ನಾನು ಸತ್ಯವನ್ನಷ್ಟೇ ಹೇಳುತ್ತೇನೆ, ಸುಳ್ಳು ಕೇಳಬೇಕೆಂದರೆ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಭಾಷಣ ಕೇಳಿ: ರಾಹುಲ್ ಗಾಂಧಿ

| Updated By: Lakshmi Hegde

Updated on: Feb 15, 2022 | 5:47 PM

ಪಂಜಾಬ್​ ಜನರಿಗೆ ಅಷ್ಟೆಲ್ಲ ಭರವಸೆ ಕೊಟ್ಟ ಅರವಿಂದ್ ಕೇಜ್ರಿವಾಲ್​ ಕೊರೊನಾ ಹೆಚ್ಚಳದ ಸಂದರ್ಭದಲ್ಲಿ ಎಲ್ಲಿ ಮಾಯವಾಗಿದ್ದರು. ದೆಹಲಿ ಆಸ್ಪತ್ರೆಗಳಲ್ಲಿ ಆಗಿದ್ದೇನು? ಆಕ್ಸಿಜನ್ ಪೂರೈಕೆ ಮಾಡಿದ್ದು ಯಾರು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ನಾನು ಸತ್ಯವನ್ನಷ್ಟೇ ಹೇಳುತ್ತೇನೆ, ಸುಳ್ಳು ಕೇಳಬೇಕೆಂದರೆ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಭಾಷಣ ಕೇಳಿ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಫೆ.12 ರಂದು ಪಂಜಾಬ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Congress MP Rahul Gandhi) ಇಂದು ಚುನಾವಣಾ ಪ್ರಚಾರ ನಡೆಸಿದರು. ನಾನು ಸುಳ್ಳು ಭರವಸೆಗಳನ್ನು ಕೊಡುವುದಿಲ್ಲ. ಹಾಗೂ ಯಾರಿಗಾದರೂ ಸುಳ್ಳನ್ನೇ ಕೇಳಬೇಕು ಎಂಬ ಬಯಕೆ ಇದ್ದರೆ ಅವರು ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮತ್ತು ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್​ ಬಾದಲ್​ರ ಭಾಷಣ ಕೇಳಲಿ ಎಂದು ಹೇಳಿದ್ದಾರೆ.

ಪಟಿಯಾಲಾ ಜಿಲ್ಲೆಯ ರಾಜಪುರದಲ್ಲಿ, ನವಿ ಸೋಚ್​ ನವಾ ಪಂಜಾಬ್​ ಎಂಬ ಹೆಸರಿನ ಚುನಾವಣಾ ರ್ಯಾಲಿ ನಡೆಸಿದ ರಾಹುಲ್ ಗಾಂಧಿ, ನಾನು ಸುಳ್ಳು ಭರವಸೆಗಳನ್ನು ಯಾರಿಗೂ ಕೊಡುವುದಿಲ್ಲ. ಹಾಗೂ ಒಮ್ಮೆ ನಿಮಗೆಲ್ಲ ಆ ಸುಳ್ಳು ಕೇಳುವುದೇ ಪ್ರಿಯವಾಗಿದ್ದರೆ ದಯವಿಟ್ಟು ಮೋದಿ ಜೀ, ಬಾದಲ್​ ಜೀ, ಕೇಜ್ರಿವಾಲ್​ ಜೀ ಅವರ ಮಾತುಗಳನ್ನು ಕೇಳಿ. ಯಾಕೆಂದರೆ ನಾನು ಸತ್ಯವನ್ನೇ ಹೇಳಬೇಕು ಎಂಬ ಪಾಠವನ್ನು ಕಲಿತವನು ಎಂದು ಹೇಳಿದರು. ಅಷ್ಟೇ ಅಲ್ಲ, ಪಂಜಾಬ್​ನ್ನು ಅಪಾಯದಿಂದ ಪಾರುಮಾಡಲು ನಾವೆಲ್ಲರೂ ಒಗ್ಗಟ್ಟಾಗಬೇಕು.  ಪ್ರೀತಿ, ಸೋದರತ್ವ ಭಾವದಿಂದ ಇರಬೇಕು. ಪಂಜಾಬ್​ ಯುವಜನರಿಗೆ,  ಈ ರಾಜ್ಯ ಸಮೃದ್ಧವಾಗುವುದು ಮತ್ತು ಇಲ್ಲಿ ಶಾಂತಿ ನೆಲೆಸುವುದು ತುಂಬ ಮುಖ್ಯ. ಹೀಗಾಗಿ ಅವರು, ಅನನುಭವಿ ಪಕ್ಷವೆಲ್ಲ ಪಂಜಾಬ್​​ನಲ್ಲಿ ಆಡಳಿತ ಪ್ರಯೋಗ ನಡೆಸಲು ಬಿಡುವುದಿಲ್ಲ ಎಂದೂ ರಾಹುಲ್​ ಗಾಂಧಿ ಹೇಳಿದರು.

ಕೇಜ್ರಿವಾಲ್​ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಪಂಜಾಬ್​ ಜನರಿಗೆ ಅಷ್ಟೆಲ್ಲ ಭರವಸೆ ಕೊಟ್ಟ ಅರವಿಂದ್ ಕೇಜ್ರಿವಾಲ್​ ಕೊರೊನಾ ಹೆಚ್ಚಳದ ಸಂದರ್ಭದಲ್ಲಿ ಎಲ್ಲಿ ಮಾಯವಾಗಿದ್ದರು. ದೆಹಲಿ ಆಸ್ಪತ್ರೆಗಳಲ್ಲಿ ಆಗಿದ್ದೇನು? ಆಕ್ಸಿಜನ್ ಪೂರೈಕೆ ಮಾಡಿದ್ದು ಯಾರು? ಎಂದೂ ಪ್ರಶ್ನಿಸಿದರು. ಹಾಗೇ, ಹೋಶಿಯಾರ್​ಪುರ ಮತ್ತು ಗುರುದಾಸ್​ ಪುರಗಳಲ್ಲಿ ಚುನಾವಣಾ ರ್ಯಾಲಿ ನಡೆಸಿದ ರಾಹುಲ್ ಗಾಂಧಿ, ಪಂಜಾಬ್​ನ್ನು ಕಾಂಗ್ರೆಸ್​ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಕೂಡ ರಾಜ್ಯವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲಿದೆ ಎಂದು ಹೇಳಿದರು.

ಪಂಜಾಬ್​ನ 117 ವಿಧಾನಸಭಾ ಕ್ಷೇತ್ರಗಳಲ್ಲಿ ಫೆ.20ರಂದು ಚುನಾವಣೆ ನಡೆಯಲಿದೆ. ಮಾರ್ಚ್​ 10ಕ್ಕೆ ಮತ ಎಣಿಕೆ ಆಗಲಿದೆ. ಇಲ್ಲಿ ಈಗಾಗಲೇ ಆಡಳಿತದಲ್ಲಿರುವ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ಹೇಗಾದರೂ ಸರಿ ಈ ಬಾರಿಯಾದರೂ ಪಂಜಾಬ್​​ನ್ನು ತೆಕ್ಕೆಗೆ ಎಳೆದುಕೊಳ್ಳಬೇಕು ಎಂಬ ಆಶಯದೊಂದಿಗೆ ಮುನ್ನುಗ್ಗುತ್ತಿದೆ. ಈ ಬಾರಿ ಬಿಜೆಪಿ ಪಂಜಾಬ್​ನಲ್ಲಿ ಅಮರಿಂದರ್​ ಸಿಂಗ್​ ನೇತೃತ್ವದ ಪಂಜಾಬ್​ ಲೋಕ್​ ಕಾಂಗ್ರೆಸ್​ ಮತ್ತು ಸುಖ್​ದೇವ್ ಸಿಂಗ್​ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿ ದಳ್​ (ಸಂಯುಕ್ತ) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದೆ.

ಇದನ್ನೂ ಓದಿ: Uttar Pradesh Elections 2022: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 1 ಕೆಜಿ ತುಪ್ಪ, ಉಚಿತ ರೇಷನ್; ಅಖಿಲೇಶ್ ಯಾದವ್ ಭರವಸೆ

Published On - 5:45 pm, Tue, 15 February 22