Lok Sabha Polls: ನಿಮ್ಮ ಒಂದು ಮತ 2014ರಲ್ಲಿ ಭ್ರಷ್ಟ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆದಿತ್ತು; ಚುನಾವಣಾ ಪ್ರಚಾರದಲ್ಲಿ ಮೋದಿ

|

Updated on: May 04, 2024 | 4:07 PM

ಕೆಲವು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದರೂ ಇನ್ನೂ ಕೆಲವು ಹಂತದ ಚುನಾವಣೆಗಳು ಬಾಕಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು ಜಾರ್ಖಂಡ್​ನ ಪಲಮುದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

Lok Sabha Polls: ನಿಮ್ಮ ಒಂದು ಮತ 2014ರಲ್ಲಿ ಭ್ರಷ್ಟ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆದಿತ್ತು; ಚುನಾವಣಾ ಪ್ರಚಾರದಲ್ಲಿ ಮೋದಿ
ಜಾರ್ಖಂಡ್​ ಪಲಮುದಲ್ಲಿ ಮೋದಿ
Follow us on

ಪಲಮು: ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 4) ಜಾರ್ಖಂಡ್‌ನ ಪಲಮುದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜಭವನದಲ್ಲಿ ರಾತ್ರಿ ವಿರಾಮ ಪಡೆದ ನಂತರ ಮಾತನಾಡಿದ ಅವರು, ಪಲಮು ಮತ್ತು ಗುಮ್ಲಾದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಬಿಡಿ ರಾಮ್ ಮತ್ತು ಅರ್ಜುನ್ ಮುಂಡಾ ಪರವಾಗಿ ಮತಯಾಚನೆ ಮಾಡಿದರು.

ಈ ವೇಳೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, “ಇದು ಹುತಾತ್ಮ ನೀಲಾಂಬರ ಪೀತಾಂಬರ ನಾಡು. 2014ರಲ್ಲಿ ನಿಮ್ಮ ಒಂದು ಮತ ಕೆಲಸ ಮಾಡಿತ್ತು. ಆಗಿನ ನಿಮ್ಮ ಒಂದು ಮತದಿಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯವಾಯಿತು. ನೀವು ಕಾಂಗ್ರೆಸ್​ನ ಭ್ರಷ್ಟ ಸರ್ಕಾರವನ್ನು ತೊಡೆದುಹಾಕಿದ್ದೀರಿ” ಎಂದು ಹೇಳಿದರು.

ಇದನ್ನೂ ಓದಿ: PM Modi Interview: 370ನೇ ವಿಧಿ ರದ್ದುಪಡಿಸಿ ಸಂವಿಧಾನಕ್ಕೆ ಶ್ರೇಷ್ಟ ಸೇವೆ ಸಲ್ಲಿಸಿದ್ದೇನೆ; ಪ್ರಧಾನಿ ಮೋದಿ

“ನಿಮ್ಮ ಒಂದು ಮತದ ಮೌಲ್ಯವನ್ನು ಅರ್ಥ ಮಾಡಿಕೊಂಡು ತಪ್ಪದೇ ಮತದಾನ ಮಾಡಿ. ನೀವು ಮತ ಹಾಕಿ ನಮ್ಮನ್ನು ಗೆಲ್ಲಿಸಿದ್ದರಿಂದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಲು ಸಹಾಯವಾಯಿತು, ಭಯೋತ್ಪಾದನೆಯನ್ನು ನಾಶಮಾಡಲಾಯಿತು” ಎಂದು ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಬಿಹಾರ, ಆಂಧ್ರಪ್ರದೇಶದಲ್ಲಿ ಪಶುಪತಿಯಿಂದ ತಿರುಪತಿಯವರೆಗೆ ಪ್ರತಿದಿನ ನಕ್ಸಲೀಯರು ಭಯೋತ್ಪಾದನೆಯನ್ನು ಹರಡುತ್ತಿದ್ದರು. ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಅವರ ಮಕ್ಕಳು ಕೆಟ್ಟ ಸಹವಾಸದಿಂದ ಪ್ರಭಾವಿತರಾಗಿ ಆಯುಧಗಳನ್ನು ಹಿಡಿದು ಕಾಡಿನತ್ತ ಓಡುತ್ತಿದ್ದರು. ನಿಮ್ಮ ಮತವು ಚಿಕ್ಕ ಮಕ್ಕಳನ್ನು ಉಳಿಸಿದೆ ಮತ್ತು ಅವರ ತಾಯಂದಿರ ಭರವಸೆಯನ್ನು ಈಡೇರಿಸಿದೆ, ಇದು ಒಂದು ಮತದ ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

“ಕಳೆದ 25 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಕಲೆ ಇಲ್ಲ. ನನಗೆ ಸ್ವಂತ ಮನೆ ಅಥವಾ ಸೈಕಲ್ ಕೂಡ ಇಲ್ಲ. ಭ್ರಷ್ಟ ಜೆಎಂಎಂ, ಕಾಂಗ್ರೆಸ್ ನಾಯಕರು ತಮ್ಮ ಮಕ್ಕಳಿಗಾಗಿ ಅಪಾರ ಆಸ್ತಿಯನ್ನು ಮಾಡಿಟ್ಟಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi Interview: ‘ದೇಶಕ್ಕೆ ಇಂತಹ ಮಾಧ್ಯಮ ಬೇಕು’: ಟಿವಿ9 ಡಿಜಿಟಲ್ ಹಾಡಿ ಹೊಗಳಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 3) ಸಂಜೆ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ 1.5 ಕಿಮೀ ಮೆಗಾ ರೋಡ್‌ಶೋ ನಡೆಸಿದರು. ಪ್ರಧಾನಿಯವರನ್ನು ಸ್ವಾಗತಿಸಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ರಾಂಚಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಸಂಜಯ್ ಸೇಠ್ ಅವರನ್ನು ಬೆಂಬಲಿಸಿ ಪ್ರಧಾನಿ ಮೋದಿ ರಾಂಚಿಯಲ್ಲಿ ರೋಡ್ ಶೋ ನಡೆಸಿದರು.

ಜಾರ್ಖಂಡ್ 14 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಬಿಜೆಪಿ 11 ಕ್ಷೇತ್ರಗಳನ್ನು ಗೆದ್ದಿತ್ತು. ಅದರ ಮಿತ್ರ AJSU ಪಕ್ಷವು 2019ರಲ್ಲಿ ಒಂದು ಸ್ಥಾನವನ್ನು ಗೆದ್ದಿದೆ. ಉಳಿದ ಎರಡರಲ್ಲಿ – ಒಂದು ಕಾಂಗ್ರೆಸ್‌ನಿಂದ ಮತ್ತು ಇನ್ನೊಂದು JMM ಗೆ ಪಾಲಾಗಿತ್ತು. 2019ರಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 12 ಸ್ಥಾನಗಳನ್ನು ಗೆದ್ದುಕೊಂಡಿತು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನವನ್ನು ಪಡೆದುಕೊಂಡವು.

ಜಾರ್ಖಂಡ್ ಮತದಾನ ಯಾವಾಗ?:

ರಾಂಚಿಯಲ್ಲಿ ಮೇ 25ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ 4 ಹಂತಗಳಲ್ಲಿ ಚುನಾವಣೆ ನಡೆಯಲಿದೆ- ಮೇ 13, 20, 25 ಮತ್ತು ಜೂನ್ 1 ರಂದು ಚುನಾವಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ