ದೆಹಲಿ ಮೇ 20: ನಟಿ, ರಾಜಕಾರಣಿ ಕಂಗನಾ ರಣಾವತ್(Kangana Ranaut), ಹಿಮಾಚಲ ಪ್ರದೇಶದ (Himachal Pradesh )ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್, ಮತ್ತು ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರವಿ ಠಾಕೂರ್ ಭಾಗವಹಿಸಿದ್ದ ಮೆರವಣಿಗೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಹಿಮಾಚಲ ಪ್ರದೇಶ ಘಟಕವು ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ಔಪಚಾರಿಕ ದೂರು ಸಲ್ಲಿಸಿದೆ. ಬಿಜೆಪಿಯ ಹಿಮಾಚಲ ಪ್ರದೇಶ ಕಚೇರಿಯ ಕಾರ್ಯದರ್ಶಿ ಪರ್ಮೋದ್ ಕುಮಾರ್ ಠಾಕೂರ್ ನೀಡಿದ ದೂರಿನಲ್ಲಿ, ಸ್ಥಳೀಯ ಕಾಂಗ್ರೆಸ್ ಪಕ್ಷವು ತಮ್ಮ ರ‍್ಯಾಲಿಗೆ ಅಡ್ಡಿಪಡಿಸಲು ಪೂರ್ವಯೋಜಿತ ಯೋಜನೆಯನ್ನು ರೂಪಿಸಿತ್ತು ಎಂದು ಆರೋಪಿಸಿದ್ದಾರೆ. ಅದೇ ವೇಳೆ ಬಿಜೆಪಿ ಕಾರ್ಯಕ್ರಮದ ಪಕ್ಕದಲ್ಲಿ ಕಾಂಗ್ರೆಸ್ ಸಭೆಗೆ ಅನುಮತಿ ನೀಡಿದ ಜಿಲ್ಲಾಡಳಿತದ ನಿರ್ಧಾರವು ಪ್ರಭಾವ ಮತ್ತು ಪಕ್ಷಪಾತಕ್ಕೆ ಸಾಕ್ಷಿ ಎಂದು ಬಿಜೆಪಿ ಹೇಳಿದೆ
ಬಿಜೆಪಿಯ ರಾಜಕೀಯ ಮೆರವಣಿಗೆಯು ಕಾಂಗ್ರೆಸ್ ಕಾರ್ಯಕರ್ತರಿಂದ ದಾಳಿಗೆ ಒಳಗಾಗಿದ್ದು, ಭಾಗವಹಿಸುವವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಇದರಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿದೆ. ಆಕ್ರಮಣಕಾರಿ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದ್ದು ಕಲ್ಲು ತೂರಾಟವನ್ನೂ ಮಾಡಿದರು.
“ರಾಜ್ಯದ ಅನಪೇಕ್ಷಿತ ಪ್ರಭಾವದಿಂದ ಲಾಹೌಲ್ ಮತ್ತು ಸ್ಪಿತಿಯ ಕಾಜಾದಲ್ಲಿ ಬಿಜೆಪಿಯ ರಾಜಕೀಯ ಸಭೆ ನಡೆಸಲು ಈಗಾಗಲೇ ನಿಗದಿಯಾಗಿದ್ದ ಸ್ಥಳದ ಪಕ್ಕದಲ್ಲಿ ರಾಜಕೀಯ ಸಭೆ ಆಯೋಜಿಸಲು ಜಿಲ್ಲಾಡಳಿತವು ಕಾಂಗ್ರೆಸ್‌ಗೆ ಅನುಮತಿ ನೀಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಸರ್ಕಾರ ಮಾದರಿ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ.
ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಲಾಹೌಲ್-ಸ್ಪಿಟಿ ಜಿಲ್ಲಾ ಕೇಂದ್ರವಾದ ಕಾಜಾದಲ್ಲಿ ಸ್ಥಳೀಯರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರು ಆಕೆಗೆ ಕಪ್ಪು ಬಾವುಟ ತೋರಿಸಿ ವಾಪಸ್ ಹೋಗುವಂತೆ ಘೋಷಣೆಗಳನ್ನು ಕೂಗಿದರು. ಸ್ಥಳೀಯ ನಿವಾಸಿಗಳ ಪ್ರತಿಭಟನೆಯನ್ನು ನಿಗದಿಪಡಿಸಲಾಗಿತ್ತು ಆದರೆ ಹೆಚ್ಚಿನ ಜನರು ಅದಕ್ಕೆ ಸೇರಿದ್ದು ಮುಖಾಮುಖಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಕಂಗನಾ ಬೇಗನೇ ಅಲ್ಲಿಂದ ಮಾತು ಮುಗಿಸಿ ಹೊರಟಿದ್ದರು.
ಇದನ್ನೂ ಓದಿ: ಎಎಪಿಯೇ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಬಹುದು: ಬಿಜೆಪಿ
ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಫೋಟೋಶಾಪ್ ಮಾಡಿದ ಚಿತ್ರವನ್ನು ತೋರಿಸುವ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಕಂಗನಾ ಕಳೆದ ವರ್ಷ ಹಂಚಿಕೊಂಡಿದ್ದರಿಂದ ಬೌದ್ಧ ಧರ್ಮವನ್ನು ಅನುಸರಿಸುವ ಸ್ಪಿತಿ ನಿವಾಸಿಗಳು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಶೇರ್ ಮಾಡಿದ್ದಕ್ಕೆ ಕಂಗನಾ ಕ್ಷಮೆ ಯಾಚಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ