ಸಾಕಷ್ಟು ಜನರು ಕರಿಯರ್ ಬ್ರೇಕ್ ಪಡೆದ ವರ್ಷಗಳ ಬಳಿಕ ಮತ್ತೆ ಕೆಲಸಕ್ಕೆ ಮರಳಲು ತುಂಬಾ ಕಷ್ಟ ಪಡುತ್ತಿರುತ್ತಾರೆ. ರೆಸ್ಯೂಮ್‌ನಲ್ಲಿ ಉದ್ಯೋಗ ಅಂತರವಿರುವುದರಿಂದ ಸಂದರ್ಶನ ನೀಡಲು ಹಿಂದೇಟು ಹಾಕುತ್ತಿರುತ್ತಾರೆ. ಆದರೆ ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮಲ್ಲಿ ಉದ್ಯೋಗಕ್ಕೆ ಅಂತರವೇಕೆ ಎಂಬುದಕ್ಕೆ ಸರಿಯಾದ ಉತ್ತರವಿದ್ದರೆ ಹೆದರುವ ಅಗತ್ಯವಿಲ್ಲ. ಬದಲಾಗಿ ನೀವು ಕೆಲಸಕ್ಕೆ ಸೇರಲು ಬೇಕಾದ ಪೂರ್ವ ತಯಾರಿಯನ್ನು ನಡೆಸುವುದು ಅಗತ್ಯ.
ನೀವು ಯಾವುದೇ ಕಂಪನಿಯ ಸಂದರ್ಶನದಲ್ಲಿ ಭಾಗಿಯಾದರೂ ಕೂಡ ಬ್ರೇಕ್ ತೆಗೆದುಕೊಂಡಿರುವುದು ಏಕೆ ಎಂಬುದನ್ನೇ ಮೊದಲು ಕೇಳುತ್ತಾರೆ. ಆ ಸಮಯದಲ್ಲಿ ಸ್ಪಷ್ಟವಾಗಿ ಪ್ರಾಮಾಣಿಕತೆಯಿಂದ 1 ನಿಮಿಷದಲ್ಲಿ ಅವರಿಗೆ ಉತ್ತರ ನೀಡಿದರೆ ಉದ್ಯೋಗದ ಆಫರ್ ನಿಮ್ಮ ಪಾಲಾಗುವುದಂತೂ ಖಂಡಿತಾ.
ನೀವು ಈ ಮೇಲಿನ ಕಾರಣಕ್ಕಾಗಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಮತ್ತೆ ಕೆಲಸ ಪಡೆಯಲು ಬಯಸಿದರೆ ಪೂರ್ವ ತಯಾರಿ ತುಂಬಾ ಅಗತ್ಯ. ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದರೂ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಕೋರ್ಸ್‌ಗಳು, ಫ್ರೀಲಾನ್ಸ್ ಪ್ರಾಜೆಕ್ಟ್, ಸ್ವಯಂ ಅಧ್ಯಯನ, ಪಾರ್ಟ್-ಟೈಮ್ ಕೆಲಸ ಮಾಡುತ್ತಿರಿ. ಮುಖ್ಯವಾಗಿ ಆ ಕ್ಷೇತ್ರದಲ್ಲಿನ ಇತ್ತೀಚಿನ ತಂತ್ರಜ್ಞಾನ ಮತ್ತು ಟ್ರೆಂಡ್‌ಗಳ ಬಗ್ಗೆ ಅಪ್ಡೇಟ್ ತಿಳಿದಿರಲಿ.
ನೀವು ಒಂದು ಕಂಪನಿಯಲ್ಲಿ ಕೆಲಸ ತೊರೆದರೂ ಕೂಡ ಅಲ್ಲಿನ ಸಹೋದ್ಯೋಗಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಕೆಲಸದ ಬಗ್ಗೆ ಕರೆ ಮಾಡಿದಾಗೆಲ್ಲಾ ಮಾತನಾಡುತ್ತಿರಿ. ಇದರಿಂದ ಆ ಕಂಪನಿಯ ಜೊತೆಗೆ ಬೇರೆ ಎಲ್ಲಾದರೂ ಉದ್ಯೋಗಾವಕಾಶವಿದೆಯೇ ಎಂಬ ಮಾಹಿತಿಯನ್ನು ನೀವು ಮನೆಯಲ್ಲಿ ಕುಳಿತು ಪಡೆಯಬಹುದು.
ಕರಿಯರ್ ಬ್ರೇಕ್ ಪಡೆದ ವರ್ಷಗಳ ಬಳಿಕ ಮತ್ತೆ ಕೆಲಸಕ್ಕೆ ಮರಳಲು ಬಯಸಿದರೆ ಮೊದಲು ಜಾಬ್ಸ್ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಆಕ್ಟೀವ್ ಆಗಿರಿ. ಅದಕ್ಕಾಗಿ ಲಿಂಕ್ಡ್‌ಇನ್, ಟೈಮ್ಸ್‌ಜಾಬ್ಸ್‌ನಂತಹ ಕರಿಯರ್ ವೆಬ್‌ಸೈಟ್‌ಗಳಲ್ಲಿ ನಿಮ್ಮ ಪ್ರೊಫೈಲ್ ಅನ್ನು ಅಪ್ಡೇಟ್ ಮಾಡಿ. ಇತ್ತೀಚಿನ ತಂತ್ರಜ್ಞಾನ ಮತ್ತು ಟ್ರೆಂಡ್‌ಗಳ ಬಗ್ಗೆ ನಿಮಗೆ ತಿಳಿದುರುವುದನ್ನು ನಿಮ್ಮ ಪ್ರೊಫೈಲ್ ನಲ್ಲಿ ಸೇರಿಸಿಕೊಳ್ಳಿ.
ಇತ್ತೀಚಿಗಷ್ಟೇ ದೆಹಲಿಯ ವ್ಯಕ್ತಿಯೊಬ್ಬರು ಕರಿಯರ್ ಬ್ರೇಕ್ ಬಗ್ಗೆ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಬರೆದಿರುವಂತೆ, “ಇತ್ತೀಚೆಗೆ ನಾನು 26 ವರ್ಷದ ಅಭ್ಯರ್ಥಿಯನ್ನು ಸಂದರ್ಶಿಸಿದೆ. ಅವರ ಕೆಲಸದಲ್ಲಿ 15 ತಿಂಗಳ ಅಂತರವಿತ್ತು, ನಂತರ ನಾನು ಕೇಳಿದೆ ನಿಮ್ಮ ರೆಸ್ಯೂಮ್‌ನಲ್ಲಿ ಉದ್ಯೋಗ ಅಂತರ ಏಕೆ ಇದೆ ಎಂದು ನಿಮ್ಮ ಹಿಂದಿನ ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾರೆಯೇ? ಎಂದು ಆಗ ಆತ “ಇಲ್ಲ, ನನ್ನ ತಂದೆಯ ಅನಾರೋಗ್ಯದ ಕಾರಣ ನಾನು ಕೆಲಸವನ್ನು ತೊರೆದಿದ್ದೇನೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಅವರನ್ನು ನೋಡಿಕೊಳ್ಳಬೇಕಾಗಿತ್ತು, ಆದ್ದರಿಂದ ನಾನು ನನ್ನ ಊರಿಗೆ ಸ್ಥಳಾಂತರಗೊಂಡೆ” ಎಂದು ಉತ್ತರಿಸಿದರು.
ಇದನ್ನೂ ಓದಿ: ವಿದೇಶದಲ್ಲಿ MBBS ಓದುವ ಭಾರತೀಯರ ಗಮನಕ್ಕೆ, ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ
ಇದರ ನಂತರ ಸಂದರ್ಶನ ನಡೆಸುವವರು ಅವರನ್ನು “ನಿಮ್ಮ ತಂದೆ ಈಗ ಚೆನ್ನಾಗಿದ್ದಾರೆಯೇ, ಅವರಿಗೆ ಏನಾಯಿತು?” ಎಂದು ಕೇಳಿದರು. ಅಭ್ಯರ್ಥಿಯು “ಇಲ್ಲ, ತಂದೆ ಕೆಲವು ತಿಂಗಳ ಹಿಂದೆ ನಿಧನರಾದರು” ಎಂದು ಉತ್ತರಿಸಿದರು. ಅಭ್ಯರ್ಥಿಯು ತನ್ನ ತಂದೆಯೊಂದಿಗೆ ಕೊನೆಯ ದಿನಗಳಲ್ಲಿ ಸಮಯ ಕಳೆಯಲು ಕೆಲಸವನ್ನು ತೊರೆದಿದ್ದೇನೆ ಎಂದು ಹೇಳಿದರು. ಆ ಅಭ್ಯರ್ಥಿಯು, “ಉದ್ಯೋಗವನ್ನು ತೊರೆದಾಗ ನನಗೆ ವಿಷಾದವಿಲ್ಲ ಮತ್ತು ನನ್ನ ರೆಸ್ಯೂಮ್‌ನಲ್ಲಿನ ಉದ್ಯೋಗ ಅಂತರದ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದರು. ಅಭ್ಯರ್ಥಿಯ ನೇರ ನುಡಿಯಿಂದಾಗಿ ಕಂಪನಿ ತಕ್ಷಣವೇ ಅವರಿಗೆ ಕೆಲಸವನ್ನು ನೀಡಲು ನಿರ್ಧರಿಸಿತು.
ಆದ್ದರಿಂದ ನೀವು 6 ತಿಂಗಳು ಅಥವಾ 1,2 ವರ್ಷ ಕರಿಯರ್ ಬ್ರೇಕ್ ತೆಗೆದುಕೊಂಡಿದ್ದರೂ ಕೂಡ ಕಾರಣವನ್ನು ಸರಿಯಾಗಿ ತಿಳಿಸಿ. ಸಂದರ್ಶನದಲ್ಲಿ ಈ ವಿಚಾರವೇ ನಿಮಗೆ ಪ್ರಮುಖ ನೆಗೆಟಿವ್ ಅಂಶವಾಗಿದ್ದರೂ ಕೂಡ ನೀವು ಯಾವುದೇ ಕಾರಣಕ್ಕೆ ಭರವಸೆ ಕಳೆದುಕೊಳ್ಳಬೇಡಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ