ಒಂದೇ ವರ್ಷದಲ್ಲಿ ಮೂರನೇ ಹಿಟ್ ಸಿನಿಮಾ ಕೊಡಲು ಸಜ್ಜಾದ ಸೂರ್ಯ

ಈಗೆಲ್ಲ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ಕೊಡುವುದು ಸಹ ಕಷ್ಟವಾಗಿದೆ. ಕೆಲವರಂತೂ ಮೂರು ನಾಲ್ಕು ವರ್ಷಕ್ಕೆ ಒಂದು ಸಿನಿಮಾ ಕೊಡುತ್ತಾರೆ ಅದೂ ಹಿಟ್ ಆಗುವುದು ಅನುಮಾನ, ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ಒಂದೇ ವರ್ಷದಲ್ಲಿ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾ ನೀಡಿರುವ ಜೊತೆಗೆ ಇದೀಗ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಆ ಸಿನಿಮಾ ಸಹ ಹಿಟ್ ಆಗುವ ನಿರೀಕ್ಷೆ ಇದೆ.

ಒಂದೇ ವರ್ಷದಲ್ಲಿ ಮೂರನೇ ಹಿಟ್ ಸಿನಿಮಾ ಕೊಡಲು ಸಜ್ಜಾದ ಸೂರ್ಯ
Suriya

Updated on: Sep 10, 2026 | 1:33 PM

ಮುಖ್ಯಾಂಶಗಳು

  • ಸೂರ್ಯ ತಮಿಳಿನ ಸ್ಟಾರ್ ನಟ.
  • ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ಕೊಡುವುದೇ ಅಪರೂಪ
  • ಆದರೆ ಸೂರ್ಯ ಒಂದೇ ವರ್ಷದಲ್ಲಿ ಮೂರು ಸಿನಿಮಾ ಕೊಡಲಿದ್ದಾರೆ.

ತಮಿಳಿನ ಸ್ಟಾರ್ ನಟ ಸೂರ್ಯ (Suriya), ಕಳೆದ ಆರೇಳು ವರ್ಷಗಳಿಂದಲೂ ಹಿಟ್ ಸಿನಿಮಾ ಇಲ್ಲದೆ ಒತ್ತಡಕ್ಕೆ ಒಳಗಾಗಿದ್ದರು. ‘ಜೈ ಭೀಮ್’ ಹಿಟ್ ಆಯ್ತಾದರೂ ಅದು ಕಮರ್ಶಿಯಲ್ ಸಿನಿಮಾ ಆಗಿರಲಿಲ್ಲ. ಅವರ ಬಹುನಿರೀಕ್ಷಿತ ಸಿನಿಮಾಗಳಾದ ‘ಕಂಗುವ’, ‘ರೆಟ್ರೊ’ ಇನ್ನೂ ಕೆಲ ಸಿನಿಮಾಗಳು ಹೀನಾಯ ಸೋಲು ಕಂಡಿದ್ದವು. ಕೆಲವರಂತೂ ಸೂರ್ಯ ಅವರ ಸಮಯ ಮುಗಿಯಿತು ಎಂದೆಲ್ಲ ಮಾತನಾಡಲು ಆರಂಭಿಸಿದ್ದರು. ಆದರೆ 2026 ಸೂರ್ಯ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿದೆ. ಈ ವರೆಗೆ ಸೂರ್ಯ ನಟನೆಯ ಎರಡು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿದ್ದು, ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ಮೂರನೇ ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ.

ಸೂರ್ಯ ನಟಿಸಿದ್ದ ‘ಕರುಪ್ಪು’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಕೌಟುಂಬಿಕ ಸಿನಿಮಾ ಆಗಿರುವ ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾನಲ್ಲಿ ಸೂರ್ಯ ನಟಿಸಿದರು. ಆ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳೇ ಇರಲಿಲ್ಲ. ಆದರೂ ಸಹ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಗಳಿಸಿದ್ದು, ಸಿನಿಮಾ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಒಂದರ ಹಿಂದೊಂದರಂತೆ ಎರಡು ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ಸೂರ್ಯ, ಇದೀಗ ಇದೇ ವರ್ಷ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ.

‘ಆವೇಶಂ’, ‘ರೋಮಾಂಚಂ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಲಯಾಳಂ ನಿರ್ದೇಶಕ ಜಿತು ಮಾಧವನ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ಇದೀಗ ಘೋಷಣೆ ಆಗಿದ್ದು, ಟೀಸರ್ ಸಹ ಬಿಡುಗಡೆ ಆಗಿದೆ. ಸಿನಿಮಾಕ್ಕೆ ‘ಸೀನ್’ ಎಂದು ಹೆಸರಿಡಲಾಗಿದ್ದು, ಸಿನಿಮಾನಲ್ಲಿ ಹಲವು ವರ್ಷಗಳ ಬಳಿಕ ಸೂರ್ಯ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸೀನ್’ ಸಿನಿಮಾವು ಕಾಮಿಡಿ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು. ಸೂರ್ಯ ಅವರು ಹಳೆಯ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹಲವು ಅನುಮಾನಗಳ ಬಳಿಕ ಶುರುವಾಗುತ್ತಿದೆ ಸೂರ್ಯ-ಲೋಕೇಶ್ ಸಿನಿಮಾ

ಸೂರ್ಯ ಅವರು ಸಖತ್ ಯಂಗ್ ಆಗಿ ‘ಸೀನ್’ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಹಾಸ್ಯಮಯವಾಗಿ ಇರುವ ಜೊತೆಗೆ ಆಕ್ಷನ್​​ ಸಹ ಇರಲಿದೆ ಎಂಬುದು ಟೀಸರ್​ನಿಂದ ತಿಳಿದು ಬರುತ್ತಿದೆ. ‘ಸೀನ್’ ಸಿನಿಮಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಈ ಸಿನಿಮಾ ಸಹ ಹಿಟ್ ಆದರೆ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸೂಪರ್ ಹಿಟ್ ಕೊಟ್ಟ ಹೆಗ್ಗಳಿಕೆ ಸೂರ್ಯ ಅವರ ಹೆಗಲೇರಲಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಗೆ ಸತತ ಜಯ ಕೊಟ್ಟ ವರ್ಷ ಇದಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us