ಖ್ಯಾತ ಮಲಯಾಳಂ ನಟಿ ಅನ್ನಾ ರಾಜನ್ (Anna Rajan ) ಅವರನ್ನು ಖಾಸಗಿ ಟೆಲಿಕಾಂ ಕಂಪೆನಿಯ ಉದ್ಯೋಗಿಯೊಬ್ಬರು ಶೋ ರೂಮ್ನಲ್ಲಿ ಕೂಡಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್ಗೆ ಡೂಪ್ಲಿಕೇಟ್ ಸಿಮ್ ಖರೀದಿಸಲು ತೆರಳಿದಾಗ ಈ ಘಟನೆ ನಡೆದಿದ್ದು, ಈ ಬಗ್ಗೆ ನಟಿ ದೂರು ದಾಖಲಿಸಿದ್ದಾರೆ. ನಕಲಿ ಸಿಮ್ ಖರೀದಿಸಲು ಶೋ ರೂಮ್ಗೆ ಹೋಗಿದ್ದ ವೇಳೆ ಅಲ್ಲಿನ ಉದ್ಯೋಗಿಯೊಬ್ಬರು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೆ ಅವರು ಶೋ ರೂಮ್ನ ಶಟರ್ ಎಳೆದು ನನ್ನನ್ನು ಕೂಡಿ ಹಾಕಿದರು. ಈ ವೇಳೆ ನಾನು ಪ್ರಶ್ನಿಸಿದಾಗ ಬೆದರಿಕೆಯೊಡ್ಡಿದ್ದರು ಎಂದು ಅನ್ನಾ ರಾಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಬಳಿಕ ಅಲುವಾ ಪೊಲೀಸ್ ಠಾಣೆಗೆ ಟೆಲಿಕಾಂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಈ ವೇಳೆ ಆತ ನನ್ನನಲ್ಲಿ ಕ್ಷಮೆಯಾಚಿಸಿದ್ದಾನೆ. ಆತನ ಭವಿಷ್ಯವನ್ನು ಗಮನದಲ್ಲಿರಿಸಿ ನಾನು ಪ್ರಕರಣವನ್ನು ಕೈ ಬಿಟ್ಟಿದ್ದೇನೆ ಎಂದು ಅನ್ನಾ ತಿಳಿಸಿದ್ದಾರೆ.
ಸದ್ಯ ಈ ಪ್ರಕರಣ ಇತ್ಯರ್ಥವಾದ ಬಳಿಕ ಬೆಳಕಿಗೆ ಬಂದಿದ್ದು, ಇದಾಗ್ಯೂ ಅನುಚಿತವಾಗಿ ಉದ್ಯೋಗಿಯ ಭವಿಷ್ಯದ ದೃಷ್ಟಿಯಲ್ಲಿ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅನ್ನಾ ರಾಜನ್ ನಿರಾಕರಿಸಿದ್ದಾರೆ.
ಮಾಲಿವುಡ್ನ ಸೂಪರ್ ಡೂಪರ್ ಹಿಟ್ ಸಿನಿಮಾ ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅನ್ನಾ ರಾಜನ್, ಆ ಬಳಿಕ ಮೋಹನ್ ಲಾಲ್ ಅಭಿನಯದ ವೆಲ್ಲಿಪಡತ್ತಿಂಡೆ ಪುಸ್ತಕಂ, ಮಮ್ಮುಟಿಯ ನಟಿಸಿದ ಮಧುರ ರಾಜ, ಸೂಪರ್ ಹಿಟ್ ಸಿನಿಮಾ ಅಯ್ಯಪ್ಪನುಂ ಕೊಶಿಯುಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಇಡುಕ್ಕಿ ಬ್ಲಾಸ್ಟರ್ಸ್ ಹಾಗೂ ತಲನಾರಿಝಾ ಚಿತ್ರಗಳಲ್ಲಿ ಅನ್ನಾ ರಾಜನ್ ಬಣ್ಣ ಹಚ್ಚುತ್ತಿದ್ದಾರೆ.