
Tiptur Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ತುಮಕೂರ ಜಿಲ್ಲೆಯ ತಿಪಟೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿಸಿ ನಾಗೇಶ್, ಕಾಂಗ್ರೆಸ್ನಿಂದ ಕೆ ಷಡಕ್ಷರಿ ಹಾಗೂ ಜೆಡಿಎಸ್ನಿಂದ ಶಾಂತಕಮಾರ್ ಕಣದಲ್ಲಿದ್ದಾರೆ. ಕಳೆದ 15 ಚುನಾವಣೆಗಳಲ್ಲಿ ಲಿಂಗಾಯತ ಮತ್ತು ಬ್ರಾಹ್ಮಣ ಅಭ್ಯರ್ಥಿಗಳೇ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾತ್ರಲ್ಲದೆ, ಸತತ ಎರಡನೇ ಬಾರಿ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಉದಾಹರಣೆ 1957 ಮತ್ತು 1962 ಚುನಾವಣೆಯಲ್ಲಿ ಮಾತ್ರ.
ಪಿಎಸ್ಪಿ ಪಕ್ಷದಿಂದ ಕೆಪಿ ರೇವಣಸಿದ್ದಪ್ಪ ಅವರು ಸತತ ಎರಡು ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ನಂತರದ ಎಲ್ಲಾ ಚುನಾವಣೆಗಳಲ್ಲೂ ಹಾವು ಏಣಿ ಆಟ ಕಂಡಿದೆ. 1999 ರ ಚುನಾವಣೆಯಲ್ಲಿ ಕಾಂಗ್ರೆಸ್ನ ಷಡಕ್ಷರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಬಿ ನಂಜಾಮರಿ ಸೋತಿದ್ದರು. 2004ರ ಚುನಾವಣೆಯಲ್ಲಿ ಜೆಡಿಎಸ್ ಸೇರಿದ ನಂಜಾಮರಿ ಶಾಸಕರಾದರೆ ಕಾಂಗ್ರೆಸ್ನ ಷಡಕ್ಷರಿ ಸೋತಿದ್ದರು.
2008ರ ಚುನಾವಣೆಯಲ್ಲಿ ಬಿಜೆಪಿಯ ಬಿಸಿ ನಾಗೇಶ್ ಅವರು ಶಾಸಕರಾಗಿ ಆಯ್ಕೆಯಾದರೆ ಇವರ ವಿರುದ್ಧ ಕಾಂಗ್ರೆಸ್ನ ಷಡಕ್ಷರಿ ಸೋಲು ಅನುಭವಿಸಿದ್ದರು. 2013ರ ಚುನಾವಣೆಯಲ್ಲಿ ಷಡಕ್ಷರಿ ಗೆಲುವು ಸಾಧಿಸಿದರೆ ಬಿಸಿ ನಾಗೇಶ್ ಸೋಲು ಅನುಭವಿಸಿದ್ದರು. 2018ರ ಚುನಾವಣೆಯಲ್ಲಿ ಬಿಸಿ ನಾಗೇಶ್ ಅವರು ಷಡಕ್ಷರಿ ವಿರುದ್ಧ 25563 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲೂ ಇವರ ನಡುವೆ ಜಿದ್ದಾಜಿದ್ದಿ ನಡೆಯಲಿದೆ.