ನವದೆಹಲಿ, ಡಿಸೆಂಬರ್ 3: ರಾಜಸ್ಥಾನ ವಿಧಾನಸಭೆ ಚುನಾವಣೆಯ (Rajasthan assembly election result 2023) ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ (BJP) ಬಹುಮತ ಗಳಿಸುವುದು ಬಹುತೇಕ ದೃಢಪಟ್ಟಿದೆ. ಆಡಳಿತಾರೂಢ ಕಾಂಗ್ರೆಸ್ (Congress) ಸುಮಾರು 70 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಜನ ಅಧಿಕಾರದಿಂದ ಕೆಳಗಳಿಸಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಮತ್ತೊಮ್ಮೆ ಮುಂದುವರೆದಿದೆ ಮತ್ತು ಕಾಂಗ್ರೆಸ್ ನಂತರ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಆದರೆ ಈ ಬಾರಿ ಕಾಂಗ್ರೆಸ್ ತೀರಾ ಹಿಂದುಳಿದಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರ ಅವರ ಜನಪ್ರಿಯ ಭರವಸೆಗಳನ್ನು ನಿರ್ಲಕ್ಷಿಸಿ, ರಾಜಸ್ಥಾನದ ಜನರು ಬಿಜೆಪಿ ಪರ ಮತ ಹಾಕಿದ್ದಾರೆ ಮತ್ತು ಕೇಸರಿ ಪಡೆಯನ್ನು ಗೆಲ್ಲಿಸಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು ಎಂಬ ಪ್ರಶ್ನೆಗೆ ರಾಜಕೀಯ ವಿಶ್ಲೇಷಕರು ಹಲವು ಉತ್ತರಗಳನ್ನು ನೀಡಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಪಕ್ಷದೊಳಗಿನ ಕಚ್ಚಾಟ. ಅನೇಕ ನಾಯಕರು ಬಂಡೆದ್ದಾಗ, ಭಿನ್ನಮತ ಪ್ರದರ್ಶಿಸಿದಾಗ ಗೆಹ್ಲೋಟ್ ಅವರನ್ನು ಸರಿಯಾಗಿ ನಿಭಾಯಿಸಲಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆ ಮತ್ತು ಅನೇಕ ಬಂಡಾಯ ನಾಯಕರು ಪಕ್ಷದ ವರ್ಚಸ್ಸನ್ನು ಹಾಳು ಮಾಡಿದರು.
ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ರಾಜಕೀಯ ಸಂಘರ್ಷವು ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿತ್ತು. ಇಬ್ಬರೂ ನಾಯಕರು ಜವಾಬ್ದಾರಿ ಮರೆತು ಪರಸ್ಪರ ಹೋರಾಟದತ್ತ ಹೆಚ್ಚು ಗಮನಹರಿಸುತ್ತಿರುವುದು ಕಂಡುಬಂದಿತ್ತು. ಸರ್ಕಾರ ರಚನೆಯಾದ ತಕ್ಷಣ ಇಬ್ಬರ ನಡುವಿನ ಜಟಾಪಟಿ ಶುರುವಾಗಿದ್ದು ಮುಗಿಯುವ ಲಕ್ಷಣ ಕಾಣಿಸಲೇ ಇಲ್ಲ. ಹಲವು ಬಾರಿ ಹೈಕಮಾಂಡ್ ಇಬ್ಬರ ಮನವೊಲಿಸಲು ಪ್ರಯತ್ನಿಸಿದರೂ, ಸ್ವತಃ ರಾಹುಲ್ ಗಾಂಧಿ ಕೂಡ ಚುನಾವಣಾ ಪ್ರಚಾರದ ವೇಳೆ ಇಬ್ಬರನ್ನೂ ಒಟ್ಟಿಗೆ ಕರೆತಂದು ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿದರೂ ಅವರ ಮನಸು ಒಂದಾಗಲಿಲ್ಲ. ಇದು ಜನರಲ್ಲಿ ಪಕ್ಷದ ಬಗ್ಗೆ ಭರವಸೆ ಹೊರಟುಹೋಗಲು ಕಾರಣವಾಯಿತು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲಿಗೆ ಸಿಎಂ ಅಶೋಕ್ ಗೆಹ್ಲೋಟ್ ಅವರ ದುರಹಂಕಾರವೂ ಕಾರಣ ಎನ್ನಲಾಗುತ್ತಿದೆ. ಅವರ ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಗೆಹ್ಲೋಟ್ ಅವರ ಸಹೋದ್ಯೋಗಿಗಳೇ ಅವರನ್ನು ದುರಹಂಕಾರಿ ಎಂದು ಆರೋಪಿಸಿದ್ದರು. ಕಳೆದ ವರ್ಷ ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್ನ ಅನೇಕ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸಿಎಂ ಕೇಳುತ್ತಿಲ್ಲ ಎಂದು ಆರೋಪಿಸಿದ್ದರು.
ರಾಜಸ್ಥಾನ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೂಡ ಪ್ರಮುಖ ವಿಷಯವಾಗಿತ್ತು. ಮಹಿಳೆಯರ ಮೇಲಿನ ಅನೇಕ ಅಪರಾಧಗಳ ಘಟನೆಗಳು ಚರ್ಚೆಗೆ ಬಂದವು. ಇದರಿಂದಾಗಿ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಮೂಲೆಗುಂಪು ಮಾಡಿತು. ಗೆಹ್ಲೋಟ್ ಸರ್ಕಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಬಿಜೆಪಿ ಬಿಂಬಿಸಿತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಕೆಲವು ಘಟನೆಗಳ ಬಗ್ಗೆ ಹೇಳಿಕೆ ನೀಡದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ; ಯಾರಾಗ್ತಾರೆ ಸಿಎಂ? ಅತಂತ್ರವಾದರೆ ವಸುಂಧರಾ, ಬಹುಮತ ಬಂದರೆ ಬಾಲಕನಾಥ್ ಸಿಎಂ?
ರಾಜಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವು ಗೆಹ್ಲೋಟ್ ಸರ್ಕಾರದ ಮೇಲೆ ಪರಿಣಾಮ ಬೀರಿತು. ಚುನಾವಣೆಯ ಸಮಯದಲ್ಲಿ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಯುವಕರ ಕೋಪಕ್ಕೆ ಗೆಹ್ಲೋಟ್ ಗುರಿಯಾಗಬೇಕಾಯಿತು. ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ, ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದವು. ಬಿಜೆಪಿ ಕೂಡ ಗೆಹ್ಲೋಟ್ ಕ್ರಮ ಕೈಗೊಂಡಿಲ್ಲ ಎಂದು ಪರಿಣಾಮಕಾರಿಯಾಗಿ ಆರೋಪ ಮಾಡಿತು. ಇದು ಕೂಡ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ ಉಂಟುಮಾಡಿತು.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ