ತಪ್ಪಿದ ಕೈ ಟಿಕೆಟ್; ನಾಳೆ ವೈಎಸ್​ವಿ ದತ್ತಾ ಜೆಡಿಎಸ್ ಸೇರ್ಪಡೆ ಬಹುತೇಕ ಖಚಿತ

|

Updated on: Apr 12, 2023 | 11:01 PM

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್​ವಿ ದತ್ತಾ ಅವರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆ ಮತ್ತೆ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ದೇವೇಗೌಡರ ನಿವಾಸಕ್ಕೆ ಆಗಮಿಸಿ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ.

ತಪ್ಪಿದ ಕೈ ಟಿಕೆಟ್; ನಾಳೆ ವೈಎಸ್​ವಿ ದತ್ತಾ ಜೆಡಿಎಸ್ ಸೇರ್ಪಡೆ ಬಹುತೇಕ ಖಚಿತ
ವೈಎಸ್​ವಿ ದತ್ತಾ ಮತ್ತು ಹೆಚ್​ ಡಿ ದೇವೇಗೌಡ
Follow us on

ಬೆಂಗಳೂರು: ಜೀವನದುದ್ದಕ್ಕೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಅವರ ಕಟ್ಟಾ ಅನುಯಾಯಿಯಾಗಿದ್ದ ವೈಎಸ್​ವಿ ದತ್ತಾ (YSV Datta) ಅವರು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮತ್ತೆ ದೇವೇಗೌಡರ ಮನೆ ಬಾಗಿಲು ತಟ್ಟಿದ್ದಾರೆ. ಬೆಂಗಳೂರು ನಗರದ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ದತ್ತಾ ಅವರು ಟಿಕೆಟ್ (JDS Ticket)​ ನೀಡುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್​ ಟಿಕೆಟ್​ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ವೈಎಸ್​ವಿ ದತ್ತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಈ ನಡುವೆ ಕೊನೆಯದಾಗಿ ಪ್ರಯತ್ನ ಎಂಬಂತೆ ದಳಪತಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿ ಪಶ್ಚಾತ್ತಾಪಪಟ್ಟಿದ್ದ ಅವರು ನಾಳೆ ಜೆಡಿಎಸ್​ಗೆ ಮರಳುವುದು ಬಹುತೇಕ ಖಚಿತವಾಗಿದೆ. ದತ್ತಾ ಅವರ ನಿವಾಸದಲ್ಲಿ ನಾಳೆ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಕಾರ್ಯಕರ್ತರ ನಿರ್ಧಾರ ಪಡೆದು ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಸಭೆ ಬಳಿಕ ದತ್ತಾ ನಿವಾಸಕ್ಕೆ ಹೆಚ್ ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ಭೇಟಿ ನೀಡಲಿದ್ದಾರೆ.

ದೇವೇಗೌಡರ ಮಾನಸ ಪುತ್ರ ಎಂದೇ ಹೆಸರಾಗಿದ್ದ ವೈಎಸ್​ವಿ ದತ್ತಾ ಮತ್ತು ಹೆಚ್​ಡಿ ಕುಮಾರಸ್ವಾಮಿ ನಡುವೆ ಟಿಕೆಟ್ ವಿಚಾರದಲ್ಲಿ ವೈಮನಸ್ಸು ಉಂಟಾಗಿದೆ. ಪರಿಣಾಮ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. “ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದು ತಂದೆ ಮಕ್ಕಳ ಸಂಬಂಧ ಆಗಿದೆ. ನಾನು ಎಲ್ಲೇ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ. ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವಾಗಿದೆ. ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಇದನ್ನ ಅವರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ, ದೇವೇಗೌಡರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಆಗಿದೆ” ಎಂದು ಹೇಳುತ್ತಾ ಭಾವುಕರಾಗಿದ್ದರು.

ಇದನ್ನೂ ಓದಿ: ಹಾಸನ ಕ್ಷೇತ್ರದ ಟಿಕೆಟ್ ವಿಚಾರ ನನಗೆ ದೇವೇಗೌಡರಿಗೆ ಮಾತ್ರ ಗೊತ್ತು: ಕುಮಾರಸ್ವಾಮಿಗೆ ಹೆಚ್​ಡಿ ರೇವಣ್ಣ ಟಾಂಗ್

ಈ ಎಲ್ಲಾ ಬೆಳವಣಿಗೆಗಳ ನಡುವೆ ಎರಡು ಹಂತದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ. ಇತ್ತ ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ದತ್ತಾಗೆ ಎರಡೂ ಹಂತದ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ದತ್ತಾ, ಕಾಂಗ್ರೆಸ್ ತೊರೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ಬೆಂಬಲಿಗರ ಮುಂದೆ ಬಹಿರಂಗವಾಗಿಯೇ ಮಾತನಾಡಿದ್ದ ಅವರು, ಕಾಂಗ್ರೆಸ್​ ಸೇರ್ಪಡೆಯಾಗಿದ್ದು ತಪ್ಪಾಗಿದೆ ಎಂದು ಹೇಳಿಕೆ ನೀಡಿದ್ದರು.

ಈ ಹಿಂದೆ ಕಾಂಗ್ರೆಸ್​​ ಪಕ್ಷ ಸೇರ್ಪಡೆಯಾಗುವಂತೆ ಅಭಿಮಾನಿಗಳೇ ಹೇಳಿದ್ದರು. ಹೀಗಾಗಿ ನಾನು ಕಾಂಗ್ರೆಸ್​ ಸೇರ್ಪಡೆಯಾಗಿದ್ದೆ. ಇದೀಗ ಅಭಿಮಾನಿಗಳು ಪಕ್ಷೇತರರಾಗಿ ನಿಲ್ಲುವಂತೆ ಹೇಳಿದ್ದಾರೆ. ಮುಂದಿನ ತೀರ್ಮಾನ ಎಲ್ಲವೂ ನನ್ನ ಅಭಿಮಾನಿಗಳು ಕೈಗೊಳ್ಳುತ್ತಾರೆ ಅಂತಾ ದತ್ತಾ ಹೇಳಿದ್ದರು. ಈ ನಡುವೆ ಅವರು ಜೆಡಿಎಸ್ ಟಿಕೆಟ್​ಗಾಗಿ ಕೊನೇಯ ಪ್ರಯತ್ನ ಎಂಬಂತೆ ದೇವೇಗೌಡರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ಜೆಡಿಎಸ್ ಎರಡನೇ ಹಂತದ ಪಟ್ಟಿಯಲ್ಲಿ ಇವರ ಹೆಸರು ಇರಲಿದೆಯೇ ಎಂಬುದು ಕಾದುನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Wed, 12 April 23