Anju Sharma: ಪಿಯುಸಿಯಲ್ಲಿ ಫೇಲ್​​ ಆಗಿದ್ದ ವಿದ್ಯಾರ್ಥಿನಿ ಮೊದಲ ಪ್ರಯತ್ನದಲ್ಲೇ UPSC ಪಾಸ್

ಬಾಲ್ಯದಿಂದಲೂ ಅಧ್ಯಯನದಲ್ಲಿ ಹಿಂದುಳಿದಿದ್ದ ರಾಜಸ್ಥಾನದ ಭರತ್‌ಪುರದ ಅಂಜು ಶರ್ಮಾ ಪಿಯುಸಿಯಲ್ಲಿ ಅರ್ಥಶಾಸ್ತ್ರದಲ್ಲಿ ಫೇಲ್​ ಆಗಿದ್ದರು. ಆದರೆ ತಮ್ಮ ನ್ಯೂನತೆಗಳನ್ನು ಗುರುತಿಸಿ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ. ಇಂದು ಅವರು ಗುಜರಾತ್‌ನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರಿಯನ್ನು ತಲುಪುವ ಛಲ ಒಂದಿದ್ದರೆ ಏನು ಬೇಕಾದರೂ ಸಾಧ್ಯ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

Anju Sharma: ಪಿಯುಸಿಯಲ್ಲಿ ಫೇಲ್​​ ಆಗಿದ್ದ ವಿದ್ಯಾರ್ಥಿನಿ ಮೊದಲ ಪ್ರಯತ್ನದಲ್ಲೇ UPSC ಪಾಸ್
Ias Officer Anju Sharma

Updated on: Jun 22, 2025 | 4:23 PM

ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಬಾಲ್ಯದಿಂದಲೂ ಅಧ್ಯಯನದಲ್ಲಿ ಟಾಪರ್‌ಗಳಾಗಿದ್ದವರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಜನರು ಹೆಚ್ಚಾಗಿ ಭಾವಿಸುತ್ತಾರೆ. ಆದರೆ 10 ಮತ್ತು 12 ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಇನ್ನೂ ಐಎಎಸ್ ಆಗುತ್ತಿರುವ ವಿದ್ಯಾರ್ಥಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಪಿಯುಸಿ ಯಲ್ಲಿ ಫೇಲ್​​ ಆಗಿದ್ದರೂ ಕೂಡ ಛಲ ಬಿಡದೇ ಓದಿ ಐಎಎಸ್ ಆಗಿರುವ ಅಂಜು ಶರ್ಮಾ ಅವರ ಸ್ಟೋರಿ ಇಲ್ಲಿದೆ ನೋಡಿ.

ಕಲಿಕೆಯಲ್ಲಿ ಹಿಂದುಳಿದಿದ್ದ ಅಂಜು ಶರ್ಮಾ:

ರಾಜಸ್ಥಾನದ ಭರತ್‌ಪುರದಲ್ಲಿ ಜನಿಸಿದ ಅಂಜು ಶರ್ಮಾ ಬಾಲ್ಯದಿಂದಲೂ ಕಲಿಕೆಯಲ್ಲಿ ಹಿಂದುಳಿದಿದ್ದರು. 10 ನೇ ತರಗತಿ ಪ್ರಿ-ಬೋರ್ಡ್‌ನಲ್ಲಿ ಅನುತ್ತೀರ್ಣರಾಗಿದ್ದ ಅಂಜು, ಬಳಿಕ ಕಷ್ಟ ಪಟ್ಟು ಓದಿ 10ನೇ ತರಗತಿ ಪಾಸ್​​ ಆಗಿದ್ದರು. ಇದಲ್ಲದೇ ಪಿಯುಸಿಯಲ್ಲಿಯೂ ಅರ್ಥಶಾಸ್ತ್ರದಲ್ಲಿ ಫೇಲ್​ ಆಗಿದ್ದರು. ಆದರೂ ಕೂಡ ಛಲ ಬಿಡದ ಅಂಜು ತನ್ನ ನ್ಯೂನತೆಗಳನ್ನು ಗುರುತಿಸಿ ಅಧ್ಯಯನಕ್ಕಾಗಿ ಸಮಯ ಮೀಸಲಿಡುತ್ತಿದ್ದರು. ಇಲ್ಲಿಂದ ಹೊಸ ಹಾದಿಯನ್ನು ಕಂಡು ಕೊಂಡ ಅಂಜು ಬಿಎಸ್ಸಿಯಲ್ಲಿ ಪದವಿ ವೇಳೆ ಚಿನ್ನದ ಪದಕ ಪಡೆಯುವ ಮೂಲಕ ಟಾಪರ್​ ಆಗಿ ಮಿಂಚಿದ್ದಾರೆ. ಬಳಿಕ ತನ್ನ ಎಂಬಿಎ ಕೂಡ ಮುಗಿಸಿ ಯುಪಿಎಸ್‌ಸಿಯ ಕನಸು ಕಟ್ಟಿದ್ದರು.

ಮೊದಲ ಪ್ರಯತ್ನದಲ್ಲೇ UPSC ಪಾಸ್ :

1991 ರಲ್ಲಿ, ಅಂಜು ಕೇವಲ 22 ವರ್ಷ ವಯಸ್ಸಿನವಳಿದ್ದಾಗ, ಮೊದಲ ಪ್ರಯತ್ನದಲ್ಲೇ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದರು. ಈ ಮೂಲಕ ಯಶಸ್ಸಿನ ಹಾದಿಯಲ್ಲಿ ವೈಫಲ್ಯ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಅವರು ಸಾಬೀತುಪಡಿಸಿದರು.

ಇದನ್ನೂ ಓದಿ: ಏರ್ ಟ್ರಾಫಿಕ್ ಕಂಟ್ರೋಲರ್ ಕೆಲಸ ಪಡೆಯುವುದು ಹೇಗೆ? ಅರ್ಹತೆ ಮತ್ತು ಸಂಬಳದ ಮಾಹಿತಿ ಇಲ್ಲಿದೆ

ಗುಜರಾತ್ ಕೇಡರ್ ಅಧಿಕಾರಿ:

ಐಎಎಸ್ ಆದ ನಂತರ, ಅಂಜು ಶರ್ಮಾ ಅವರ ಮೊದಲ ಹುದ್ದೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಸಹಾಯಕ ಕಲೆಕ್ಟರ್ ಆಗಿತ್ತು. ಇದರ ನಂತರ, ಅವರು ಗಾಂಧಿನಗರ ಸೇರಿದಂತೆ ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಕಲೆಕ್ಟರ್, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇಂದು ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಈಮೂಲಕ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Sun, 22 June 25