ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಸಮಸ್ಯೆಗೆ ಕೊನೆಗೂ ಪರಿಹಾರ ಕಂಡುಕೊಂಡಿರುವ ಕಾಂಗ್ರೆಸ್, ರಾಜಸ್ಥಾನ ಮಾದರಿಯನ್ನು ಅಳವಡಿಸಿಕೊಂಡಿದೆ. ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಪಕ್ಷ ಅನುಭವಕ್ಕೆ ಆದ್ಯತೆ ನೀಡಿರುವುದರಿಂದ ರಾಜ್ಯದಲ್ಲಿ ಸಿದ್ದರಾಮಯ್ಯನವರೇ (Siddaramaiah) ಸಿಎಂ ಆಗಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಈ ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಸುರೇಶ್ ಕುಮಾರ್ ಅಸಮಾಧಾನ (Karnataka Politics) ವ್ಯಕ್ತಪಡಿಸಿದ್ದು, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಅಷ್ಟೊಂದು ಸಮಂಜಸವಲ್ಲ. ಈ ತೀರ್ಮಾನದಿಂದ ಪೂರ್ಣ ಸಂತುಷ್ಟನಾಗಿಲ್ಲ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ 2018 ರ ಚುನಾವಣಾ ಫಲಿತಾಂಶದ ನಂತರ ನಡೆದ ವಿದ್ಯಮಾನಗಳೇ ಕರ್ನಾಟಕದಲ್ಲಿ ಪುನರಾವರ್ತನೆಯಾಗಿರುವುದು ನಿಜ. ಐದು ವರ್ಷಗಳ ನಂತರವೂ ರಾಜಸ್ಥಾನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಹಿಡಿಯಲು ಕಾಂಗ್ರೆಸ್ ವಿಫಲವಾಗಿದೆ ಎಂಬುದು ಗಮನಾರ್ಹ. ಇದೇ ರೀತಿಯ ಸಂಕಷ್ಟ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿಯೂ ಎದುರಾಗಬಹುದೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
2018 ರಲ್ಲಿ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿತು. ಗೆಲುವನ್ನೂ ಸಾಧಿಸಿತು. ಆದರೆ ಅನುಭವಕ್ಕೆ ಪ್ರಾಮುಖ್ಯತೆ ನೀಡಿ, ಪಕ್ಷವು ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಮತ್ತು ಸಚಿನ್ ಪೈಲಟ್ ಅವರನ್ನು ಡಿಸಿಎಂ ಆಗಿ ಮಾಡಿತು. ಸಚಿನ್ ಪೈಲಟ್ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ಷರತ್ತಿನೊಂದಿಗೆ ಇಬ್ಬರ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿತ್ತು. ಆದರೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ರಾಜಕೀಯ ಕಂದಕ ಮುಂದುವರೆಯಿತು ಮತ್ತು 2020 ರಲ್ಲಿ ಸುಮಾರು ಎರಡು ಡಜನ್ ಶಾಸಕರೊಂದಿಗೆ ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು. ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಹುದ್ದೆಯಿಂದ ತೆಗೆದುಹಾಕಲು ಸಚಿನ್ ಪೈಲಟ್ ಬಯಸಿದ್ದರು, ಆದರೆ ಸಚಿನ್ ಪೈಲಟ್ ಅವರ ಬಂಡಾಯ ಯಶಸ್ವಿಯಾಗಲಿಲ್ಲ.
ಆಗ ಬಂಡಾಯ ಹತ್ತಿಕ್ಕುವಲ್ಲಿ ಕಾಂಗ್ರೆಸ್‌ನ ಹೈಕಮಾಂಡ್ ಯಶಸ್ವಿಯಾಗಿತ್ತು. ಆದರೆ ಸಚಿನ್ ಪೈಲಟ್ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಕಳೆದ ಮೂರು ವರ್ಷಗಳಲ್ಲಿ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಸಚಿನ್ ಪೈಲಟ್ ಅವರ ಬಂಡಾಯವನ್ನು ಎದುರಿಸುತ್ತಿದೆ ಮತ್ತು ಕಾಂಗ್ರೆಸ್‌ನ ಹೈಕಮಾಂಡ್ ಈ ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾಗಿದೆ. ಕಾಂಗ್ರೆಸ್‌ನ ಹೈಕಮಾಂಡ್ 2022 ರ ಸೆಪ್ಟೆಂಬರ್ನಲ್ಲಿ ರಾಜಸ್ಥಾನದಲ್ಲಿ ನಾಯಕತ್ವವನ್ನು ಬದಲಾಯಿಸಲು ಬಯಸಿತು. ಆದರೆ ಅಶೋಕ್ ಗೆಹ್ಲೋಟ್ ಅವರ ಮುಂದೆ ಪಕ್ಷದ ಹೈಕಮಾಂಡ್‌ನ ನಡೆಯು ವಿಫಲವಾಯಿತು.
ಇತ್ತೀಚಿನ ದಿನಗಳಲ್ಲಿ ಅಶೋಕ್ ಗೆಹ್ಲೋಟ್ ಅವರನ್ನು ಕೆಳಗಿಳಿಸುವುದು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥಮಾಡಿಕೊಂಡಿದೆ. ಹಾಗಾಗಿಯೇ ಸಚಿನ್ ಪೈಲಟ್ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಪಕ್ಷ ವಿಫಲವಾಗಿದೆ. ರಾಜಸ್ಥಾನದಲ್ಲಿ ತನ್ನ ಹಕ್ಕುಗಳಿಗಾಗಿ ಹೋರಾಡಲು ಸಚಿನ್ ಪೈಲಟ್ ಇತ್ತೀಚೆಗೆ ಹ್ಲೋಟ್ ಸರ್ಕಾರದ ವಿರುದ್ಧ ಪಾದಯಾತ್ರೆ ಕೈಗೊಂಡಿದ್ದರು. ಈ ಮೂಲಕ ಸಚಿನ್ ಪೈಲಟ್, ಬಿಜೆಪಿಯ ವಸುಂಧರಾ ರಾಜೆ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳದ ಅಶೋಕ್ ಗೆಹ್ಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕದಲ್ಲಿ ಸಿಎಂ ಕುರ್ಚಿ ವಿಚಾರದಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಉಂಟಾಗಿತ್ತು. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದ್ದರೆ, ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಘೋಷಿಸುವ ಮೂಲಕ ಮತ್ತೊಮ್ಮೆ ಅನುಭವಕ್ಕೆ ಆದ್ಯತೆ ನೀಡುವ ಮೂಲಕ ಪಕ್ಷದಲ್ಲಿ ಎರಡು ಬಣಗಳು ಸೃಷ್ಟಿಯಾದಂತಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ 62 ವರ್ಷ ಆಗಿದ್ದರೆ, ಸಿದ್ದರಾಮಯ್ಯ ಅವರಿಗೆ 75 ವರ್ಷ ವಯಸ್ಸು. ಹೀಗಿರುವಾಗ ಇಬ್ಬರ ನಡುವಿನ ವೈಷಮ್ಯ ದೂರ ಮಾಡುವುದು ಪಕ್ಷಕ್ಕೆ ಸುಲಭದ ಮಾತಲ್ಲ ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ಕಂಡುಬರುತ್ತಿದೆ.
2013ರಲ್ಲಿ ಸಿದ್ದರಾಮಯ್ಯನವರಿಗೆ ಸಿಎಂ ಅಧಿಕಾರ ಹಸ್ತಾಂತರವಾದಾಗ ಡಿಕೆ ಶಿವಕುಮಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಿದ್ದರಾಮಯ್ಯ ನಿರಾಕರಿಸಿದ್ದರು. ನಂತರ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಕೆಲ ತಿಂಗಳ ನಂತರ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಬಾರಿಯ ಚುನಾವಣಾ ಫಲಿತಾಂಶದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿಗಾಗಿ ಸಂಘರ್ಷ ತಲೆದೋರಿತ್ತು. ಈ ಮಧ್ಯೆ, ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕುಮಾರ್ ಪಕ್ಷದ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ, ರಾಜಸ್ಥಾನದ ನಂತರ ಮಧ್ಯಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಬಹುತೇಕ ಗೆದ್ದಿತ್ತು. ಕೇವಲ ಎರಡು ಸ್ಥಾನಗಳ ಅಂತರದಿಂದ ಬಹುಮತದಿಂದ ವಂಚಿತವಾಗಿದ್ದ ಕಾಂಗ್ರೆಸ್, ಅಧಿಕಾರದ ಚುಕ್ಕಾಣಿಯನ್ನು ಕಮಲನಾಥ್‌ಗೆ ಹಸ್ತಾಂತರಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಸಿಎಂ ಹುದ್ದೆಗೆ ಸ್ಪರ್ಧಿಯಾಗಿದ್ದರು. ಸರ್ಕಾರವನ್ನು ರಚಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು, ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬಂಡಾಯವು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತುಹಾಕಿತು. ಕೆಲವು ಶಾಸಕರ ರಾಜೀನಾಮೆ ನಂತರ, ಕಮಲನಾಥ್ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಹಾಯದಿಂದ ಸರ್ಕಾರವನ್ನು ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಮಧ್ಯಪ್ರದೇಶದಲ್ಲಿಯೂ ಅನುಭವಕ್ಕೆ ಪ್ರಾಮುಖ್ಯತೆ ನೀಡಿದ್ದ ಕಾಂಗ್ರೆಸ್ ಕಮಲನಾಥ್ ಅವರನ್ನು ಸಿಎಂ ಮಾಡಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯದ ನಂತರ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಲಾಯಿತು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಡಿಸಿಎಂ ಪಟ್ಟ; ಬೇಸರವಿದೆ, ಸಾಗಬೇಕಾದ ಹಾದಿ ಬಹಳಷ್ಟಿದೆ ಎಂದ ಡಿಕೆ ಸುರೇಶ್
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಆಂತರಿಕ ಕಲಹವನ್ನು ಹೋಗಲಾಡಿಸುವುದು ಕಾಂಗ್ರೆಸ್‌ಗೆ ಗಂಭೀರ ಸವಾಲಾಗಿದೆ ಮತ್ತು ಬಿಜೆಪಿ ಖಂಡಿತವಾಗಿಯೂ ಅದರ ಲಾಭವನ್ನು ಪಡೆಯಲು ಬಯಸುತ್ತದೆ. ಈ ಎಲ್ಲ ಕಾರಣಗಳಿಂದ ಕರ್ನಾಟಕದಲ್ಲಿ ಕೂಡ ಸರ್ಕಾರ ರಚಿಸಿದ ನಂತರವೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಒಗ್ಗೂಡಿಸುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಕಳೆದ ಮೂರು ಲೋಕಸಭಾ ಚುನಾವಣೆಗಳಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಪರವಾದ ಫಲಿತಾಂಶ ತರುವುದು ಅಷ್ಟು ಸುಲಭವಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಒಗ್ಗಟ್ಟಾಗಿತ್ತು, ಆದರೆ ಲೋಕಸಭೆ ಚುನಾವಣೆ ವೇಳೆಗೆ ಬಣ ರಾಜಕೀಯದ ಸಮಸ್ಯೆ ಎದುರಾಗುವ ಎಲ್ಲ ಸಾಧ್ಯತೆಗಳಿವೆ. ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷ 20 ರಿಂದ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ವಹಿಸಿರುವುದರಿಂದ ಲಿಂಗಾಯತ ಮತ್ತು ಒಕ್ಕಲಿಂಗ ಸಮುದಾಯವನ್ನು ಸೆಳೆಯುವುದ ಕಷ್ಟ ಎಂದೂ ಹೇಳಲಾಗುತ್ತಿದೆ. ಈ ಅನುಭವ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಗಿತ್ತು. ಹೀಗಾಗಿ ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಕಂಡಿದ್ದ ವಿಧಾನಸಭೆ ಚುನಾವಣೆಯ ಸಾಧನೆಯನ್ನು ಲೋಕಸಭೆ ಚುನಾವಣೆಯಲ್ಲೂ ಪುನರಾವರ್ತಿಸುವುದು ಪಕ್ಷದ ನಿಜವಾದ ಸವಾಲು ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ