YSV Datta: ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ; ಕಡೂರು ಟಿಕೆಟ್ ಫಿಕ್ಸ್​

|

Updated on: Apr 13, 2023 | 6:00 PM

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ (YSV Datta) ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕ ಹೆಚ್​ಡಿ ರೇವಣ್ಣ ಗುರುವಾರ ಸಂಜೆ ಘೋಷಣೆ ಮಾಡಿದರು. ಕಡೂರು ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿಯಾಗಿ ದತ್ತಾ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ನಾಮಪತ್ರ ಸಲ್ಲಿಸುವ ದಿನ ದೇವೇಗೌಡರು ಆಗಮಿಸಲಿದ್ದಾರೆ. ಈ ಬಗ್ಗೆ ದೇವೇಗೌಡರೇ ಹೇಳಿದ್ದಾರೆ. ಅವರ ಮಾತಿಗೆ ಎಲ್ಲರೂ ಬೆಲೆ ಕೊಡಬೇಕು ಎಂದು ರೇವಣ್ಣ ಹೇಳಿದ್ದಾರೆ.

ದತ್ತಾ ನಿವಾಸಕ್ಕೆ ತೆರಳಿದ್ದ ಪ್ರಜ್ವಲ್ ರೇವಣ್ಣ

ಈ ಬೆಳವಣಿಗೆಗೂ ಮುನ್ನ ಪ್ರಜ್ವಲ್ ರೇವಣ್ಣ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ನಿವಾಸಕ್ಕೆ ಭೇಟಿ ನೀಡಿದ್ದರು. ದತ್ತಾ ಜತೆ ಮಾತುಕತೆ ನಡೆಸಿದ ಬಳಿಕ ಹೇಳಿಕೆ ನೀಡಿದ್ದ ಅವರು, ದತ್ತಾರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ದೇವೇಗೌಡರು ಹೇಳಿದ್ದಾರೆ. ದತ್ತಾರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದ್ದೆವು. ಅವರಿಗೆ ಕಾಂಗ್ರೆಸ್​​ ಟಿಕೆಟ್ ನೀಡುವುದಿಲ್ಲ ಎಂಬುದೂ ಗೊತ್ತಿತ್ತು. ಯಾವಾಗಲೂ ನಾನು ದತ್ತಾ ಅಣ್ಣ ಜೊತೆ ಇರುತ್ತೇನೆ ಎಂದು ಹೇಳಿದ್ದರು.

ದೇವೇಗೌಡರ ಮಾತಿಗೆ ಬೆಲೆ ಕೊಡುತ್ತೇನೆ; ದತ್ತಾ

ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ನನಗೆ ಹೇಳಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡುತ್ತೇನೆ ಎಂದು ದತ್ತಾ ಹೇಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದೇನೆ. ಎಲ್ಲರ ಸಮ್ಮತಿಯೊಂದಿಗೆ ಜೆಡಿಎಸ್​ ಸೇರಿದ್ದು, 18ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ದತ್ತಾ ಹೇಳಿದ್ದಾರೆ.

ಈ ಹಿಂದೆ ಜೆಡಿಎಸ್ ನಾಯಕರ ನಡೆಗೆ ನೊಂದು ದತ್ತಾ ಕಾಂಗ್ರೆಸ್ ಸೇರಿದ್ದರು. ಬಳಿಕ ಅವರು ಕಡೂರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.

ಇದನ್ನೂ ಓದಿ: ಬೆಂಬಲಿಗರ ಅಭಿಮಾನಕ್ಕೆ ಭಾಷಣದ ಮಧ್ಯೆ ಭಾವುಕರಾದ YSV ದತ್ತಾ: ವಿಡಿಯೋ ನೋಡಿ

ಪಕ್ಷಕ್ಕೆ ಸೇರಿದವರಿಗೆಲ್ಲ ಟಿಕೆಟ್ ನೀಡುತ್ತೇವೆ ಎಂದು ಹೇಳಿರಲಿಲ್ಲ, ನೀಡಲಾಗುವುದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸರಗೊಂಡಿದ್ದ ದತ್ತಾ, ಬೆಂಬಲಿಗರ ಜತೆ ಸಭೆ ನಡೆಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ನಂತರ ಹೆಚ್​ಡಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ನಂತರ ಈ ಬೆಳವಣಿಗೆ ನಡೆದಿದೆ.

ಧನಂಜಯ್​ಗೆ ಕೊಕ್

ಕಡೂರು ಕ್ಷೇತ್ರದ ಜೆಡಿಎಸ್​ ಟಿಕೆಟ್ ಈಗಾಗಲೇ ಧನಂಜಯ್ ಅವರಿಗೆ ಘೋಷಣೆಯಾಗಿತ್ತು. ಆದರೆ ಇದೀಗ ದತ್ತಾ ಮತ್ತೆ ಜೆಡಿಎಸ್ ಸೇರಿರುವುದರಿಂದ, ಅವರೇ ಅಭ್ಯರ್ಥಿ ಎಂದು ರೇವಣ್ಣ ಘೋಷಣೆ ಮಾಡಿರುವುದಿರಿಂದ ಧನಂಜಯ್ ಕಣದಿಂದ ಹಿಂದೆ ಸರಿಯಬೇಕಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Thu, 13 April 23