ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೆ ಬಂದಿದೆ. ಒಂದು ಅವಧಿಯನ್ನು ಸಂಪೂರ್ಣಗೊಳಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎರಡನೇ ಅವಧಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಂಚರಾಜ್ಯಗಳಲ್ಲಿ ಪಂಜಾಬ್ ಹೊರತು ಪಡಿಸಿ ಇನ್ನುಳಿದ ಗೋವಾ, ಮಣಿಪುರ, ಉತ್ತರಾಖಂಡ್, ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಗೆದ್ದಿದೆ. ಹಾಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದರೂ ಇಡೀ ದೇಶ ಬಹುಪಾಲು ಜನರು ಹೆಚ್ಚು ಸಂಭ್ರಮಿಸಿದ್ದು ಯೋಗಿ ಗೆಲುವನ್ನು. ದಾಖಲೆ ಬರೆದ ಸಿಎಂ ಯೋಗಿಯವರಿಗೆ ಅನೇಕರು ಶುಭಾಶಯ ಕೋರುತ್ತಿದ್ದಾರೆ. ಹೀಗೆ ಶುಭಾಶಯ ಹೇಳಿದವರಲ್ಲಿ ಗಮನಸೆಳೆದಿದ್ದು, ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಮತ್ತು ಅವರ ಪುಟ್ಟ ಮಗಳು.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ (2022ರ ಜನವರಿಯಲ್ಲಿ) ಅಪರ್ಣಾ ಯಾದವ್ ಬಿಜೆಪಿ ಸೇರಿದ್ದಾರೆ. ಮುಲಾಯಂ ಸಿಂಗ್ ಎರಡನೇ ಪತ್ನಿಗೆ ಹುಟ್ಟಿದ ಮಗನ ಪತ್ನಿ ಇವರು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ, ದೇಶಕ್ಕಾಗಿ ಅವರು ಮಾಡುವ ಕೆಲಸಗಳಿಂದ ಪ್ರಭಾವಿತಳಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು. ಬಿಜೆಪಿ ಸೇರ್ಪಡೆಯಾಗಿರುವ ಇವರು ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ ಭರ್ಜರಿ ಮತಗಳಿಂದ ಗೆದ್ದು, ಯೋಗಿ ಇನ್ನೊಮ್ಮೆ ಮುಖ್ಯಮಂತ್ರಿ ಎಂಬುದು ಖಚಿತವಾಗುತ್ತಿದ್ದಂತೆ ಮಗಳೊಂದಿಗೆ ಬಂದು ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ರಿಗೆ ಶುಭಾಶಯ ಕೋರಿದ ಜತೆಗೆ, ತಮ್ಮ ಪುಟ್ಟ ಮಗಳೊಟ್ಟಿಗೆ ಸೇರಿ ಅವರಿಗೆ ಆರತಿ ಎತ್ತಿ, ಹಣೆಗೆ ತಿಲಕ ಇರಿಸಿದ್ದಾರೆ. ಇಲ್ಲಿ ಅಪರ್ಣಾ ಯಾದವ್ ಪುತ್ರಿ ತನ್ನ ಪುಟ್ಟ ಕೈನಿಂದ ಯೋಗಿ ಹಣೆಗೆ ತಿಲಕ ಇಡುವ ವಿಡಿಯೋ ಕೂಡ ವೈರಲ್ ಆಗಿದ್ದು, ನೆಟ್ಟಿಗರು ಸಿಕ್ಕಾಪಟೆ ಮೆಚ್ಚಿಕೊಂಡಿದ್ದಾರೆ. ಹೀಗೆ ತಿಲಕ ಇಡಲು ಅಪರ್ಣಾ ಯಾದವ್ ಮಗಳಿಗೆ ಸಹಾಯ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಯೋಗಿ ಜೀ ಕೂಡ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ.
#WATCH | Former CM Akhilesh Yadav’s relative & BJP leader Aparna Yadav along with her daughter put on ‘Tilak’ on CM Yogi Adityanath’s forehead* after party’s victory in #UPElectionResult2022 pic.twitter.com/Iygsbzmf0Y
— ANI UP/Uttarakhand (@ANINewsUP) March 10, 2022
ಚುನಾವಣೆ ಪೂರ್ವದಲ್ಲಿ ಹಲವು ದಿನಗಳಿಂದಲೂ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅಖಿಲೇಶ್ ಯಾದವ್ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಅಪರ್ಣಾ ಯಾದವ್ ಪತಿ ಪ್ರತೀಕ್ ಯಾದವ್ ರಾಜಕೀಯದಿಂದ ದೂರವೇ ಇದ್ದಾರೆ. ಆದರೆ ಇವರು ಮತ್ತು ಅಖಿಲೇಶ್ ಯಾದವ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳೂ ವ್ಯಾಪಕರವಾಗಿಯೇ ಕೇಳಿಬರುತ್ತಿತ್ತು. ಅಪರ್ಣಾ ಯಾದವ್ ಪದೇಪದೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಹೊಗಳುತ್ತಲೇ ಇದ್ದರು. ಅವರಿಗೆ ಯುಪಿ ಸರ್ಕಾರದಿಂದ ವೈ ಕೆಟಗೆರಿ ಭದ್ರತೆಯನ್ನೂ ನೀಡಲಾಗಿತ್ತು. ಅಂತಿಮವಾಗಿ ಅವರು ಬಿಜೆಪಿ ಸೇರ್ಪಡೆಯಾದರೂ, ತಮ್ಮ ಮೇಲೆ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಇದೆ ಎಂದು ಹೇಳಿದ್ದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಸೋಲು; ಗೆದ್ದ ಕ್ಷೇತ್ರ ಕರ್ಹಾಲ್ ತೊರೆದು, ಸಂಸದರಾಗಿಯೇ ಮುಂದುವರಿಯಲಿದ್ದಾರಂತೆ ಅಖಿಲೇಶ್ ಯಾದವ್