Karnataka Polls: ಯಡಿಯೂರಪ್ಪ ಸೂಚನೆಯಂತೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ?: ಬಿವೈ ವಿಜಯೇಂದ್ರ ಏನು ಹೇಳಿದ್ರು? ಇಲ್ಲಿದೆ ನೋಡಿ

|

Updated on: Apr 03, 2023 | 7:39 PM

ವರುಣ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ಸ್ಪರ್ಧಿಸಬೇಕೆಂದು ಒತ್ತಡ ಇದೆ. ಆದರೆ ವರುಣ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಈ ಹಿಂದೆ ಯಡಿಯೂರಪ್ಪ ಅವರು ಹೇಳಿದ್ದರು. ಇದೀಗ ವಿಜಯೇಂದ್ರ ಕೂಡ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Karnataka Polls: ಯಡಿಯೂರಪ್ಪ ಸೂಚನೆಯಂತೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ?: ಬಿವೈ ವಿಜಯೇಂದ್ರ ಏನು ಹೇಳಿದ್ರು? ಇಲ್ಲಿದೆ ನೋಡಿ
ಬಿವೈ ವಿಜಯೇಂದ್ರ ಮತ್ತು ಸಿದ್ದರಾಮಯ್ಯ
Follow us on

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನು ಬಿಡುಗಡೆಯಾಗಬೇಕಿದೆ. ಮೈಸೂರಿನ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸೋದು ಪಕ್ಕಾ ಆಗಿದೆ. ಆದರೆ ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಬಿವೈ ವಿಜಯೇಂದ್ರ (BY Vijayendra) ಸ್ಪರ್ಧಿಸುವ ಬಗ್ಗೆ ಇದ್ದ ಗೊಂದಲಕ್ಕೆ ಬಹುತೇಕ ತೆರೆಬಿದ್ದಿದೆ. ವರುಣಾ ಕ್ಷೇತ್ರದಿಂದ ಸ್ಪರ್ಧೆ ಬೇಡ, ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ವಿಜಯೇಂದ್ರ ತಂದೆ, ಮಾಜಿ ಸಿಎಂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದರು. ಈ ಬಗ್ಗೆ ಮಾತನಾಡುತ್ತಾ ವಿಜಯೇಂದ್ರ ಅವರು, ವರುಣ ಕ್ಷೇತ್ರದಿಂದ ಸ್ಪರ್ಧೆ ಎಂಬ ಗೊಂದಲಕ್ಕೆ ಯಡಿಯೂರಪ್ಪ ಅವರು ತೆರೆ ಎಳೆದಿದ್ದಾರೆ ಎಂದರು.

ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ತಂದೆ ಬಿಎಸ್ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಜಿಲ್ಲೆಯ ಶಿಕಾರಿಪುರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ವರುಣ ಕ್ಷೇತ್ರದಿಂದ ಸ್ಪರ್ಧೆ ಎಂಬ ಗೊಂದಲಕ್ಕೆ ಯಡಿಯೂರಪ್ಪ ಅವರು ತೆರೆ ಎಳೆದಿದ್ದಾರೆ. ಶಿಕಾರಿಪುರ ಯಡಿಯೂರಪ್ಪ ಸ್ಪರ್ಧಿಸುತ್ತಿದ್ದ ಕ್ಷೇತ್ರವಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ಯಡಿಯೂರಪ್ಪ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಕ್ಷೇತ್ರದಿಂದ ನನಗೆ ವರಿಷ್ಠರು ಟಿಕೆಟ್ ಘೋಷಣೆ ಮಾಡಬೇಕಿದೆ. ಈ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಶಿಕಾರಿಪುರ ಮಾತ್ರವಲ್ಲ ರಾಜ್ಯದಲ್ಲೂ ಪಕ್ಷ ಸಂಘಟನೆ ಮಾಡುತ್ತೇನೆ. ಕಾರ್ಯಕರ್ತರ ಹುಮ್ಮಸ್ಸು ನೋಡಿ ಖುಷಿ ಆಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಮೈಸೂರಿನ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ ಆಗಿದ್ದು ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಬಿವೈ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮಾ.30 ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸುಳಿವು ನೀಡಿದ್ದರು. ಬಳಿಕ ಯು ಟರ್ನ್ ಹೊಡೆದ ಅವರು, ಯಾವುದೇ ಕಾರಣಕ್ಕೂ ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆವರೆಗು ಕಾದು ನೋಡಬೇಕಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Maneka Gandhi: ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಬಳಸಿದರೆ ಮಹಿಳೆಯ ದೇಹ ಸೌಂದರ್ಯ ದೀರ್ಘವಾಗಿರುತ್ತದೆ – ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ

ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತಾನೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂದು ಒತ್ತಡ ಇದೆ. ಆದರೆ ವರುಣ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ನನ್ನ ಕ್ಷೇತ್ರ ಶಿಕಾರಿಪುರದಲ್ಲೇ ಸ್ಪರ್ಧಿಸಬೇಕು ಎಂದು ಸೂಚಿಸಿದ್ದೇನೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದರು.

ಹುಲಿ ಜೊತೆ ಹುಲಿಯೇ ಸ್ಪರ್ಧೆ ಮಾಡಲಿ ಎಂಬ ಅಭಿಪ್ರಾಯವೂ ಬಿಜೆಪಿ ಕಾರ್ಯಕರ್ತರಲ್ಲಿದೆ. ಹುಲಿ ಜೊತೆ ಆಡು ಮರಿಯನ್ನು ಸ್ಪರ್ಧೆಗೆ ಬಿಡಬೇಡಿ. ಹುಲಿಯನ್ನು ಹೊಡೆಯಲು ಹುಲಿಯೆ ಬೇಕು. ಕ್ಷೇತ್ರಕ್ಕೆ ವಿಜಯೇಂದ್ರ ಬಂದರೆ ನಾನೇ 2 ಲಕ್ಷ ಕೊಡುತ್ತೇನೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ವೇಳೆ ಓರ್ವ ಕಾರ್ಯಕರ್ತ ಘೋಷಿಸಿದ್ದರು.

ವರುಣ ಅಪ್ಪ ಮಕ್ಕಳ ಪಕ್ಷ ಇದೆ. ಸಿದ್ದರಾಮಯ್ಯ ಜೊತೆ ಒಳ ಒಪ್ಪಂದ ಅನ್ನೋ ಕಳಂಕ ಇದೆ. ನೀವು ಸ್ಪರ್ಧೆ ಮಾಡಿದರೆ ಅದನ್ನು ತೊಡೆದು ಹಾಕಬಹುದು. ನೀವು ವರುಣ ಕ್ಷೇತ್ರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ವರುಣದಲ್ಲಿ ಕಟ್ಟಿ ಹಾಕಬಹುದು. ರಾಜ್ಯಾದ್ಯಂತ ಅವರು ಓಡಾಡಲು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಈ ಮೂಲಕ ಹಲವು ಸ್ಥಾನ ಕಾಂಗ್ರೆಸ್ ಕಳೆದುಕೊಳ್ಳುತ್ತದೆ ಎಂದು ಕುರುಬ, ಎಸ್​ಸಿ ಸೇರಿ‌ ಬೇರೆ ಬೇರೆ ಸಮುದಾಯದವರು ಒತ್ತಾಯ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 3 April 23