ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳ (545 PSI recruitment exam scam) ಹಿನ್ನೆಲೆಯಲ್ಲಿ ಮರು ಪರೀಕ್ಷೆ ವಿಳಂಬವಾಗುತ್ತಿದೆ. ಇದರಿಂದ ಅಭ್ಯರ್ಥಿಗಳನ್ನು ಅತಂತ್ರದಲ್ಲಿ ಸಿಲುಕುವಂತೆ ಮಾಡಿದೆ. ಇನ್ನು ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ (Praveen Sood) ಅವರು 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ. 545 ಪಿಎಸ್‌ಐಗಳಿಗೆ ಮರು ಪರೀಕ್ಷೆ (PSI Re Exam) ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಪರೀಕ್ಷೆ ನಡೆಸದಂತೆ ನಮ್ಮನ್ನು ನಿರ್ಬಂಧಿಸಿದೆ. ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿದ್ದು, ಹೈಕೋರ್ಟ್‌ನ ಅಂತಿಮ ಆದೇಶ ಬಂದ ನಂತರದಲ್ಲಿ ಮರು ಪರೀಕ್ಷೆ ನಡೆಸಲಾಗುವುದು.ಎಂದು ಟ್ವೀಟ್ ಮಾಡಿದ್ದಾರೆ.
We have conducted exams for RSI (CAR/ DAR), Spl RSI KSRP and PSI KSISF (tom). We are ready to conduct re-examine for 545 PSIs but waiting for court order which has restrained us from doing so till disposal of case. Will abide by court decision.
— DGP KARNATAKA (@DgpKarnataka) January 28, 2023
545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆ ಕೋರ್ಟ್ ನಿಗಾದಲ್ಲಿ ನಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಅಶೋಕ್ ಎಸ್.ಕಿಣಗಿರವರಿದ್ದ ದ್ವಿಸದಸ್ಯ ಪೀಠ, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದೆ. ಅಲ್ಲದೆ, ಬೇರೊಂದು ಪೀಠದ ಮುಂದೆ ವಿಚಾರಣೆ ನಿಗದಿಗೆ ಸೂಚನೆ ನೀಡಿದೆ. ಪ್ರಕರಣದ ತನಿಖೆ ಕೋರ್ಟ್ ನಿಗಾದಲ್ಲಿ ನಡೆಯಬೇಕು ಮತ್ತು ತನಿಖೆಯ ವಿವರ ಸಲ್ಲಿಕೆ ಕೋರಿ ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದು ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.
ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರತನಿಖೆಯನ್ನು ಸಿಐಡಿಗೆ ವಹಿಸಿದೆ. 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್ಗಳಿಗೂ ಹಣದ ಹೊಳೆ ಹರಿದಿದೆ. ತಿ ಬ್ರೋಕರ್ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗುತ್ತಿತ್ತು. ಅಷ್ಟೂ ಬ್ರೋಕರ್ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರುತ್ತಿತ್ತು.
ಸದ್ಯ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಿಂದ ಹಿಡಿದು ರಾಜಕೀಯ ವ್ಯಕ್ತಿಗಳು ಅರೆಸ್ಟ್ ಆಗಿದ್ದಾರೆ. ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್ಡಿಎ ಹರ್ಷಾ, ಸಿಬ್ಬಂದಿಗಳಾದ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಹೆಸರು ಕೂಡ ಅಕ್ರಮದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಎತ್ತಂಗಡಿ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರಿಗೆ ಕೋರ್ಟ್ ಜಾಮೀನು ಮಂಜೂರು ನೀಡಿದೆ.