
ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚಿನ ದಿನಗಳಲ್ಲಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಯಲ್ಲಿರುವ ತ್ರಿಷಾ, ಈಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದ ಮೂಲಕ ಗಮನ ಸೆಳೆದಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ನಟ ಎಂ.ಜಿ. ರಾಮಚಂದ್ರನ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಾಜಿ ಸಿಎಂ ಜಯಲಲಿತಾ ಪಾತ್ರವನ್ನು ತ್ರಿಷಾ ಮಾಡಲಿದ್ದಾರೆ ಎಂಬ ಬಲವಾದ ವದಂತಿಗಳು ಹರಿದಾಡುತ್ತಿವೆ.
‘ಪುರಚಿ ತಲೈವರ್ ಎಂಜಿಆರ್’ ಹೆಸರಿನಲ್ಲಿ ಈ ಬಯೋಪಿಕ್ ರೂಪುಗೊಳ್ಳುತ್ತಿದ್ದು, ಎಂಜಿಆರ್ ಅವರ ಸಿನಿಮಾ ಪಯಣ ಹಾಗೂ ರಾಜಕೀಯ ಜೀವನದ ಏಳುಬೀಳುಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಎಂಜಿಆರ್ ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನದಲ್ಲಿ ಜಯಲಲಿತಾ ಅವರದ್ದು ಪ್ರಮುಖ ಪಾತ್ರ. ಬೆಳ್ಳಿಪರದೆಯ ಮೇಲೆ ಹಾಗೂ ರಾಜಕೀಯ ರಂಗದಲ್ಲಿ ದೇಶದ ಅತ್ಯಂತ ಪ್ರಭಾವಿ ನಾಯಕಿಯಾಗಿ ಬೆಳೆದ ಜಯಲಲಿತಾ ಅವರ ವಿವಿಧ ಘಟ್ಟಗಳನ್ನು ತಲುಪಿಸುವ ಸವಾಲಿನ ಪಾತ್ರಕ್ಕಾಗಿ ತ್ರಿಷಾ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಈ ಬಯೋಪಿಕ್ನಲ್ಲಿ ಕೇವಲ ಎಂಜಿಆರ್ ಹಾಗೂ ಜಯಲಲಿತಾ ಮಾತ್ರವಲ್ಲದೆ, ತಮಿಳುನಾಡು ರಾಜಕೀಯದ ದಿಗ್ಗಜರಾದ ಸಿ.ಎನ್. ಅಣ್ಣಾದೊರೈ ಹಾಗೂ ಎಂ. ಕರುಣಾನಿಧಿ ಅವರಂತಹ ಪ್ರಮುಖ ನಾಯಕರ ಪಾತ್ರಗಳೂ ಇರಲಿವೆ. ಜೆ.ಎಂ. ಬಷೀರ್ ಅವರು ಈ ಚಿತ್ರದಲ್ಲಿ ಎಂಜಿಆರ್ ಪಾತ್ರ ಪೋಷಿಸುತ್ತಿದ್ದು, ಶೀಘ್ರದಲ್ಲೇ ಚೆನ್ನೈನ ರಾಮಾಪುರಂನಲ್ಲಿ ಶೂಟಿಂಗ್ ಆರಂಭವಾಗಲಿದೆ.
ತ್ರಿಷಾ ಅವರು ಜಯಲಲಿತಾ ಅವರ ಪಾತ್ರವನ್ನು ಒಪ್ಪಿಕೊಂಡರೆ, ಚಿತ್ರದ ಮೇಲಿನ ನಿರೀಕ್ಷೆ ದ್ವಿಗುಣಗೊಳ್ಳುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಪಾತ್ರವರ್ಗದ ಕುರಿತು ಚಿತ್ರತಂಡದಿಂದ ಇನ್ನು ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಚರ್ಚೆಗಳು ಅಂತಿಮ ಹಂತದಲ್ಲಿದ್ದು, ತ್ರಿಷಾ ಈ ಪವರ್ಫುಲ್ ಪಾತ್ರಕ್ಕೆ ಹೌದು ಅನ್ನುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ತ್ರಿಷಾ ರಾಜಕೀಯ ಪ್ರವೇಶ ಫಿಕ್ಸ್? ಕೊಯಮತ್ತೂರು ಭೇಟಿ ವೇಳೆ ಜನಸಾಗರ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತ್ರಿಷಾ ಅವರಿಗೆ ಸಖತ್ ಬೇಡಿಕೆ ಇದೆ. ಕಮಲ್ ಹಾಸನ್, ಅಜಿತ್ ಕುಮಾರ್ ಮುಂತಾದ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಅವರು ಮಿಂಚಿದ್ದಾರೆ. ಮಲಯಾಳಂ ಹಾಗೂ ತೆಲುಗು ಸಿನಿಮಾಗಳಿಂದಲೂ ಅವರಿಗೆ ಅವಕಾಶಗಳು ಹೆಚ್ಚಿವೆ. ದಳಪತಿ ವಿಜಯ್ ಜೊತೆಗಿನ ಒಡನಾಟದ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.