬರು. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸ್ತೇನೆ ಎಂದು ಪರೋಕ್ಷವಾಗಿ ರಾಮದಾಸ್‌ ಅವರಿಗೆ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ: ನನಗೆ ಮಾತ್ರವಲ್ಲ ರಾಮದಾಸ್​ಗೂ ಟಿಕೆಟ್​ ತಪ್ಪಿಸಿದ್ದು ಬಿಎಲ್​ ಸಂತೋಷ್​: ಸಾಲು ಸಾಲು ಆರೋಪಗಳನ್ನು ಮಾಡಿದ ಜಗದೀಶ್ ಶೆಟ್ಟರ್

ಫಲಿಸಲಿಲ್ಲ ಶಾಸಕ ರಾಮದಾಸ್‌ಗೆ ಮೋದಿ ಗುದ್ದಿನ ಭರವಸೆ

ಕಳೆದ ವರ್ಷ ನಗರದ ಮಹಾರಾಜ ಕಾಲೇಜು ಮೈದಾನದ ವೇದಿಕೆಯಲ್ಲಿ ಕೆ.ಆರ್‌ ಕ್ಷೇತ್ರದ ಶಾಸಕ ಎಸ್‌.ಎ ರಾಮದಾಸ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹತ್ತಿರಕ್ಕೆ ಕರೆದು ಅವರಿಗೆ ಪ್ರೀತಿಯ ಗುದ್ದು ನೀಡಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು. ಈ ಹಿನ್ನೆಲೆ ರಾಮದಾಸ್‌ ಅವರಿಗೆ ಟಿಕೆಟ್‌ ಖಚಿತ ಎನ್ನುವ ಮಾತು ಕೇಳಿಬುರತ್ತಿತ್ತು. ಆದರೆ ಈಗ ಟಿಕೆಟ್​ ಕೈ ತಪ್ಪಿದ್ದು ಅಚ್ಚರಿಗೆ ಕಾರಣವಾಗಿದೆ.

ರಾಮದಾಸ್‌ ಭೇಟಿಗೆ ಹೋದ ಪ್ರತಾಪ್​ ಸಿಂಹಗೆ ನಿರಾಸೆ

ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮತ್ತು ಸಂಸದ ಪ್ರತಾಪ್ ಸಿಂಹ, ರಾಮದಾಸ್‌ ಅವರ ಮನವೊಲಿಸಲು ಅವರ ನಿವಾಸಕ್ಕೆ ತೆರಳಿದ್ದರು. ಅಲ್ಲಿ ರಾಮದಾಸ್ ಅಭಿಮಾನಿಗಳು ಭೇಟಿಗೆ ಅವಕಾಶ ನೀಡದೆ ಬರಿಗೈಲಿ ವಾಪಸ್ ಕಳುಹಿಸಿದ್ದಾರೆ. ಪ್ರತಾಪ್ ಸಿಂಹ ಅವರ ಸಂಧಾನ ಯತ್ನ ವಿಫಲವಾಗಿದ್ದು, ಕೊನೆಗೆ ರಾಮದಾಸ್ ಭೇಟಿಯೂ ಸಾಧ್ಯವಾಗದೆ ಮನೆಗೆ ಹಿಂತಿರುಗಿ ಮುಖಭಂಗ ಎದುರಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Tue, 18 April 23