ಕೇಂದ್ರೀಯ ವಿದ್ಯಾಲಯ, ನವೋದಯ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 58,000 ಕ್ಕೂ ಹೆಚ್ಚು ಬೋಧಕ, ಬೋಧಕೇತರ ಹುದ್ದೆಗಳು ಖಾಲಿ ಇವೆಯೆಂದು ಶಿಕ್ಷಣ ಸಚಿವಾಲಯ ನೀಡಿದ ವರದಿ ತಿಳಿಸಿದೆ. ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಈ ಮಾಹಿತಿ ಕೊಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ 12,099 ಬೋಧಕ ಮತ್ತು 1,312 ಬೋಧಕೇತರ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ನೀಡಿರುವ ವರದಿಯಲ್ಲಿ ಜವಾಹರ್ ನವೋದಯ (Jawahar Navodaya) ವಿದ್ಯಾಲಯಗಳಲ್ಲಿ 3,271 ಶಿಕ್ಷಕರ ಹುದ್ದೆಗಳು ಮತ್ತು ವಸತಿ ಶಾಲೆಗಳಲ್ಲಿ 1,756 ಬೋಧಕೇತರ ಹುದ್ದೆಗಳ ಖಾಲಿ ಇರುವುದಾಗಿ ತಿಳಿದು ಬಂದಿದೆ.
ಉನ್ನತ ಶಿಕ್ಷಣ ಸಂಸ್ಥೆ ಹಾಗು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ(Kendriya Vidyalaya) ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಇಲ್ಲಿ 6,180 ಬೋಧಕ ಹುದ್ದೆಗಳು ಮತ್ತು 15,798 ಬೋಧಕೇತರ ಹುದ್ದೆಗಳು ಇನ್ನೂ ಭರ್ತಿಯಾಗಬೇಕಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (IIT) 4,425 ಬೋಧಕ ಹುದ್ದೆಗಳು ಖಾಲಿಯಿದ್ದರೆ, 5,052 ಬೋಧಕೇತರ ಹುದ್ದೆಗಳು ಖಾಲಿ ಇವೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ(IIEST) 2,089 ಬೋಧಕ ಹುದ್ದೆಗಳು ಮತ್ತು 3,773 ಬೋಧಕೇತರ ಹುದ್ದೆಗಳು ಖಾಲಿ ಇವೆ.
ಅದೇ ರೀತಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER) ಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಸಂಖ್ಯೆ 353 ಮತ್ತು 625.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ನಲ್ಲಿ 1,050 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: ಕೆಸಿಇಟಿಯ 10 ಟಾಪರ್’ಗಳಿಗೆ ಉಚಿತ ಶಿಕ್ಷಣ ನೀಡುವಂತೆ ಶಿಕ್ಷಣ ಸಚಿವಾಲಯ ಮನವಿ
“ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಸಂಬಂಧಪಟ್ಟ ಸಂಸ್ಥೆಯ ನೇಮಕಾತಿ ನಿಯಮಗಳ ಪ್ರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬೋಧನೆ–ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಮತ್ತು ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಮೂಲಕ ತಾತ್ಕಾಲಿಕ ಅವಧಿಗೆ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ತೊಡಗಿಸಿಕೊಂಡಿದ್ದಾರೆ. “ಎಂದು ಸರ್ಕಾರ್ ಹೇಳಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ