ವರುಣಾ ಕ್ಷೇತ್ರದಲ್ಲಿ ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ, ಕೆಲಕಾಲ ಬಿಗುವಿನ ವಾತಾವರಣ

|

Updated on: Apr 23, 2023 | 12:05 PM

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಇಂದಿನಿಂದ 5 ದಿನಗಳ ಕಾಲ ವರುಣಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರಕೈಗೊಂಡಿದ್ದಾರೆ. ಆದ್ರೆ, ಮೊದಲ ದಿನವೇ ಸ್ಥಳೀಯರ ಪ್ರತಿಭಟನೆಯಿಂದಾಗಿ ಮುಜುಗರಕ್ಕೀಡಾಗಿದ್ದಾರೆ.

ಮೈಸೂರು: ಇಂದಿನಿಂದ ಐದು ದಿನಗಳ ಕಾಲ ಮೈಸೂರಿನ ವರುಣಾ (Varuna) ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ, ಸಚಿವ ವಿ ಸೋಮಣ್ಣಗೆ(V Somanna) ಮೊದಲ ದಿನವೇ ಪ್ರತಿಭಟನೆಯ ಬಿಸಿ ತಟ್ಟಿದೆ. ಹೌದು..ವಿ.ಸೋಮಣ್ಣ ಅವರು ಇಂದಿನಿಂದ 5 ದಿನಗಳ ಕಾಲ ವರುಣಾ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆದ್ರೆ, ಇಂದು(ಏಪ್ರಿಲ್ 23) ಪ್ರಚಾರಕ್ಕೆ ಬಂದ ವಿ.ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಘಟನೆ ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡೆದಿದೆ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ದಾರೆ. ಬಳಿಕ ಸೋಮಣ್ಣ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಮತ್ತೊಂದು ಯುವಕರ ಗುಂಪು ಸೋಮಣ್ಣ, ಬಿಜೆಪಿ ಪರ ಘೋಷಣೆ ಕೂಗಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಸೋಮಣ್ಣ ಭುಗತಗಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವುದನ್ನು ಬಿಟ್ಟು ಅಲ್ಲಿಂದ ಬೇರೆ ಗ್ರಾಮಕ್ಕೆ ತೆರಳಿದರು.

ಇದನ್ನೂ ಓದಿ: Prathap Simha : ಸೋಮಣ್ಣ ಪರ ಮತಯಾಚನೆಗೆ ಹೋಗಿದ್ದ ಪ್ರತಾಪ್​ಸಿಂಹಗೆ ಸ್ಥಳೀಯರಿಂದ ತರಾಟೆ

ವರುಣಾ ವಿಧಾನಸಭೆ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಕೊನೇ ಚುನಾವಣೆ ಎಂದು ತವರು ಕ್ಷೇತ್ರಕ್ಕೆ ಮರಳಿ ಬಂದಿರುವ ಸಿದ್ದರಾಮಯ್ಯ ಹಣಿಯೋಕೆ ಬಿಜೆಪಿ ಭರ್ಜರಿ ಗೇಮ್ ಪ್ಲ್ಯಾನ್​ಗಳನ್ನೇ ರೂಪಿಸುತ್ತಿದೆ. ಇದೇ ಕಾರಣಕ್ಕೆ ಗೆಲುವು ಸಲೀಸು ಎಂದುಕೊಂಡಿದ್ದ ಸಿದ್ದರಾಮಯ್ಯ ಈಗ ಅಲರ್ಟ್ ಆಗಿದ್ದಾರೆ. ವರುಣಾದಲ್ಲಿ ಪ್ರಚಾರವನ್ನೇ ಮಾಡಲ್ಲ ಬರೀ ನಾಮಿನೇಷನ್ ಅಷ್ಟೇ ಎಂದಿದ್ದ ಸಿದ್ದರಾಮಯ್ಯ ನಿನ್ನೆ (ಏಪ್ರಿಲ್ 22) ಮತಬೇಟೆ ನಡೆಸಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಸಚಿವ ವಿ ಸೋಮಣ್ಣ ಸಹ ಇಂದು ವರುಣಾ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದಿದ್ದು, ಮೊದಲ ದಿನವೇ ಪ್ರತಿಭಟನೆ ಬಿಸಿ ತಟ್ಟಿದೆ.

ಈ ಹಿಂದೆ ಏಪ್ರಿಲ್ 18ರಂದು ಸಹ ಸೋಮಣ್ಣ ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಪ್ರಚಾರಕ್ಕೆ ಬಂದಿದ್ದ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳಲು ಬಂದಿದ್ದೀರಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದರು. ಇದರಿಂದ ಸೋಮಣ್ಣ ಮುಜುಗರ ಅನುಭವಿಸಿದ್ದರು. ಇದಾದ ಬಳಿಕ ಮೊನ್ನೇ ಅಷ್ಟೇ ಸೋಮಣ್ಣ ಪರ ಪ್ರಚಾರಕ್ಕಿಳಿದಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೂ ಯುವಕನೋರ್ವ ತರಾಟೆಗೆ ತೆಗೆದುಕೊಂಡಿದ್ದ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲಿಸುತ್ತೇವೆ ಅಂತೀರಾ? ಬಿಜೆಪಿಯ ಅಕ್ಕಿ, ಚೀಲ ಮಾತ್ರ ಸಿದ್ದರಾಮಯ್ಯರದ್ದು ಹೇಳುತ್ತೀರಿ ರಾಜ್ಯದಲ್ಲಿ ಈಗ ಯಾಕೆ ಪಡಿತರ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ಮೈಸೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗು ಏನು ಅಂತೀರಿ? ಸಿದ್ದರಾಮಯ್ಯ ಹತ್ತಿರ ಕುಳಿತುಕೊಳ್ಳಿ ಕೊಡುಗೆ ಗೊತ್ತಾಗುತ್ತದೆ. ರಸ್ತೆಗಳ ರಾಜ ಅಂಥ ಮಹದೇವಪ್ಪಗೆ ಬಿರುದು ಕೊಡುತ್ತೀರಾ, ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ ಎಂದು ಪ್ರತಾಪ್​ ಸಿಂಹಗೆ ಸ್ಥಳೀಯ ನಿವಾಸಿಗಳು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.  ಬಳಿಕ ಪ್ರತಾಪ್ ಸಿಂಹ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:51 am, Sun, 23 April 23