UP Assembly Polls: ಉತ್ತರ ಪ್ರದೇಶದಲ್ಲಿಂದು 5ನೇ ಹಂತದ ಮತದಾನ; ಬಿಜೆಪಿ ಪಾಲಿಗೆ ನಿರ್ಣಾಯಕ ಏಕೆ?

| Updated By: Lakshmi Hegde

Updated on: Feb 27, 2022 | 9:01 AM

ಇಂದು ಮತದಾನ ನಡೆಯುತ್ತಿರುವ ಅವಧ್​ ಪ್ರದೇಶದ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲೂ ಅಯೋಧ್ಯೆ ಅತ್ಯಂತ ಹೆಚ್ಚು ಕುತೂಹಲಕ್ಕೆ ಕಾರಣವಾದ ಕ್ಷೇತ್ರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅಸ್ತು ಅಂದ ಮೇಲೆ ಅಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಭರ್ಜರಿ ಅಭಿವೃದ್ಧಿ ಮಾಡುತ್ತಿದೆ.

UP Assembly Polls:  ಉತ್ತರ ಪ್ರದೇಶದಲ್ಲಿಂದು 5ನೇ ಹಂತದ ಮತದಾನ; ಬಿಜೆಪಿ ಪಾಲಿಗೆ ನಿರ್ಣಾಯಕ ಏಕೆ?
ಉತ್ತರ ಪ್ರದೇಶದಲ್ಲಿ ಮತದಾನ
Follow us on

ಲಖನೌ: ಇಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election) 5ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7ಗಂಟೆಯಿಂದ ಜನರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಇಂದು 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 6ರವರೆಗೆ ಇರಲಿದೆ.  ಅದಕ್ಕೆ ಸಂಬಂಧಪಟ್ಟ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

  1. ಈ ಹಂತದಲ್ಲಿ ಪ್ರಮುಖವಾಗಿ ಅಯೋಧ್ಯಾ, ಪ್ರಯಾಗ್​ರಾಜ್​, ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆ ಎಂದೇ ಕರೆಯಲ್ಪಟ್ಟಿದ್ದ ಅಮೇಠಿ ಮತ್ತು ರಾಯಬರೇಲಿಗಳಲ್ಲೂ ಮತದಾನ ನಡೆಯಲಿದೆ.  ಅದು ಬಿಟ್ಟರೆ ಸುಲ್ತಾನ್​ಪುರ, ಚಿತ್ರಕೂಟ, ಪ್ರತಾಪ್​ಗಢ್​, ಕೌಶಂಕಿ, ಪ್ರಯಾಗ್​ರಾಜ್​, ಬಾರಾಬಂಕಿ, ಬಹ್ರೇಚ್​​, ಶ್ರವಸ್ಟಿ ಮತ್ತು ಗೊಂಡಾಗಳಲ್ಲಿ ಇಂದು ಮತದಾನ ನಡೆಯುತ್ತಿದೆ. 12 ಜಿಲ್ಲೆಗಳಿಂದ ಒಟ್ಟು 2,24,77,494  ಮತದಾರರು ಇದ್ದು, 693 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  2. ಇಂದು ಮತದಾನ ನಡೆಯುತ್ತಿರುವ ಅವಧ್​ ಪ್ರದೇಶದ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲೂ ಅಯೋಧ್ಯೆ ಅತ್ಯಂತ ಹೆಚ್ಚು ಕುತೂಹಲಕ್ಕೆ ಕಾರಣವಾದ ಕ್ಷೇತ್ರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅಸ್ತು ಅಂದ ಮೇಲೆ ಅಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಭರ್ಜರಿ ಅಭಿವೃದ್ಧಿ ಮಾಡುತ್ತಿದೆ. ಇಲ್ಲಿ ಬಿಜೆಪಿಯಿಂದ ವಿ.ಪಿ.ಗುಪ್ತಾ, ಸಮಾಜವಾದಿ ಪಕ್ಷದಿಂದ ಪವನ್​ ಪಾಂಡೆ ಸ್ಪರ್ಧಿಸುತ್ತಿದ್ದಾರೆ. 2012ರಲ್ಲಿ ಈ ಕ್ಷೇತ್ರವನ್ನು ಪವನ್​ ಪಾಂಡೆ ಗೆದ್ದುಕೊಂಡಿದ್ದರು. ಅದರಲ್ಲೂ ಕೂಡ ಐದು ಬಾರಿ ಇಲ್ಲಿಂದ ಗೆದ್ದಿದ್ದ ಬಿಜೆಪಿ ನಾಯಕ ವೇದ್​ ಪ್ರಕಾಶ್​ ಗುಪ್ತಾರನ್ನು ಸೋಲಿಸಿ, ಜಯ ಸಾಧಿಸಿದ್ದರು.  ಆದರೆ 2017ರಲ್ಲಿ ಮತ್ತೆ ಸೋಲನುಭವಿಸಿದ್ದರು.
  3. ಹಿಂದುಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಪ್ರಯಾಗರಾಜ್​​ನಲ್ಲೂ ಕೂಡ ಇಂದು ಮತದಾನ ನಡೆಯಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಗೆಲ್ಲುವವರೆಗೂ ಕಾಂಗ್ರೆಸ್​ನ ಭದ್ರಕೋಟೆ ಎನ್ನಿಸಿದ್ದ ಅಮೇಠಿ ಕೂಡ ಇಂದಿನ ಕೇಂದ್ರಬಿಂದು. ಒಟ್ಟಾರೆ ಈ ಹಂತ ಬಿಜೆಪಿ ಪಾಲಿಗೆ ತುಂಬ ನಿರ್ಣಾಯಕ. ಯಾಕೆಂದ್ರೆ 2017ರಲ್ಲಿ ಇಲ್ಲಿನ 61 ಕ್ಷೇತ್ರಗಳಲ್ಲಿ 50ನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಸಮಾಜವಾದಿ ಪಕ್ಷದ ಪೈಪೋಟಿಯೂ ಸಿಕ್ಕಾಪಟೆ ಹೆಚ್ಚಾಗಿದೆ.
  4. ಈ ಐದನೇ ಹಂತದಲ್ಲಿ ಚುನಾವಣಾ ಕಣದಲ್ಲಿರುವವರ ಪೈಕಿ ಹಲವರು ಪ್ರಮುಖರು ಇದ್ದಾರೆ. ಅದರಲ್ಲಿ ಮುಖ್ಯವಾಗಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ. ಇವರು ಕೌಶಂಬಿ ಜಿಲ್ಲೆಯ ಸಿರಥು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಕ್ಷೇತ್ರದಿಂದ ಅಪನಾದಳ್​​ದ ಪಲ್ಲವಿ ಪಟೇಲ್​​ ಕಣದಲ್ಲಿದ್ದಾರೆ. ಇವರನ್ನು ಬಿಟ್ಟರೆ ಅಲಹಾಬಾದ್​ ಪಶ್ಚಿಮದಿಂದ ಸಚಿವ ಸಿದ್ಧಾರ್ಥ್​ ಸಿಂಗ್​​, ಪ್ರತಾಪ್​ಗಢ್​​ನಿಂದ ರಾಜೇಂದ್ರ ಸಿಂಗ್​ ಇತರರು ಇದ್ದಾರೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ; ಇಲ್ಲಿದೆ ತಜ್ಞರ ಸಲಹೆ

Published On - 9:00 am, Sun, 27 February 22