
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission – KPSC) 2017-18ರ ಸಾಲಿನ ಗ್ರೂಪ್ 3 ಮತ್ತು ಗ್ರೂಪ್ ಬಿ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಯ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದೆ. ಇವರನ್ನು ಕರ್ನಾಟಕ ಆಡಳಿತ ಸೇವೆಗೆ (Karnataka Administration Service – KAS) ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಕೆಪಿಎಸ್ಸಿ ಜಾಲತಾಣದ ಮೂಲಕ ಫಲಿತಾಂಶ ನೋಡಬಹುದು. ವೈಯಕ್ತಿಕ ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ 1:3 ಅನುಪಾತದ ಅರ್ಹತಾ ಪಟ್ಟಿಯನ್ನು ಇದೀಗ ವೆಬ್ಸೈಟ್ಗೆ kpsc.kar.nic.in ಅಪ್ಲೋಡ್ ಮಾಡಲಾಗಿದೆ. ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ.
2020ರಲ್ಲಿ ಅಧಿಸೂಚನೆ ಹೊರಡಿಸಿದ್ದ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ 2017-18ರಲ್ಲಿ ಪರೀಕ್ಷೆ ಬರೆದಿದ್ದ 318 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ನೋಂದಣಿ ಸಂಖ್ಯೆಯ ಮೂಲಕ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಪಟ್ಟಿಯಲ್ಲಿ ನೋಂದಣಿ ಸಂಖ್ಯೆ ಇರುವ ಅಭ್ಯರ್ಥಿಗಳು ಕೆಪಿಎಸ್ಸಿ ಸೂಚಿಸಿರುವ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕಿದೆ. ವ್ಯಕ್ತಿತ್ವ ಪರೀಕ್ಷೆಗಾಗಿ (ಪರ್ಸನಾಲಿಟಿ ಟೆಸ್ಟ್) ದಿನಾಂಕ, ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಕೆಪಿಎಸ್ಸಿ ಪರೀಕ್ಷೆಯ ಫಲಿತಾಂಶ ವರ್ಷಗಟ್ಟಲೆ ತಡವಾಗಿರುವುದು ಪ್ರಶ್ನಿಸಿ ಸಾವಿರಾರು ಅಭ್ಯರ್ಥಿಗಳು ಕೆಪಿಎಸ್ಸಿ ಕಾರ್ಯಾಲಯ ಇರುವ ‘ಉದ್ಯೋಗ ಭವನ’ದ ಎದುರು ಕಳೆದ ಸೋಮವಾರ (ಜುಲೈ 25) ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾನಿರತರೊಂದಿಗೆ ಮಾತನಾಡಿದ್ದ ಕೆಪಿಎಸ್ಸಿ ನೂತನ ಕಾರ್ಯದರ್ಶಿ ವಿಕಾಸ್ ಕಿಶೋರ್, ಶೀಘ್ರ ಫಲಿತಾಂಶ ಪ್ರಕಟಿಸುವ ಭರವಸೆ ನೀಡಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಮುಂದಿನ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಿದೆ.
Published On - 9:21 am, Fri, 29 July 22