ಪಂಜಾಬ್​ ಸಚಿವರೆಷ್ಟು ಸಾಮಾನ್ಯರು: ಭಗವಂತ್ ಮಾನ್ ಸಂಪುಟ 7 ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ, 9 ಮಂದಿ ಕೋಟ್ಯಧೀಶರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 22, 2022 | 1:42 PM

ಪಂಜಾಬ್​ ಸಚಿವ ಸಂಪುಟದಲ್ಲಿರುವ 11 ಸಚಿವರ ಪೈಕಿ ಏಳು ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಪೈಕಿ ನಾಲ್ವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

ಪಂಜಾಬ್​ ಸಚಿವರೆಷ್ಟು ಸಾಮಾನ್ಯರು: ಭಗವಂತ್ ಮಾನ್ ಸಂಪುಟ 7 ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ, 9 ಮಂದಿ ಕೋಟ್ಯಧೀಶರು
ಪಂಜಾಬ್ ಸಚಿವರು ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್
Follow us on

ಚಂಡೀಘಡ: ಪಂಜಾಬ್​ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (Aam Admi Party – AAP) ಜನಮನ್ನಣೆ ಸಿಕ್ಕಿದೆ. ಪಕ್ಷದ ನಾಯಕ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಸಚಿವ ಸಂಪುಟವನ್ನೂ ರಚಿಸಿಕೊಂಡಿದ್ದಾರೆ. ಭಷ್ಟಾಚಾರ ಮತ್ತು ರಾಜಕೀಯ ಅಪರಾಧೀಕರಣದ ಬಗ್ಗೆ ದೊಡ್ಡದನಿಯಲ್ಲಿ ಪ್ರಸ್ತಾಪಿಸುತ್ತಿದ್ದ ಆಪ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಚಿವರ ಹಿನ್ನೆಲೆಯ ಬಗ್ಗೆ ಆಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms – ADR) ದತ್ತಾಂಶಗಳನ್ನು ಬಹಿರಂಗಪಡಿಸಿದೆ. ಈ ಮಾಹಿತಿಯ ಪ್ರಕಾರ ಪಂಜಾಬ್​ ಸಚಿವ ಸಂಪುಟದಲ್ಲಿರುವ 7 ಸಚಿವರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಪೈಕಿ ನಾಲ್ವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

ಮುಖ್ಯಮಂತ್ರಿ ಸೇರಿದಂತೆ ಎಲ್ಲ 11 ಸಚಿವರು ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್​ಗಳನ್ನು ಪಂಜಾಬ್ ಎಲೆಕ್ಷನ್ ವಾಚ್ ಮತ್ತು ಎಡಿಆರ್ ಸಂಸ್ಥೆಗಳು ಪರಿಶೀಲಿಸಿವೆ. ‘ಒಟ್ಟ 11 ಸಚಿವರ ಪೈಕಿ ಏಳು ಮಂದಿ (ಶೇ 64) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ನಾಲ್ವರು (ಶೇ 36) ಅತಿ ಗಂಭೀರ ಆರೋಪ ಇರುವುದನ್ನು ನಮೂದಿಸಿದ್ದಾರೆ’ ಎಂಬ ಸಂಗತಿ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

11 ಸಚಿವರ ಪೈಕಿ ಒಂಭತ್ತು ಜನರು (ಶೇ 82) ಕೋಟ್ಯಧೀಶರು. 11 ಸಚಿವರ ಸರಾಸರಿ ಆಸ್ತಿ ₹ 2.87 ಕೋಟಿ. ಈ ಪೈಕಿ ಹೋಶಿಯಾರ್​ಪುರ್ ಕ್ಷೇತ್ರದ ಬ್ರಮ್ ಶಂಕರ್ (ಜಿಂಪ) ಅತಿಹೆಚ್ಚು ಅಂದರೆ ₹ 8.56 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಭೋಹಾ (ಎಸ್​ಸಿ) ಕ್ಷೇತ್ರದ ಲಾಲ್​ ಚಂದ್ ಅತಿ ಕಡಿಮೆ ಅಂದರೆ ₹ 6.19 ಲಕ್ಷ ಆಸ್ತಿ ಘೋಷಿಸಿದ್ದಾರೆ. ಒಟ್ಟು 9 ಸಚಿವರು ಬಾಧ್ಯತೆಗಳನ್ನು (ಸಾಲ) ಘೋಷಿಸಿದ್ದಾರೆ. ಈ ಪೈಕಿ ಬ್ರಮ್ ಶಂಕರ್ (ಜಿಂಪ) ಅತಿಹೆಚ್ಚು ಅಂದರೆ ₹ 1.08 ಕೋಟಿ ಬಾಧ್ಯತೆ ಹೊಂದಿದ್ದಾರೆ.

6 ಸಚಿವರು (ಶೇ 55) 31ರಿಂದ 60 ವರ್ಷಗಳ ಮಿತಿಯಲ್ಲಿದ್ದಾರೆ. ಐವರು 51ರಿಂದ 60 ವರ್ಷಗಳ ಮಿತಿಯಲ್ಲಿದ್ದಾರೆ. 11 ಸಚಿವರ ಪೈಕಿ ಒಬ್ಬರು ಮಾತ್ರ ಮಹಿಳೆ. ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಎಲ್ಲ 117 ಅಭ್ಯರ್ಥಿಗಳ ಅಫಿಡವಿಟ್​ಗಳನ್ನು ಎಡಿಆರ್ ವಿಶ್ಲೇಷಿಸಿದೆ. ಈ ಪೈಕಿ 58 (ಶೇ 50) ಮಂದಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ. 27 ಜನರು (ಶೇ 23) ತಮ್ಮ ವಿರುದ್ಧ ಗಂಭೀರ ಸ್ವರೂಪದ ಅಪರಾಧಗಳು ದಾಖಲಾಗಿರುವ ಬಗ್ಗೆ ತಿಳಿಸಿಕೊಂಡಿದ್ದಾರೆ. 2017ರಲ್ಲಿ 16 ಜನರು (ಶೇ 14) ಅಪರಾಧ ಪ್ರಕರಣಗಳನ್ನು ಘೋಷಿಸಿದ್ದರು. ಈ ಪೈಕಿ 11 ಜನರು (ಶೇ 9) ತಮ್ಮ ವಿರುದ್ಧ ಗಂಭೀರ ಪ್ರಕರಣಗಳು ವರದಿಯಾಗಿರುವುದನ್ನು ಘೋಷಿಸಿದ್ದರು.

ಈ ಬಾರಿ ಜಯಗಳಿಸಿರುವ 117 ವಿಜೇತ ಅಭ್ಯರ್ಥಿಗಳ ಪೈಕಿ 87 (ಶೇ 74) ಮಂದಿ ಕೋಟ್ಯಧೀಶರು. 2017ರಲ್ಲಿ 95 (ಶೇ 81) ಅಭ್ಯರ್ಥಿಗಳು ಕೋಟ್ಯಧೀಶರಿದ್ದರು. ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷ 92, ಕಾಂಗ್ರೆಸ್ 18, ಶಿರೋಮಣಿ ಅಕಾಲಿದಳ 3, ಬಿಜೆಪಿ 2 ಮತ್ತು ಬಿಎಸ್​ಪಿ 1 ಸ್ಥಾನ ಗಳಿಸಿತ್ತು.