ನವದೆಹಲಿ/ಬೆಂಗಳೂರು: ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಮತದಾನ ನಡೆಯಲಿದೆ. ಮೇ 10ರಂದು ಮತದಾನ ನೆರಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣೆ ಆಯೋಗವು ಇದೇ ಮೊದಲ ಬಾರಿಗೆ ಕೆಲವರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಹಾಸಿಗೆ ಬಿಟ್ಟು ಏಳಲಾಗದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಈ ಬಗ್ಗೆ ಇಂದು (ಮಾರ್ಚ್ 29) ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಮೂಲಕ ಈ ಬಾರಿ ರಾಜ್ಯದಲ್ಲಿ ಅತಿ ಹಿರಿಯ ಮತದಾರರಿಗೆ ಅನುಕೂಲವಾಗುವಂತೆ ಹೊಸ ಪ್ರಯೋಗ ಮಾಡುತ್ತಿದೆ. ಇದೇ ಮೊದಲ ಬಾರಿಗೆ ನಾವು ಕರ್ನಾಟಕದಲ್ಲಿ 80 ವರ್ಷಕ್ಕೂ ಮೇಲ್ಪಟ್ಟ ಮತ್ತು ಅಂಗವಿಕಲರು (ಪಿಡಬ್ಲ್ಯೂಡಿ) ಮತದಾರರು ಮನೆಗಳಿಂದಲೂ ಮತದಾನ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 5.21 ಕೋಟಿ ಮತದಾರರು ಇದ್ದು, ಇದರಲ್ಲಿ 80 ವರ್ಷ ಮೇಲ್ಪಟ್ಟವರು ಮತದಾರರು 12,15,763 ಇದ್ದು, 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. ಇನ್ನು ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ. ಇವರೆಲ್ಲರಿಗೂ ಮನೆಯಿಂದ ಮತದಾನ ಮಾಡುವ ಅವಕಾಶ ನೀಡಲಾಗಿದೆ.
ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಇದೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇನ್ನ ನಾಮಪತ್ರ ಸಲ್ಲಿಕೆ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆ ದಿನವಾಗಿದೆ.
Published On - 12:14 pm, Wed, 29 March 23