ಗುವಾಹಟಿ: ಮಣಿಪುರದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆ (Manipur Assembly Election 2022) ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಹೀಗೆ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಪ್ರತಿಭಟನೆ, ಹಿಂಸಾಚಾರ ಶುರು ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಮಣಿಪುರ ಸಿಎಂ ಎನ್. ಬಿರೆನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ. ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಅನೇಕರಿಗೆ ಅವಕಾಶ ಸಿಗದೆ ಇರುವುದೇ ಈ ಪ್ರತಿಭಟನೆಗೆ ಕಾರಣವಾಗಿದೆ.
ಮಣಿಪುರ ರಾಜ್ಯದ ವಿವಿಧೆಡೆ ಬಿಜೆಪಿ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತಿಭಟನಾಕಾರರು ಪ್ಲೇಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದಾರೆ. ಇಂಫಾಲ್ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು ತಮಗೆ ಟಿಕೆಟ್ ಸಿಕ್ಕೇಸಿಗುತ್ತದೆ ಎಂದು ಬಲವಾಗಿ ಭರವಸೆ ಇಟ್ಟುಕೊಂಡಿದ್ದ ಬಿಜೆಪಿ ಮುಖಂಡರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ. ಮೂಲ ಬಿಜೆಪಿಗರಿಗೆ ನಿರಾಸೆ ಮಾಡಿ, ಪಕ್ಷಾಂತರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಣಿಪುರದಲ್ಲಿ ಎಲ್ಲ 60 ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ ಬಿಜೆಪಿ ನಿನ್ನೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಸುಮಾರು 10 ನಾಯಕರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ. ಮಣಿಪುರ ಸಿಎಂ ಎನ್. ಬಿರೆನ್ ಸಿಂಗ್ ಅವರು ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರ ಹಿಂಗಾಂಗ್ನಿಂದ ಸ್ಪರ್ಧಿಸಲಿದ್ದಾರೆ. ಹಾಗೇ ಮತ್ತೊಬ್ಬ ಪ್ರಮುಖ ಸಚಿವ ಬಿಸ್ವಜಿತ್ ಸಿಂಗ್, ತೊಂಗ್ಜು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಾಗೇ, ಮಾಜಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಸೋಮತೈ ಸೈಜಾ, ಉಖ್ರುಲ್ನಿಂದ ಸ್ಪರ್ಧಿಸಲಿದ್ದಾರೆ.
Imphal, Manipur | Security tightened at BJP office after the party named candidates for Assembly elections 2022, leaving many disappointed pic.twitter.com/vWdAnHcDfc
— ANI (@ANI) January 30, 2022
2017ರ ಚುನಾವಣೆಯಲ್ಲಿ ಮಣಿಪುರದಲ್ಲಿ ಬಿಜೆಪಿ 21 ಕ್ಷೇತ್ರಗಳನ್ನು ಗೆದ್ದಿತ್ತು. ಅದಾದ ಬಳಿಕ ಸಣ್ಣ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತ್ತು. ಹಿಂದಿನ ಸರ್ಕಾರದಲ್ಲಿದ್ದ 19 ಶಾಸಕರಿಗೆ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್ ನೀಡಿದೆ. ಮೂವರನ್ನು ಕೈಬಿಟ್ಟಿದೆ. ಈ ಬಾರಿ ಕೇವಲ ಮೂವರು ಮಹಿಳೆಯರಿಗೆ ಮತ್ತು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಬಿಜೆಪಿಗೆ ಸೇರ್ಪಡೆಯಾಗಿರುವ ಗೋವಿಂದಾಸ್ ಕೊಂತೌಜಂ ಅವರಿಗೂ ಟಿಕೆಟ್ ಸಿಕ್ಕಿದೆ. ಈ ಬಾರಿ ಎರಡು ಹಂತದಲ್ಲಿ ಮಣಿಪುರದಲ್ಲಿ ಮತದಾನ ನಡೆಯಲಿದ್ದು, ಮತ ಎಣಿಕೆ ಮಾರ್ಚ್ 10ಕ್ಕೆ ಇದೆ.
ಇದನ್ನೂ ಓದಿ: Bulandshahr: ವೈದ್ಯರೊಬ್ಬರ ಎಂಟು ವರ್ಷದ ಮಗನ ಅಪಹರಣ, ಹತ್ಯೆ -ಕಾರಣ?
Published On - 9:58 am, Mon, 31 January 22