ಬಿಜೆಪಿ ಸೇರಿದ್ದ ಕೇವಲ 6 ದಿನಗಳಲ್ಲಿ ವಾಪಸ್​ ಕಾಂಗ್ರೆಸ್​ಗೆ ಬಂದ ಶಾಸಕ; ಹೋಗಿದ್ಯಾಕೆ? ಬಂದಿದ್ಯಾಕೆ?

| Updated By: Lakshmi Hegde

Updated on: Jan 03, 2022 | 3:34 PM

ಚುನಾವಣೆಗೆ ತುಂಬ ದಿನಗಳು ದೂರವಿಲ್ಲ. ಈ ವೇಳೆ ಪಂಜಾಬ್​​ನಲ್ಲಿ ಹಲವು ರೀತಿಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಲಡ್ಡಿಯವರೊಂದಿಗೆ ಬಿಜೆಪಿ ಸೇರಿರುವ ಫತೇಜ್​ ಜಂಗ್​ ಸಿಂಗ್​ ಕೂಡ ವಾಪಸ್​ ಬರಬಹುದಾ ಎಂಬ ಪ್ರಶ್ನೆಯೂ ಎದ್ದಿದೆ.

ಬಿಜೆಪಿ ಸೇರಿದ್ದ ಕೇವಲ 6 ದಿನಗಳಲ್ಲಿ ವಾಪಸ್​ ಕಾಂಗ್ರೆಸ್​ಗೆ ಬಂದ ಶಾಸಕ; ಹೋಗಿದ್ಯಾಕೆ? ಬಂದಿದ್ಯಾಕೆ?
ವಾಪಸ್​ ಕಾಂಗ್ರೆಸ್​ಗೆ ಬಂದ ಬಲ್ವಿಂದರ್​ ಸಿಂಗ್​ ಲಡ್ಡಿ
Follow us on

ರಾಜಕಾರಣದಲ್ಲಿ ಪಕ್ಷಾಂತರವೆಂಬುದು ಸರ್ವೇ ಸಾಮಾನ್ಯವಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರುವುದು, ಮತ್ತೆ ಮರಳಿ ಮಾತೃ ಪಕ್ಷಕ್ಕೆ ಬರುವುದೆಲ್ಲ ನಡೆಯುತ್ತಲೇ ಇರುತ್ತವೆ. ಹಾಗೇ, ಇಲ್ಲೊಬ್ಬರು ಶಾಸಕ ಕಾಂಗ್ರೆಸ್​​ನಿಂದ ಬಿಜೆಪಿಗೆ ಸೇರಿ, ಕೇವಲ ಆರು ದಿನಗಳಲ್ಲಿ ಮತ್ತೆ ಮರಳಿ ಕಾಂಗ್ರೆಸ್​ಗೆ ಬಂದಿದ್ದಾರೆ. ಹೀಗೆ ಮಾಡಿದ್ದು, ಪಂಜಾಬ್​​ನ ಶಾಸಕ ಬಲ್ವಿಂದರ್​ ಸಿಂಗ್​ ಲಡ್ಡಿ(MLA Balwinder Laddi ).  

ಲಡ್ಡಿಯವರು ಶ್ರೀ ಹರಗೋಬಿಂದಪುರ ಕ್ಷೇತ್ರದ ಶಾಸಕರು. ಡಿಸೆಂಬರ್​ 28ರಂದು, ಕ್ವಾದಿಯಾನ್​ ಶಾಸಕ ಫತೇಹ್​ಜಂಗ್​ ಸಿಂಗ್​ ಜತೆಗೂಡಿ ದೆಹಲಿಯಲ್ಲಿ ಬಿಜೆಪಿ ಸೇರಿದ್ದರು. ಪಂಜಾಬ್​ ರಾಜ್ಯ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಸಮ್ಮುಖದಲ್ಲಿ ಇವರಿಬ್ಬರೂ ಬಿಜೆಪಿ ಸೇರಿದ್ದರು. ಆದರೆ ಅವರು ಭಾನುವಾರ ರಾತ್ರಿ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ ಮತ್ತು ಪಂಜಾಬ್​ ಎಐಸಿಸಿ ಉಸ್ತುವಾರಿ ಹರೀಶ್​ ಚೌಧರಿ ಸಮ್ಮುಖದಲ್ಲಿ ತಾವು ಮತ್ತೆ ಕಾಂಗ್ರೆಸ್​​ಗೆ ಮರಳಿದ್ದಾಗಿ ಹೇಳಿದ್ದಾರೆ.

ಶಾಸಕ ಬಲ್ವಿಂದರ್​ ಸಿಂಗ್​ ಲಡ್ಡಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೊಡಲು ಕಾಂಗ್ರೆಸ್​ ಹಿಂದೇಟು ಹಾಕಿದ್ದೇ ಅವರು ಕಾಂಗ್ರೆಸ್ ತೊರೆಯಲು ಕಾರಣ ಎಂದು ಮೂಲಗಳಿಂದ ತಿಳಿದುಬಂದಿತ್ತು. ಅಸಮಾಧಾನಗೊಂಡು ಬಿಜೆಪಿಗೆ ಸೇರಿದ್ದ ಅವರನ್ನು ವಾಪಸ್ ಪಕ್ಷಕ್ಕೆ ಕರೆತರಲು ಕಾಂಗ್ರೆಸ್​ನ ಮುಖಂಡರು ಪ್ರಯತ್ನ ಮಾಡುತ್ತಲೇ ಇದ್ದರು. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಟಿಕೆಟ್​ ನೀಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ. ಈಗ ಇದೇ ಕಾರಣಕ್ಕೆ ಬಲ್ವಿಂದರ್​ ಸಿಂಗ್​ ವಾಪಸ್​ ಬಂದಿದ್ದಾರೆ ಎನ್ನಲಾಗಿದೆ. ಪಂಜಾಬ್​​ನಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲೂ ಗೆದ್ದು, ಮತ್ತೊಂದು ಅವಧಿಗೆ ಆಡಳಿತ ಹಿಡಿಯುವ ಕಾತರ.

ಚುನಾವಣೆಗೆ ತುಂಬ ದಿನಗಳು ದೂರವಿಲ್ಲ. ಈ ವೇಳೆ ಪಂಜಾಬ್​​ನಲ್ಲಿ ಹಲವು ರೀತಿಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಲಡ್ಡಿಯವರೊಂದಿಗೆ ಬಿಜೆಪಿ ಸೇರಿರುವ ಫತೇಜ್​ ಜಂಗ್​ ಸಿಂಗ್​ ಕೂಡ ವಾಪಸ್​ ಬರಬಹುದಾ ಎಂಬ ಪ್ರಶ್ನೆಯೂ ಎದ್ದಿದೆ. ಕಾಂಗ್ರೆಸ್​​ನಲ್ಲಿದ್ದು 2021ರವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಇದೀಗ ಪಕ್ಷ ತೊರೆದು ಬೇರೆ ಪಕ್ಷವನ್ನೇ ಕಟ್ಟಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಘೋಷಣೆಯನ್ನೂ ಮಾಡಿದ್ದಾರೆ. ಅದು ಕಾಂಗ್ರೆಸ್​ಗೆ ಕಹಿತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಪ್​ ಪಕ್ಷವೂ ಕೂಡ ಪಂಜಾಬ್​ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಯೊಡ್ಡಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಮಹಿಳೆಯರ ಮದುವೆ ವಯಸ್ಸಿನ ಮಿತಿ ಏರಿಕೆ ಮಸೂದೆ ಪರಿಶೀಲಿಸುವ ಸಂಸದೀಯ ಸಮಿತಿಯಲ್ಲಿರುವುದು ಒಬ್ಬರೇ ಮಹಿಳೆ